Advertisement

ಶೋಕಗೀತಾ ಪ್ರಸಂಗವು…

09:59 AM Jan 01, 2020 | mahesh |

ಸ್ಪರ್ಧೆ ಪ್ರಾರಂಭವಾಗಲು ಐದು ನಿಮಿಷ ಬಾಕಿ ಇತ್ತು. ನಿರೂಪಕರ ಆದೇಶದಂತೆ, ನಾವೆಲ್ಲ ಸ್ಟೇಜ್‌ನ ಹಿಂದುಗಡೆ ಸರದಿಯಲ್ಲಿ ನಿಂತಿದ್ದೆವು. ನಮ್ಮ ಎದುರಾಳಿಗಳಾಗಿದ್ದ ಬಿ.ಎಸ್ಸಿ, ಬಿ.ಕಾಂ ನ ಟೀಂ ಗಳನ್ನು ನೋಡಿಯೇ ನಾವೆಲ್ಲ ಬೆಚ್ಚಿ ಬಿದ್ದಿದ್ದೆವು. ಅವರು ತಬಲ, ಕೀ ಬೋರ್ಡ್‌ ಗಳಂಥ ವಾದ್ಯಗಳೊಂದಿಗೆ ಸಜ್ಜಾಗಿ ನಿಂತಿದ್ದರು. ಆದರೆ ನಮ್ಮ ಬಳಿ ಒಂದೇ ಒಂದು ಜೊತೆ ತಾಳವೂ ಇರಲಿಲ್ಲ.

Advertisement

ನನ್ನ ಡಿಗ್ರಿ ದಿನಗಳಲ್ಲಿ ನಡೆದ ಕೆಲವು ಘಟನೆಗಳನ್ನು ಮರೆಯಲು ಸಾಧ್ಯವೇ ಇಲ್ಲ. ಜೀವನ ಬದಲಿಸಿದ್ದು ಹಲವು, ಪಾಠ ಕಲಿಸಿದ್ದು ಕೆಲವು. ಒಟ್ಟಿನಲ್ಲಿ ಆ ಮಧುರ ಕ್ಷಣಗಳು, ಈಗಿನ ಘಟನೆಗಳ ಎದುರಾದಾಗ ಮತ್ತೆ ಕಣ್ಣಿಗೆ ಕಟ್ಟುತ್ತಲೇ ಇರುತ್ತವೆ. ಒಂದು ಬಾರಿ ನಮ್ಮ ಓವರ್‌ ಕಾನ್ಫಿಡೆನ್ಸ್‌ಗೆ ತಕ್ಕ ಶಾಸ್ತಿಯೇ ಆಯಿತು. ಈ ಪ್ರಸಂಗವನ್ನು ಬದುಕಲ್ಲಿ ಮರೆಯಲು ಸಾಧ್ಯವೇ ಇಲ್ಲ. ಆವತ್ತು ಏನಾಯಿತೆಂದರೆ…

ನನ್ನ ಗೆಳೆಯರು ಎನ್‌ಎಸ್‌ಎಸ್‌ ಕ್ಯಾಂಪ್‌ನಲ್ಲಿ ಒಂದು ಬಾರಿ ಭಜನೆ ಮಾಡಿ ಎಲ್ಲರ ಮನಗೆದ್ದಿದ್ದರು. ಭಜನೆ ಅಂದರೆ ಗೊತ್ತಲ್ಲ? ಒಬ್ಬ ಮುಖ್ಯ ಗಾಯಕ ಹಾಡಿದ್ದನ್ನು, ಇತರರೂ ಅನುಸರಿಸುವುದು. ನಮ್ಮ ಕಾಲೇಜಿನಲ್ಲಿ ಭಜನೆ ಸ್ಪರ್ಧೆ ನಡೆಯುತ್ತಿತ್ತು. ಈ ಭಜನೆಯ ಗೆಲುವಿನಿಂದ ಪ್ರಭಾವಿತರಾದ ಅವರು, ಈ ಬಾರಿ ಕಾಲೇಜು ವಾರ್ಷಿಕೋತ್ಸವದ ಭಜನೆ ಸ್ಪರ್ಧೆಯಲ್ಲಿ ನಾವೇ ಗೆಲ್ಲಬೇಕು ಅಂತ ನಿರ್ಧಾರ ಮಾಡಿದರು. ಆ ಗುಂಪಿನಲ್ಲಿ ನಾನೂ ಒಬ್ಬಳಾಗಿದ್ದೆ.

