ಭಾರತೀಯ ದೂರವಾಣಿ ಸಂಚಾರಿ ನಿಗಮ ಅರ್ಥಾತ್ ಬಿಎಸ್ಸೆನ್ನೆಲ್ ಕೇಂದ್ರ ಸರ್ಕಾರದ ಸ್ವಾಮಿತ್ವದ ಒಂದು ಖಾಸಗಿ ವ್ಯವಸ್ಥೆ. ನಾವು ಕೂಡ ಪರೋಕ್ಷವಾಗಿ ಅದರ ಮಾಲಿಕರು ಎಂಬ ಕಾರಣಕ್ಕೆ ಭಾರತೀಯರನೇಕರಿಗೆ ಅದರ ಬಗ್ಗೆ ಒಂದಿಷ್ಟು ಮಮಕಾರವಿದೆ. ಗ್ರಾಹಕ ಚಳವಳಿಯಲ್ಲಿರುವವರಿಗೂ ಅದರ ಬಗ್ಗೆಯೇ ಹೆಚ್ಚು ಪ್ರೀತಿ, ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ (ಟ್ರಾಯ್) ನಿಯಮ ನಿರ್ದೇಶನಗಳನ್ನು ಬಹುಪಾಲು ಪಾಲನೆ ಮಾಡುವ ಸೇವಾ ಕಂಪನಿ ಎಂಬ ಹಿನ್ನೆಲೆಯೂ ಅದಕ್ಕಿದೆ. ಪತ್ರಿಕೆಗಳು, ಮಾಧ್ಯಮಗಳು ಬಿಎಸ್ಸೆನ್ನೆಲ್‌ನ ಸುದ್ದಿ ಮಾಹಿತಿಗಳನ್ನು ಆದ್ಯತೆಯ ಮೇಲೆ ಪ್ರಕಟಿಸುವುದರ ಹಿಂದೆಯೂ ಈ ಭಾರತೀಯ ಸೆಂಟಿಮೆಂಟ್ ಕೆಲಸ ಮಾಡಿರಬಹುದು. ದುರಂತವೆಂದರೆ, ಖುದ್ದು ಬಿಎಸ್ಸೆನ್ನೆಲ್‌ನ ಅಧಿಕಾರಿಗಳಿಗೆ ಅದರ ಮೇಲೆ ಕಿಂಚಿತ್ತೂ ಆಸ್ಥೆಯಿಲ್ಲ!
Advertisement
ಆರೋಪಕ್ಕೆ ಕಾರಣಗಳಿವೆ, ಬಿಎಸ್ಸೆನ್ನೆಲ್ ಈಗಾಗಲೇ ಸಾವಿರಾರು ದೂರವಾಣಿ ಸಂಪರ್ಕವನ್ನು ಕೊಡುವಂಥ ಮೂಲಭೂತ ಸೌಲಭ್ಯಗಳನ್ನು ರೂಪಿಸಿಕೊಂಡಿದೆ. ಓಎಫ್ಸಿ, ನೆಲದೊಳಗಿನ ಕೇಬಲ್, ಇಲಾಖೆಯ ನಿರ್ವಹಣೆಗೆ ಕಟ್ಟಡ, ಉದ್ಯೋಗಿಗಳು ಹೀಗೆ. ಒಂದು ವಿನಿಮಯ ಕೇಂದ್ರದ ನಿರ್ವಹಣೆಯನ್ನು ನೂರು ಚಂದಾದಾರರು ಇದ್ದರೂ ಮಾಡಬೇಕು, ಕೇವಲ ಹತ್ತು ಇದ್ದರೂ ಹೆಚ್ಚು ಕಡಿಮೆ ಅಷ್ಟೇ ಜವಾಬ್ದಾರಿ, ಕೆಲಸ. ಅಂದರೆ, ಮೊಬೈಲ್‌ನ ಆಕರ್ಷಣೀಯ ಆಫರ್ ಹಾಗೂ ಸೇವೆ, ಲಭ್ಯತೆಯ ಹಿನ್ನೆಲೆಯಲ್ಲಿ ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿಯನ್ನು ಜನ ಉಳಿಸಿಕೊಳ್ಳುವುದು ಅನಿವಾರ್ಯ, ಅದು ಇದ್ದರೆ ನಮಗೆ ಒಳಿತು ಎಂಬ ಭಾವ ಜನರಲ್ಲಿ ಬರುವಂತೆ ಮಾಡಬೇಕಿತ್ತು. ಈ ಬಿಎಸ್‌ಎನ್‌ಎಲ್ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದೆ.
