ಪಿರಿಯಾಪಟ್ಟಣ: ಶೋಷಿತ ಸಮಾಜದ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಸ್.ರಾಮು ಹೇಳಿದರು. ಪಟ್ಟಣದ ತಾಪಂ ಕಚೇರಿಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು
ಎಸ್‌ಸಿ/ಎಸ್‌ಟಿ ಫಲಾನುಭಗಳಿಗೆ ಕೃಷಿ ಇಲಾಖೆಯ ಕೃಷಿ ಪರಿಕರಗಳನ್ನು ಅನ್ಯರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಬರುತ್ತಿದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವರಾಮೇಗೌಡರನ್ನು ತರಾಟೆಗೆ ತೆಗೆದುಕೊಂಡರು. ಶಿವರಾಮೇಗೌಡ ಪ್ರತಿಕ್ರಿಯಿಸಿ 2017-18ರ ಅವಧಿಯಲ್ಲಿ ಟ್ರೆçಲರ್, ಮಿನಿ ಟ್ರ್ಯಾಕ್ಟರ್‌ಗಳನ್ನು ಎಸ್‌ಸಿ ಮತ್ತು ಎಸ್‌ಟಿ ಪಂಗಡದವರಿಗೆ ವಿತರಿಸಲಾಗಿದೆ ಎಂದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ ಮಾತನಾಡಿ, ತಾಪಂ ಅಧ್ಯಕ್ಷರ ನೇತೃತ್ವದ ನಿಯೋಗವನ್ನು ರಚಿಸಿ ಫಲಾನುಭವಿಗಳ ಪರಿಶೀಲಿಸಬೇಕು. ಫಲಾನುಭವಿಗಳು ಕೃಷಿ ಪರಿಕರಗಳನ್ನು ಅನ್ಯರಿಗೆ ಮಾರಾಟ ಮಾಡಿಕೊಂಡಿದ್ದಲ್ಲಿ ಮಾರಾಟ ಮಾಡಿದವರು ಹಾಗೂ ಕೊಂಡವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದರು.
ಸಭೆಯಲ್ಲಿ ತಾಪಂ ಸದಸ್ಯ ಮಹದೇವ್ ಮಾತನಾಡಿ, ತಾಲೂಕಿನಲ್ಲಿ ಈ ವರ್ಷ ಬಿದ್ದ ಬಾರಿ ಮಳೆ ಮತ್ತು ಗಾಳಿಗೆ ವಿದ್ಯುತ್ ಮತ್ತು ತಂತಿಗಳು ಜೋತು ಬಿದ್ದಿದ್ದು, ಇದರಿಂದ ಜನಸಾಮಾನ್ಯರಿಗೆ ಅಪಾಯವಾಗುವ ಆತಂಕವಿದೆ. ಕೂಡಲೆ ಸೆಸ್ಕ್ ಅಧಿಕಾರಿಗಳು ಸರಿಪಡಿಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಎಇಇ ಕಲೀಂ, ಈ ಮೊದಲು ತಾಲೂಕಿನಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಮರ್ಪಕ ಸೇವೆ ನೀಡಲಾಗುತಿರಲಿಲ್ಲ. ಆದರೆ ಈಗ ಸಿಬ್ಬಂದಿ ಪೂರ್ಣಗೊಂಡಿದ್ದು ಇಂತಹ ಸಮಸ್ಯೆಗಳಿದ್ದರೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುತ್ತೇನೆಂದು ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ಕೆ.ಅರ್.ನಿರೂಪ ವಹಿಸಿದ್ದರು. ಉಪಾದ್ಯಕ್ಷೆ ಜಯಮ್ಮ, ಇಒ ಶೃತಿ, ತಾಪಂ ಸದಸ್ಯರಾದ ಮಲ್ಲಿಕಾರ್ಜುನ್, ಕುಂಜಪ್ಪಕಾರ್ನಡ್, ಪಂಕಜ, ಜಯಂತಿ , ಶಿವಮ್ಮ, ಶ್ರೀನಿವಾಸ್, ಮುತ್ತು, ಬಿಇಒ ಚಿಕ್ಕಸ್ವಾಮಿ ಮತ್ತಿತರರು ಹಾಜರಿದ್ದರು.