ವಾರ್ಷಿಕೋತ್ಸವದ ಸಮಯದಲ್ಲಿ ಕಾಲೇಜಿನ ಬಿ.ಎ, ಬಿ.ಕಾಂ, ಬಿಎಸ್ಸಿ ವಿಭಾಗಗಳ ನಡುವೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿತು. ನೃತ್ಯ, ಡಿಬೇಟ್‌, ಮಾಕ್‌ ಪ್ರಸ್‌, ಕ್ವಿಜ್‌, ಸಂಗೀತಗಳೊಂದಿಗೆ ಭಜನೆಯೂ ಸೇರಿಬಿಟ್ಟಿತ್ತು. ಕಾಲೇಜ್‌ಡೇಗೆ ಇನ್ನೂ ಬೇಕಾದಷ್ಟು ಸಮಯ ಉಳಿದಿದೆ. ಹೀಗಾಗಿ, ಈಗಿನಿಂದಲೇ ತಯಾರಿ ನಡೆಸುವ ಅಗತ್ಯ ಏನೂ ಇಲ್ಲ ಅನ್ನೋ ಭಾವವೇ ಎಲ್ಲರಲ್ಲೂ ಮೂಡಿತ್ತು. ಇದನ್ನು ಉಡಾಫೆ ಅಂತಲೂ ಹೇಳಬಹುದು.

ನೋಡ ನೋಡುತ್ತಲೇ ಕಾಲೇಜ್‌ಡೇ ಹತ್ತಿರ ಬಂದೇ ಬಿಟ್ಟಿತು. ನಮ್ಮ ಟೀಂ ಲೀಡರ್‌, ನಾನು ಹೇಗೆ ಭಜನೆ ಮಾಡುತ್ತಾ ಹೋಗುತ್ತೇನೋ ನೀವೆಲ್ಲಾ ಹಾಗೇ ಹಿಂದಿನಿಂದ ಧ್ವನಿಗೂಡಿಸಿ.ಇದು ಕಷ್ಟವೇನಿಲ್ಲ. ಆದರೆ, ನಾನು ಹಾಡಿದಂತೆಯೇ ನೀವೂ ಹಾಡಬೇಕು ಅಷ್ಟೇ ಅಂತ ಎಲ್ಲರಿಗೂ ಧೈರ್ಯ ತುಂಬಿದರು. ಆತನ ಮಾತಿಗೆ ತಲೆದೂಗಿ, ಇಷ್ಟೇ ತಾನೇ ಅಂತ ನಾವು ಯಾರೂ ಕೂಡ ಪೂರ್ವತಯಾರಿಯ ಗೋಜಿಗೆ ಹೊಗಲಿಲ್ಲ. ಕಾಂಪಿಟೇಶನ್‌ ದಿನದ ಬೆಳಗ್ಗೆ ಅಭ್ಯಾಸ ಮಾಡಿದರಾಯ್ತು ಅಂತ ನಿರ್ಧರಿಸಿ ಬಿಟ್ಟೆವು. ಆದರೆ ಆ ದಿನ ನಡೆದದ್ದೇ ಬೇರೆ.

Advertisement

ಸ್ಪರ್ಧೆಯ ದಿನ ಬೆಳಗ್ಗೆ ನಮ್ಮ ಲೀಡರ್‌ಗೆ ಕಾಯುತ್ತಿರಬೇಕಾದರೆ, ಆ ಕಡೆಯಿಂದ ಆತನದೇ ಕರೆ ಬಂತು. ಮನೆಯಲ್ಲಿ ಸ್ವಲ್ಪ ಪ್ರಾಬ್ಲಿಂ ಆಗಿದೆ. ಕಾಂಪಿಟೇಶನ್‌ಗೆ ಬರೋದು ಕಷ್ಟ. ನೀವೇ ಹೇಗಾದರು ಮ್ಯಾನೇಜ್‌ ಮಾಡಿ ಅಂತ ಹೇಳಿ ಉತ್ತರಕ್ಕೂ ಕಾಯದೇ ಕಾಲ್‌ಕಟ್‌ ಮಾಡಿಬಿಟ್ಟ. ಇಷ್ಟೇ ಸಾಕಿತ್ತು. ನಮ್ಮ ಓವರ್‌ಕಾನ್ಫಿಡೆನ್ಸ್‌ ಅನ್ನು ಮಟ್ಟ ಹಾಕಲಿಕ್ಕೆ. ಮೊದಲೇ ಅಭ್ಯಾಸ ಮಾಡಿದಿದ್ದರೆ ಅಂದು ಕೊನೆ ಗಳಿಗೆಯಲ್ಲಿ ಒದ್ದಾಡಬೇಕಾಗಿ ಬರುತ್ತಿರಲಿಲ್ಲವೇನೋ. ಆದರೆ, ನಮ್ಮ ಬಿ.ಎ ವಿಭಾಗದಿಂದ ಯಾರೂ ಸ್ಪರ್ಧಿಸಿಲ್ಲ ಅನ್ನೋ ಮಾತು ಬರಬಾರ್ಧು ಅನ್ನೋ ಕಾರಣಕ್ಕೆ ಹಿಂದೇಟು ಮಾತ್ರ ಹಾಕಲಿಲ್ಲ.