ತುಂಬಾ ಹಿಂದೆ ಒಂದು ಕರೆ ಆರಂಭವಾದ ನಂತರ ಅದು ಮುಗಿಯುವ ತನಕ ಒಂದು ಕರೆ ಎಂಬ ನಿಯಮವಿತ್ತು. ಆಮೇಲೆ ನಿಮಿಷಗಳ ಪಲ್ಸ್ ದರ ಬಂತು. ಆಗಲೂ ಸ್ಥಳೀಯ ಕರೆಗಳು ಉಚಿತವೋ, ಸಮಯಮಿತಿಯ ವ್ಯಾಪ್ತಿಗೆ ಬರದಂತೆಯೂ ಇರಿಸಲಾಗಿತ್ತು. ಯಾವತ್ತು ಈ ಸೌಲಭ್ಯವನ್ನೂ ಹಿಂತೆಗೆದುಕೊಳ್ಳಲಾಯಿತೋ, ಅವತ್ತಿನಿಂದ ಸ್ಥಿರ ದೂರವಾಣಿ ಸಂಪರ್ಕ ಕಡಿತಗೊಳಿಸುವುದು ಸಾಂಕ್ರಾಮಿಕ ರೋಗದ ರೀತಿ ಹಬ್ಬಿತು. ತಡೆಯಬೇಕಿದ್ದವರು ಯಾರು? ಅವಕಾಶವಿತ್ತು, ಐದು ನೂರು ಗ್ರಾಹಕರಿಗಿಂತ ಹೆಚ್ಚಿನ ಗ್ರಾಹಕರ ಗುಂಪು ಒಗ್ಗೂಡಿ ಸೆಂಟ್ರೆಕ್ಸ್‌ಗೆ ಅರ್ಥಾತ್ ತಮ್ಮೊಳಗಿನ ಕರೆಗೆ ವಿಶೇಷ ಸೌಲಭ್ಯ ಕಲ್ಪಿಸಲು ಅವಕಾಶ ಕೋರಿದರೆ ಆ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂಬುದು ಇದೇ ಬಿಎಸ್ಸೆನ್ನೆಲ್‌ನ ಒಂದು ನಿಯಮ. ಈ ನಿಯಮ ಬಳಸಿ 500ಕ್ಕಿಂತ ಹೆಚ್ಚು ಗ್ರಾಹಕರ ವಿನಿಮಯ ಕೇಂದ್ರದ ಸಂಪರ್ಕಗಳನ್ನು ಉಳಿಸಿಕೊಳ್ಳಬಹುದಿತ್ತು. ಈ ಸಾಧ್ಯತೆಯನ್ನು ಸಾಗರ ತಾಲೂಕಿನ ಹೆಗ್ಗೊàಡು ವಿನಿಮಯ ಕೇಂದ್ರದ ವ್ಯಾಪ್ತಿಯಲ್ಲಿ ಸೆಂಟ್ರೆಕ್ಸ್ ತಂದಾಗ ಸ್ಪಷ್ಟವಾಗಿ ಇಲಾಖೆ ಕಂಡಿತ್ತು. ಹೋಗಲಿ, ಕಳೆದ ಒಂದೂವರೆ ವರ್ಷದ ಹಿಂದೆ ಸ್ಥಿರ ದೂರವಾಣಿಯಿಂದ ರಾತ್ರಿ 9ರಿಂದ ಬೆಳಗ್ಗೆ 7ರವರೆಗೆ ಎಲ್ಲ ಕರೆಗಳು ಉಚಿತ ಎಂಬ ವಿಶೇಷ ಕೊಡುಗೆಯನ್ನು ಬಿಎಸ್ಸೆನ್ನೆಲ್ ನೀಡಿತು. ಇದೇ ಕಾರಣಕ್ಕೆ ದೊಡ್ಡ ಸಂಖ್ಯೆಯ ದೂರವಾಣಿಗಳು ವಾಪಸಾಗುವುದು ನಿಂತಿತು. ತಮ್ಮದೇ ಹಿತ ಬಿಎಸ್ಸೆನ್ನೆಲ್‌ಗೆ ಕಿರಿಕಿರಿಯಾಯಿತು ಎಂದು ಕಾಣುತ್ತದೆ. ಹೊಸ ವರ್ಷದ ಮೊದಲ ದಿನದ ಕೊಡುಗೆಯಾಗಿ ಈ ಉಚಿತ ಸೌಲಭ್ಯದ ಅವಧಿಯನ್ನು ಬದಲಾಯಿಸಿ ಇನ್ನು ಮುಂದೆ ರಾತ್ರಿ 10.30ರಿಂದ ಬೆಳಗ್ಗೆ 6ರ ವರೆಗೆ ಮಾತ್ರ ಉಚಿತ ಸೌಲಭ್ಯ ಎಂದು ಈಗ ಘೋಷಿಸಲಾಗಿದೆ. ಮೊದಲನೆಯಾದಾಗಿ, ಬಿಎಸ್ಸೆನ್ನೆಲ್ ಇದಕ್ಕೆ ಸ್ವಲ್ಪವೂ ಪ್ರಚಾರವನ್ನು ಕೊಡದಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಗ್ರಾಹಕರ ಭರ್ಜರಿ ಬಿಲ್‌ಗಳು “ಜನರೇಟ್’ ಆಗಿ, ಬಿಎಸ್ಸೆನ್ನೆಲ್‌ಗೆ ತಾತ್ಕಾಲಿಕವಾಗಿ ಆದಾಯ ಬರಬಹುದು. ಇದೇ ವೇಳೆ ಮತ್ತೂಂದು ಹಂತದ ಫೋನ್ ವಾಪಸಾತಿ ಚಳವಳಿ ನಡೆದರೆ ಅಚ್ಚರಿಯಿಲ್ಲ.
