ಕೊಪ್ಪಳ: ಬೆಳಗಾವಿ ಜಿಲ್ಲೆಯಲ್ಲಿ ಗಡಿ ಸಮಸ್ಯೆಯಿದೆ. ಅದೊಂದು ಸೂಕ್ಷ್ಮ ವಿಚಾರ. ಆ ಜಿಲ್ಲೆಯನ್ನು ನಾವು ಇಬ್ಭಾಗ ಮಾಡಲ್ಲ. ಮಾಡುವುದೂ ಇಲ್ಲ. ಇದನ್ನು ಪ್ರತಿಯೊಬ್ಬ ಕನ್ನಡಿಗರು ತಿಳಿದುಕೊಳ್ಳಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಇನ್ನೂ ಬಳ್ಳಾರಿಯಿಂದ ವಿಜಯನಗರ ಜಿಲ್ಲೆಯನ್ನಾಗಿ ಮಾಡುವ ವಿಚಾರಕ್ಕೆ ನಾನು ಬೀದಿಯಲ್ಲಿ ನಿಂತುಕೊಂಡು ಹೇಳಲ್ಲ. ಆ ವಿಷಯ ಸಚಿವ ಸಂಪುಟಕ್ಕೆ ಬರುತ್ತೆ. ಆಗ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದರು.
ಕುಮಾರಸ್ವಾಮಿ ಅವರು ಬಿಎಸ್‌ವೈ ಪತ್ನಿ ಸಾವಿನ ಬಗ್ಗೆ ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಯಾರೂ ವಯಕ್ತಿಕ ವಿಷಯ ಮಾತನಾಡಬಾರದು. ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದರು.
ಸಿದ್ದರಾಮಯ್ಯ ಅವರು ನೆರೆ ಹಾನಿ ಸಂಬಂಧ ಬಿಜೆಪಿಗರಿಗೆ ಕೇಳಲು ಧಮ್ ಇಲ್ಲ ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಕಾರಜೋಳ, ಈ ಹಿಂದೆ 1994-95ರ ಅವಧಿಯಲ್ಲಿ ರಾಜ್ಯದಲ್ಲಿ ನೆರೆ ಬಂದಾಗ ಸಿದ್ದರಾಮಯ್ಯ ಅವರು ಏಷ್ಟು ಪರಿಹಾರ ಕೊಟ್ಟಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಆಗ ನೆರೆ ಹಾನಿಯಾದಾಗ ಜನರಿಗೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ. 2009- 10ನೇ ಸಾಲಿನಲ್ಲೂ ನೆರೆ ಹಾವಳಿಯಾಗಿತ್ತು. ಆಗ ನಾವು ಪರಿಹಾರ ಕೊಟ್ಟಿದ್ದೇವೆ. ಕೇಂದ್ರದ ಎನ್‌ಡಿಆರ್‌ಎಫ್ ನಿಯಮಾವಳಿ 3800 ರೂ. ಪರಿಹಾರ ಕೊಡಲು ಅವಕಾಶ ಇದೆ. ಆದರೆ ಇಷ್ಟು ಹಣದಲ್ಲಿ ಜನರಿಗೆ ಏನೂ ನೆರವಾಗಲ್ಲ ಎಂಬುದನ್ನರಿತು ನಾವು ಪ್ರತಿ ನೆರೆ ಹಾನಿ ಅನುಭವಿಸಿದ ಕುಟುಂಬಕ್ಕೆ ತಲಾ 10 ಸಾವಿರ ರೂ. ಕೊಟ್ಟಿದ್ದೇವೆ. ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರೂ. ಕೊಡಲು ನಿರ್ಧರಿಸಿದೆ. ಮನೆ ಕಟ್ಟಿಕೊಳ್ಳಲು ಮೊದಲ ಕಂತಿನಲ್ಲಿ 1 ಲಕ್ಷ ರೂ. ಕೊಡಲು ನಿರ್ಧರಿಸಿದ್ದೇವೆ. ಪ್ರಸ್ತುತ ಸಾವಿರ ಕೋಟಿ ರೂ. ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿಡೆ ಎಂದರು.
ಬೆಳೆ ಪರಿಹಾರ ಕೊಡಲು ಸರ್ವೆ ಮಾಡಿಸಿದ್ದೇವೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ನಡಿ 1 ಹೆಕ್ಟೇರ್ ನೀರಾವರಿಗೆ 13600 ರೂ., ಒಣ ಬೇಸಾಯಕ್ಕೆ 6600 ರೂ. ಪ್ರತಿ ಹೆಕ್ಟೇರ್, ದ್ರಾಕ್ಷಿ, ದಾಂಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 18 ಸಾವಿರ ರೂ. ಪರಿಹಾರ ಕೊಡಲು ನಿರ್ಧರಿಸಿದೆ. ಕೇಂದ್ರಕ್ಕೆ 32 ಸಾವಿರ ಕೋಟಿ ರೂ. ನೆರೆ ಹಾನಿಯಾಗಿದೆ ಎಂದು ಕೇಳಿದ್ದೇವೆ. ಪ್ರಧಾನಿ ಈಗಾಗಲೆ ಅಧಿಕಾರಿಗಳಿಂದ ವರದಿ ಪಡೆದಿದ್ದಾರೆ. ನೆರೆ ಹಾನಿಗೆ ನಮ್ಮಲ್ಲಿ ಹಣದ ಕೊರತೆಯಿಲ್ಲ. ಬೇಕಾದಷ್ಟು ಅನುದಾನ ಇದೆ. ನಮ್ಮ ಖಜಾನೆಯ ಹಣ ಖರ್ಚು ಮಾಡಲು ಮುಂದಾಗಿದ್ದೇವೆ ಎಂದರು.
ನನ್ನ ಕ್ಷೇತ್ರದಲ್ಲಿ ಕೆಲವರು ಸುಮ್ಮನೆ ಆರೋಪ ಮಾಡಿ ಪರಿಹಾರ ಬಂದಿಲ್ಲ ಎಂದಿದ್ದಾರೆ. ಅದು ಸತ್ಯಕ್ಕೆ ದೂರವಾದದ್ದು, ನಾವು ಪರಿಹಾರದಲ್ಲಿ ತಾರತಮ್ಯ ಮಾಡಿಲ್ಲ. ದಾಖಲೆಗಳ ಆಧರಿಸಿ ನಾವು ಪರಿಹಾರ ನೀಡಿದ್ದೇವೆ. ಕ್ಷೇತ್ರದಲ್ಲಿನ ಎಲ್ಲರೂ ನನ್ನ ಬೆಂಬಲಿಗರೆ ಎಂದರು.
ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರೇ ಈ ಹಿಂದೆ ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಆಗಬೇಕು. ಹೈದ್ರಾಬಾದ್ ನಿಜಾಮರ ಸಂಕೋಲೆಯ ಹೆಸರು ಕೈ ಬಿಡಬೇಕು ಎಂದು ಹೇಳಿದ್ದಾರೆ. ಈ ನಾಡಿನ ಬಹು ದಿನದ ಬೇಡಿಕೆಯ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದೇವೆ. ಈ ನಾಡಿನ ಶರಣರ ಕ್ರಾಂತಿ, ಬಸವಣ್ಣನವರ ಕಲ್ಯಾಣ ಕ್ರಾಂತಿಯ ಆಸೆಯದಿಂದಾಗಿ ಜನರ ಭಾವನೆಗೆ ಸ್ಪಂದಿಸಿ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದೇವೆ ಎಂದರು.