ಹೊಸದಿಲ್ಲಿ: ಬೇರೆ ಬೇರೆಯದೇ ಕಾರಣಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕಾರಣದ ಸ್ನೇಹಿತರ ಬಲ ಕಳೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನವಿದೆ. 2019ರ ಲೋಕಸಭಾ ಚುನಾವಣೆಯ ಸವಾಲು ಮೆಟ್ಟಿ ನಿಲ್ಲುವ ಲೆಕ್ಕಾಚಾರದಲ್ಲಿರುವಾಗಲೇ ಈಗ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ ನಿರ್ಧಾರಕ್ಕೆ ಬಂದಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವ ಅವರು ರಾಜಕೀಯದಿಂದ ದೂರ ಸರಿಯುವ ಸಾಧ್ಯತೆಗಳು ದಟ್ಟವಾಗಿವೆ.
ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ ಪ್ರವೇಶಿಸಿರುವ 66ರ ಹರೆಯದ ಸುಷ್ಮಾ ಸ್ವರಾಜ್ ಅವರು ಮಂಗಳ ವಾರ ಇಂದೋರ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
“”ಮುಂದಿನ ಲೋಕಸಭಾ ಚುನಾ ವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈ ಬಗ್ಗೆ ಪಕ್ಷದ ನಾಯಕರ ಜತೆ ಅಂತಿಮವಾಗಿ ಚರ್ಚಿಸಿ, ನನ್ನ ಅಭಿಪ್ರಾಯ ಹೇಳಲಿದ್ದೇನೆ. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಚುನಾವಣಾ ಕಣಕ್ಕಿಳಿಯದೇ ಇರಲು ನಾನು ನಿರ್ಧರಿಸಿದ್ದೇನೆ” ಎಂದಿದ್ದಾರೆ. ಒಂದೊಮ್ಮೆ ಸುಷ್ಮಾ ಮಾತು ನಿಜವೇ ಆದಲ್ಲಿ ಅವರ 41 ವರ್ಷಗಳ ಚುನಾವಣಾ ರಾಜಕಾರಣಕ್ಕೆ ಬ್ರೇಕ್ ಬೀಳುವ ಸಾಧ್ಯತೆಯೂ ಇಲ್ಲದಿಲ್ಲ.
ಅನಾರೋಗ್ಯ ಕಾರಣ: ಮೋದಿ ಸಂಪುಟದ ಅತಿ ಚುರುಕು ಸಚಿವರಲ್ಲಿ ಒಬ್ಬರಾಗಿ, ಟ್ವಿಟರ್‌ನಲ್ಲಿ ಪ್ರತಿ ಯೊಬ್ಬರ ಸಂದೇಶ, ಪ್ರಶ್ನೆಗಳಿಗೆ ಸ್ಪಂದಿಸುವ ಅಪರೂಪದ ಸಚಿವೆ ಎನಿಸಿಕೊಂಡಿರುವ ಸುಷ್ಮಾ ಅವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಲಾಗದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ. 2016ರಲ್ಲಿ ಅವರು ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ 3 ತಿಂಗಳು ಸಂಸತ್ ಕಲಾಪ ಹಾಗೂ ಕೆಲ ದಿನಗಳ ಕಾಲ ತಮ್ಮ ಕಚೇರಿ ಚಟುವಟಿಕೆಗಳಿಂದಲೂ ದೂರವಿದ್ದರು.
ಆದರೆ, ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕವಾದರೂ ಪಕ್ಷ ಅವರನ್ನು ಮತ್ತೆ ಸಂಸತ್ ಪ್ರವೇಶಿಸುವಂತೆ ಮಾಡಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಈ ಸಂಬಂಧ ಸ್ವತಃ ಅಮಿತ್ ಶಾ ಅವರೇ ಸುಷ್ಮಾ ಜತೆ ಚರ್ಚಿಸಿದ್ದಾರೆ ಎನ್ನಲಾಗಿದೆ.