Advertisement

ರೈತರಿಗೆ ಹೊಸ ಸಾಲ ಸವಾಲು

10:54 AM Oct 20, 2019 | mahesh |

ಬೆಂಗಳೂರು: ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರೈತರಿಗೆ ಸಹಕಾರ ಸಂಘಗಳ ಮೂಲಕ ಹೊಸದಾಗಿ ಸಾಲ ನೀಡುವುದು ಸವಾಲಾಗಿದ್ದು, 5 ಸಾವಿರ ಕೋ.ರೂ. ಹೊಂದಿಸಿಕೊಳ್ಳುವಂತೆ ಹಣಕಾಸು ಇಲಾಖೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

Advertisement

ಹಿಂದಿನ ಸಮ್ಮಿಶ್ರ ಸರಕಾರದ ಸಾಲಮನ್ನಾ ಅನಂತರ ಹೊಸದಾಗಿ ಸಾಲ ಸಿಗುತ್ತಿಲ್ಲ. ಪ್ರವಾಹ ಪೀಡಿತ ಪ್ರದೇಶ ಗಳಲ್ಲಿ ಬೆಳೆನಷ್ಟ ಮಾಡಿಕೊಂಡ ರೈತರು ಸಾಲಕ್ಕಾಗಿ ಸಹಕಾರ ಸಂಘಗಳ ಮೊರೆ ಹೋಗಿದ್ದಾರೆ. ಹೀಗಾಗಿ ತತ್‌ಕ್ಷಣಕ್ಕೆ ಐದು ಸಾವಿರ ಕೋ. ರೂ. ಹೊಂದಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳ ರೈತರಿಗೆ ಹೊಸದಾಗಿ ಸಾಲ ಸಿಗುವಂತೆ ನೋಡಿ ಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚೆಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ವೇಳೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಾಲ ಮನ್ನಾ ಬಾಬ್ತು 750 ಕೋಟಿ ರೂ. ಬಾಕಿ ಇದ್ದು, ಶೀಘ್ರ ಬಿಡುಗಡೆ ಮಾಡುವಂತೆಯೂ ಸೂಚನೆ ನೀಡಲಾಗಿದೆ.

18.08 ಲಕ್ಷ ರೈತರ 7,715 ಕೋ.ರೂ. ಸಾಲ ಮನ್ನಾ ಲೆಕ್ಕಾಚಾರ ಮಾಡಲಾಗಿದ್ದು, ಇದುವರೆಗೆ 13.25 ಲಕ್ಷ ರೈತರ 5,908.64 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. 1.50 ಲಕ್ಷ ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ 750 ಕೋ. ರೂ. ಬಿಡುಗಡೆ ಮಾಡಬೇಕಾಗಿದೆ. 3.30 ಲಕ್ಷ ರೈತರ ಸಾಲ ಮನ್ನಾಗಾಗಿ 1065 ಕೋ.ರೂ.ಅಗತ್ಯವಿದೆ ಎಂದು ಸಹಕಾರ ಇಲಾಖೆ ಮಾಹಿತಿ ನೀಡಿದೆ.

Advertisement

2019-20ನೇ ಸಾಲಿನ ಬಜೆಟ್‌ನಲ್ಲಿ ಸಾಲ ಮನ್ನಾಕ್ಕೆ 6,150 ಕೋ.ರೂ. ಮೀಸಲಿಡಲಾಗಿತ್ತಾದರೂ 4,050 ಕೋ.ರೂ. ಮಾತ್ರ ಬಿಡುಗಡೆಯಾಗಿದೆ. 2,100 ಕೋ.ರೂ. ಬಜೆಟ್‌ ಬಾಬಿ¤ನಲ್ಲಿ ಉಳಿದಿದೆ. ಆದರೆ ಪ್ರವಾಹ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ಹಣ ಹೊಂದಾಣಿಕೆ ಕಷ್ಟವಾಗುತ್ತಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

ನಬಾರ್ಡ್‌ನಿಂದ ನೆರವು ನಿರೀಕ್ಷೆ
ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡುವ ಹೊಸ ಸಾಲದ ಆರ್ಥಿಕ ಹೊರೆ ತಗ್ಗಿಸಲು ನಬಾರ್ಡ್‌ ಮೊರೆ ಹೋಗಲು ರಾಜ್ಯ ಸರಕಾರ ನಿರ್ಧಾರ ಮಾಡಿದೆ. ರೀ ಫೈನಾನ್ಸಿಂಗ್‌ ಶೇ.85ರಷ್ಟು ಪಡೆ ಯಲು ಕೇಂದ್ರದ ಮೂಲಕ ಒತ್ತಡ ಹಾಕಲಾಗಿದೆ.

ಪ್ರಸಕ್ತ ವರ್ಷ 32 ಲಕ್ಷ ರೈತರಿಗೆ 13 ಸಾವಿರ ಕೋ.ರೂ. ಸಾಲ ನೀಡುವ ಗುರಿ ಇತ್ತು. ಜು.10ರಂದು ಸಾಲಮನ್ನಾ ಅವಧಿ ಮುಗಿಯುತ್ತಿದ್ದಂತೆ 5 ಲಕ್ಷ ರೈತರು 4,500 ಕೋ.ರೂ. ಹೊಸ ಸಾಲಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ಈಗ ಮತ್ತಷ್ಟು ರೈತರು ಬೇಡಿಕೆ ಇರಿಸಿದ್ದು, ಸರಕಾರ ಹಣ ಹೊಂದಿಸಬೇಕಾಗಿದೆ.

- ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next