Advertisement
ಜಿ.ಪಂ. ರಸ್ತೆಅರಂತೋಡಿನಿಂದ ತೊಡಿಕಾನದ ದ.ಕ. ಕೊಡಗು ಗಡಿಭಾಗದವರೆಗೆ ಇದು ಜಿ.ಪಂ. ರಸ್ತೆಯಾಗಿದೆ. ನಾಲ್ಕು ವರ್ಷಗಳ ಹಿಂದೆ 4 ಕೋಟಿ ರೂ. ವೆಚ್ಚದಲ್ಲಿ ಡಾಮರು, ಸೇತುವೆ ಹಾಗೂ ಮೋರಿ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸಲಾಗಿತ್ತು. ಆದರೂ ಗುತ್ತಿಗೆದಾರರು ಎಸ್ಟಿಮೇಟ್ ಪ್ರಕಾರ ಕೆಲಸ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಎಸ್ಟಿಮೇಟ್ ಪ್ರಕಾರ ತೊಡಿಕಾನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಬಳಿ ಕುಸಿದಿರುವ ಒಂದು ಮೋರಿಯನ್ನು ತೆಗೆದು ಕಿರು ಸೇತುವೆ ನಿರ್ಮಾಣ ಮಾಡಬೇಕಿತ್ತು. ಮೋರಿಯನ್ನು ತೆಗೆದು ಹೊಸತು ಕಟ್ಟಬೇಕಿತ್ತು. ತೊಡಿಕಾನ ದೇಗುಲ ಸಮೀಪ ಒಂದು ಬಸ್‌ಬೇ ನಿರ್ಮಿಸಬೇಕಾಗಿತ್ತು. ಎರಡು ವರ್ಷಗಳ ಕಾಲ ರಸ್ತೆ ನಿರ್ವಹಣೆಯನ್ನೂ ಮಾಡಬೇಕಿತ್ತು. ಎಸ್ಟಿಮೇಟ್ ಪ್ರಕಾರ ಕೆಲಸ ನಿರ್ವಹಿಸದ ಕಾರಣ ಜನರು ಸಮಸ್ಯೆ ಎದುರಿಸುವಂತಾಗಿದೆ. ಕಳೆದ ವರ್ಷ ಮೋರಿಗಳು ಕುಸಿದಿದ್ದು, ಅವುಗಳನ್ನು ಬದಲಾಯಿಸುವಂತೆ ಜಿ.ಪಂ.ಗೆ ಬರೆದರೂ ಕಾಮಗಾರಿ ಆರಂಭವಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅರಂತೋಡು – ತೊಡಿಕಾನ ರಸ್ತೆ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ಭಕ್ತರು, ಉತ್ಸವಾದಿ ಸಂದರ್ಭಗಳಲ್ಲಿ ಸಾವಿರಾರು ಜನರು ಆಗಮಿಸುತ್ತಾರೆ. ಆಗ ವಾಹನ ದಟ್ಟಣೆಯೂ ಜಾಸ್ತಿ ಇರುತ್ತದೆ. ಮೋರಿಗಳು ಕುಸಿದಿದ್ದು, ರಸ್ತೆ ಸಂಪರ್ಕ ಯಾವ ಸಂದರ್ಭದಲ್ಲಿ ಪೂರ್ಣವಾಗಿ ಕಡಿತಗೊಳ್ಳುವುದೋ ಎನ್ನುವ ಆತಂಕ ಎದುರಾಗಿದೆ. ಕೊಡಗು ಸಂಪರ್ಕ ರಸ್ತೆ
ಈ ರಸ್ತೆ ಕೊಡಗು ಜಿಲ್ಲೆಯ ತಲಕಾವೇರಿ, ಭಾಗಮಂಡಲಕ್ಕೆ ಸಂಪರ್ಕ ಕಲ್ಪಿಸುತ್ತದೆ. ತೊಡಿಕಾನ – ಪಟ್ಟಿ ರಸ್ತೆ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಭಾಗಮಂಡಲವನ್ನು ಸೇರಬಹುದು. ತೊಡಿಕಾನ ದೇವಾಲಯಕ್ಕೆ ಭೇಟಿ ನೀಡುವ ಕೆಲವು ಭಕ್ತರು ಈ ರಸ್ತೆ ಮೂಲಕ ತಲಕಾವೇರಿ, ಭಾಗಮಂಡಲಕ್ಕೆ ಪ್ರಯಾಣ ಬೆಳೆಸುತ್ತಾರೆ. ಮಾಣಿ -ಮೈಸೂರು ರಸ್ತೆ ಜೋಡುಪಾಲದಲ್ಲಿ ನೆರೆ ಹಾವಳಿಯಿಂದ ಪೂರ್ಣ ಹಾಳಾಗಿದ್ದು, ಲಘು ವಾಹನಗಳ ಸಂಚಾರಕ್ಕಾಗಿ ಶ್ರಮದಾನದ ಮೂಲಕ ದುರಸ್ತಿ ಮಾಡಲಾಗಿದೆ.
Related Articles
ತೊಡಿಕಾನದ ಹಾಲಿನ ಡೈರಿ ಪಕ್ಕ ಮೋರಿ ಕುಸಿದಿರುವುದು ಸಹಿತ ಕೆಲವು ಸಮಸ್ಯೆಗಳು ಈಗಾಗಲೇ ನನ್ನ ಗಮನಕ್ಕೆ ಬಂದಿವೆ. ಎಂಜಿನಿಯರ್ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು.
– ಹರೀಶ್ ಕಂಜಿಪಿಲಿ
ಜಿ.ಪಂ. ಸದಸ್ಯರು
Advertisement
ಪತ್ರ ಬರೆಯುತ್ತೇವೆತೊಡಿಕಾನ ಹಾಲು ಉತ್ಪಾದಕರ ಸಹಕಾರ ಸಂಘದ ಬಳಿ ಕುಸಿದ ಮೋರಿಯನ್ನು ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ದುರಸ್ತಿಪಡಿಸಬೇಕಾಗಿದೆ. ಜಿ.ಪಂ.ಗೆ ದೇವಸ್ಥಾನದ ವತಿಯಿಂದ ಪತ್ರ ಬರೆಯಲಾಗುವುದು.
– ಆನಂದ ಕಲ್ಲಗದ್ದೆ ಮ್ಯಾನೇಜರ್, ತೊಡಿಕಾನ ದೇವಸ್ಥಾನ ವಿಶೇಷ ವರದಿ