Related Articles
ಒಂದು ಕಾಲದಲ್ಲಿ ಬಿಎಸ್ಸೆನ್ನೆಲ್ ಬ್ರಾಡ್‌ಬ್ಯಾಂಡ್ ಒಂದು ಅಪರೂಪದ ಸೌಲಭ್ಯ ಎನ್ನಿಸಿಕೊಂಡಿತ್ತು. ಮೊಬೈಲ್ ಸೇವಾದಾತರು ಡಾಟಾ ಎಂಬುದು ಗಣಿ ಅಗೆದು ತೆಗೆದ ಚಿನ್ನದ ಮೌಲ್ಯದ್ದು ಎಂಬಂತೆ ಆಡಿದರೆ ಗ್ರಾಹಕರಿಗೆ ಅನಿಯಮಿತ ಇಂಟರ್‌ನೆಟ್ ಸೌಲಭ್ಯ ಪಡೆದುಕೊಳ್ಳುವಂತೆ ಮಾಡಿದ್ದು ಬ್ರಾಡ್‌ಬ್ಯಾಂಡ್. ಕಾಲಚಕ್ರ ಉರುಳಿದೆ, ಡಾಟಾದ ಅಸಲಿಯತ್ತನ್ನು ಜಿಯೋ ಮೊಬೈಲ್ ಸೇವೆ ಬಯಲು ಮಾಡಿದೆ. ಅದರ ಹೊಡೆತವನ್ನು ದಿಟ್ಟವಾಗಿ ಎದುರಿಸುತ್ತಿರುವುದು ಬಿಎಸ್ಸೆನ್ನೆಲ್. ಜಿಯೋದಂತೆಯೇ ಆಕರ್ಷಕ ಡಾಟಾ ಯೋಜನೆಯನ್ನು ಮೊತ್ತಮೊದಲಾಗಿ ಯಾವುದೇ ಗುಪ್ತ ಷರತ್ತುಗಳು ಅನ್ವಯಿಸುತ್ತವೆ ಎಂಬ ನಿಯಮ ಹಾಕದೆ, ಬಿಎಸ್ಸೆನ್ನೆಲ್ ಮೊಬೈಲ್ ಕೂಡ ಜಾರಿಗೆ ತಂದಿತು. ಇದರಿಂದ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವಲ್ಲಿಯೂ ಅದು ಯಶಸ್ವಿಯಾಯಿತು. ಆದರೆ, ಈ ಪೈಪೋಟಿ ಸ್ಥಿರ ದೂರವಾಣಿಯನ್ನು ಪ್ರಭಾವಿಸುತ್ತದೆ ಎಂಬುದು ಬಿಎಸ್ಸೆನ್ನೆಲ್ ಅಧಿಕಾರಿಗಳಿಗೆ ಗೊತ್ತಾಗುವುದಿಲ್ಲವೇ?
