ವಾಷಿಂಗ್ಟನ್: ಜಗತ್ತಿನ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರಿರುವ ಕೋವಿಡ್ 19 ವೈರಸ್ ನೈಸರ್ಗಿಕವಾಗಿ ಅಭಿವೃದ್ಧಿ ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಮೆರಿಕದ ಉನ್ನತ ಆರೋಗ್ಯ ತಜ್ಞ ಮತ್ತು ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ (ಎನ್ ಐಎಐಡಿ) ನಿರ್ದೇಶಕ ಡಾ.ಆಂಥೋನಿ ಫೌಸಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಮಾರಣಾಂತಿಕ ವೈರಸ್ ಮೂಲದ ಬಗ್ಗೆ ಮುಕ್ತ ತನಿಖೆ ನಡೆಯಬೇಕು ಎಂದು ಡಾ.ಫೌಸಿ ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ. ಯುನೈಟೆಡ್ ಫ್ಯಾಕ್ಟ್ಸ್ ಆಫ್ ಅಮೆರಿಕಾದ: ಎ ಫೆಸ್ಟಿವಲ್ ಆಫ್ ಫ್ಯಾಕ್ಟ್ ಚೆಕಿಂಗ್ ಸಮ್ಮೇಳನದಲ್ಲಿ ಡಾ.ಫೌಸಿ ಈ ಹೇಳಿಕೆಯನ್ನು ನೀಡಿದ್ದಾರೆ.
“ಕೋವಿಡ್ 19 ಮೂಲದ ಬಗ್ಗೆ ಈಗಲೂ ಸಾಕಷ್ಟು ಅನುಮಾನಗಳಿವೆ. ಆದ್ದರಿಂದ ನಾನು ಕೇಳಲು ಬಯಸುತ್ತೇನೆ. ನಿಜಕ್ಕೂ ಕೋವಿಡ್ 19 ನೈಸರ್ಗಿಕವಾಗಿ ಅಭಿವೃದ್ಧಿ ಹೊಂದಿದೆ ಎಂಬ ವಿಶ್ವಾಸ ಹೊಂದಿದ್ದೀರಾ? ಎಂದು ಡಾ. ಫೌಸಿ ಅವರು ಕೇಟಿ ಸ್ಯಾಂಡರ್ಸ್ ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ 19 ನೈಸರ್ಗಿಕವಾಗಿ ಹುಟ್ಟಿಕೊಂಡಿತು ಎಂಬುದನ್ನು ನಾನು ಒಪ್ಪಿಕೊಳ್ಳಲ್ಲ. ನನ್ನ ಆಲೋಚನೆ ಪ್ರಕಾರ ನಿಜಕ್ಕೂ ಚೀನಾದಲ್ಲಿ ಏನು ನಡೆಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆಯನ್ನು ಮುಂದುವರಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಡಾ.ಫೌಸಿ ತಿಳಿಸಿದ್ದಾರೆ.
ಕೋವಿಡ್ 19 ಸೋಂಕಿನ ಬಗ್ಗೆ ತನಿಖೆ ಮಾಡಿರುವ ವಿಜ್ಞಾನಿಗಳ ಪ್ರಕಾರ ಇದು ಪ್ರಾಣಿಗಳಿಂದ ಹರಡಿರಬಹುದು ಎಂದು ಶಂಕಿಸಿದ್ದಾರೆ. ಆದರೆ ಇದು ಬೇರೆ ಯಾವುದೋ ಮೂಲದಿಂದ ಹರಡಿದೆ. ನಾವು ಇದನ್ನು ಕಂಡುಹಿಡಿಯಬೇಕಾದ ಅಗತ್ಯವಿದೆ ಎಂದು ಫೌಸಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.