ಕೊನೆಗೆ, ನಮ್ಮ ಟೀಂನ ಮತ್ತೂಬ್ಬ ಸದಸ್ಯರಿಗೆ ಭಜನೆಯ ಲೀಡರ್‌ ಪಟ್ಟ ಮುಡಿಗೇರಿಸಿಕೊಂಡು, ತನಗೆ ಗೊತ್ತಿದ್ದ ಒಂದೆರಡು ಭಜನೆ ಹೇಳಿಕೊಟ್ಟ.

ಸ್ಪರ್ಧೆ ಪ್ರಾರಂಭವಾಗಲು ಐದು ನಿಮಿಷ ಬಾಕಿ ಇತ್ತು. ನಿರೂಪಕರ ಆದೇಶದಂತೆ, ನಾವೆಲ್ಲ ಸ್ಟೇಜ್‌ನ ಹಿಂದುಗಡೆ ಸರದಿಯಲ್ಲಿ ನಿಂತಿದ್ದೆವು. ನಮ್ಮ ಎದುರಾಳಿಗಳಾಗಿದ್ದ ಬಿ.ಎಸ್ಸಿ, ಬಿ.ಕಾಂ ನ ಟೀಂ ಗಳನ್ನು ನೋಡಿಯೇ ನಾವೆಲ್ಲ ಬೆಚ್ಚಿ ಬಿದ್ದಿದ್ದೆವು. ಅವರು ತಬಲ, ಕೀ ಬೋರ್ಡ್‌ ಗಳಂಥ ವಾದ್ಯಗಳೊಂದಿಗೆ ಸಜ್ಜಾಗಿ ನಿಂತಿದ್ದರು. ಆದರೆ ನಮ್ಮ ಬಳಿ ಒಂದೇ ಒಂದು ಜೊತೆ ತಾಳವೂ ಇರಲಿಲ್ಲ. ಅದು ಹೇಗೋ ಐದು ನಿಮಿಷದ ಭಜನೆ ಮುಗಿಸಿ ಹೊರ ಬಂದತಕ್ಷಣ ನಮ್ಮ ಅಣ್ಣನ ಸೀನಿಯರ್‌ ಒಬ್ಬರು ಅದು ಭಜನೆ ತರ ಇರಲಿಲ್ಲ.. ಶೋಕಗೀತೆಯ ಥರಾ ಇತ್ತು ಅಂತ ಬೈದುಬಿಟ್ಟರು. ಮರ್ಯಾದೆ ಮೂರು ಕಾಸಿಗೆ ಹೋಗಿದೆ ಎಂದು ತಿಳಿದಿದ್ದೇ ತಡ. ನಾವು ಯಾರ ಕಣ್ಣಿಗೂ ಬೀಳದಂತೆ ಓಡಿಹೋದೆವು.

ಈಗಲೂ ಯಾವುದಾದರೂ ದೇವಾಲಯದಲ್ಲಿ ಭಜನೆ ಮಾಡುತ್ತಿರುವುದನ್ನು ನೋಡಿದಾಗೆಲ್ಲ ಈ ಘಟನೆ ನೆನಪಿಗೆ ಬರುತ್ತದೆ.

ಚೈತ್ರಾ ಕೆ. ಎಸ್‌

Advertisement

Udayavani is now on Telegram. Click here to join our channel and stay updated with the latest news.

Next