Advertisement
ಇಂದಿನ ಬ್ರಾಡ್‌ಬ್ಯಾಂಡ್ ದರಗಳನ್ನು ಪರಿಶೀಲಿಸಿದರೆ, ಬಿಎಸ್ಸೆನ್ನೆಲ್ ಅತಾರ್ಕಿಕ ನೆಲೆಯಲ್ಲಿ ವಾಸಿಸುತ್ತಿರುವುದು ಗೊತ್ತಾಗುತ್ತದೆ. ಇಲ್ಲಿ ಅತಿ ಕಡಿಮೆ ಬ್ರಾಡ್‌ಬ್ಯಾಂಡ್ ದರ ಎಂದರೆ ಮಾಸಿಕ 249 ರೂ. ಪ್ಲಾನ್. ಇದಕ್ಕೆ ಮತ್ತೆ ಜಿಎಸ್‌ಟಿ ಪ್ರತ್ಯೇಕ. 5 ಜಿಬಿಯವರೆಗೆ ಮಾತ್ರ ಅಧಿಕ ವೇಗ ಹೊಂದುವ ಇದು ನಂತರ ಒಂದು ಎಂಬಿ ವೇಗಕ್ಕೆ ಕುಸಿಯುತ್ತದೆ. ಇದೇ ರೀತಿ 499 ಮತ್ತು 675 ರೂ.ಗಳ ಪ್ಲಾನ್ ಇದೆ. ಇವೆಲ್ಲ 3ಜಿ ಮೊಬೈಲ್ ಡಾಟಾ ಸೇವೆಗಳ ಎದುರು ತೀರಾ ದುಬಾರಿ ಎನಿಸುತ್ತದೆ. ಈ ದರಗಳನ್ನು ಕಡಿಮೆ ಮಾಡಿ ಸ್ಪರ್ಧೆಯಲ್ಲಿರಬೇಕಾದ ಬಿಎಸ್ಸೆನ್ನೆಲ್, ರಾತ್ರಿ ಉಚಿತ ಕರೆಗಳ ಸಮಯವನ್ನು ಬದಲಿಸಿ ಅದರ ಲಾಭ ಗ್ರಾಹಕರಿಗೆ ಸಿಗದಂತೆ ನೋಡಿಕೊಳ್ಳುತ್ತದೆ!
ಚರಮಗೀತೆ ಹಾಡುವ ಹಂತ…ಟ್ರಾಯ್ ಬಿಡುಗಡೆ ಮಾಡಿದ ಅಕ್ಟೋಬರ್ 2017ರ ಅಂತ್ಯದ ಅಂಕಿಅಂಶಗಳ ಪ್ರಕಾರ, ನಗರ ಪ್ರದೇಶದಲ್ಲಿ 20.02 ಮಿಲಿಯನ್ ಸ್ಥಿರ ದೂರವಾಣಿ ಗ್ರಾಹಕರಿದ್ದಾರೆ. ಗ್ರಾಮೀಣ ಭಾಗದಲ್ಲಿ 3.51 ಮಿಲಿಯನ್. ಅಕ್ಟೋಬರ್ ಒಂದು ತಿಂಗಳಲ್ಲಿ ಈ ಸಂಖ್ಯೆ ನಗರದಲ್ಲಿ ಶೇ. 0.52 ಹಾಗೂ ಗ್ರಾಮಾಂತರದಲ್ಲಿ ಶೇ. 1.04 ಕುಸಿದಿದೆ. ಹೀಗೆಂದರೆ ಅರ್ಥವಾಗುವುದು ಕಷ್ಟ. ಸರಳವಾಗಿ ಹೇಳುವುದಾದರೆ, ಅಕ್ಟೋಬರ್ ಒಂದು ತಿಂಗಳಿನಲ್ಲಿಯೇ 1,41,904 ಬಳಕೆದಾರರು ಸ್ಥಿರ ದೂರವಾಣಿಗೆ ಟಾಟಾ ಹೇಳಿದ್ದಾರೆ. ಬ್ರಾಡ್‌ಬ್ಯಾಂಡ್ ಮಾರುಕಟ್ಟೆಯಲ್ಲಿಯೂ ಬಿಎಸ್ಸೆನ್ನೆಲ್ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ. ಅದಕ್ಕೀಗ 17.98 ಮಿಲಿಯನ್ ಚಂದಾದಾರರು ಮಾತ್ರ ಇದ್ದಾರೆ. ನಿಸ್ತಂತು ಬ್ರಾಡ್‌ಬ್ಯಾಂಡ್ ಸೇರಿದರೆ ಜಿಯೋ ಶೇ.42.9 ಹಾಗೂ ಬಿಎಸ್ಸೆನ್ನೆಲ್ ಶೇ.6.23ರ ಪಾಲು ಹೊಂದಿದೆ. ಗ್ರಾಹಕನ ಮನಃಸ್ಥಿತಿಯನ್ನು ಅರಿತು ಮಾರುಕಟ್ಟೆ ತಂತ್ರಗಾರಿಕೆ ರೂಪಿಸಬೇಕು. ಒಬ್ಬ ಮೊಬೈಲ್ ಗ್ರಾಹಕ ಪ್ರತಿದಿನ 10 ರೂ. ಟಾಪ್‌ಅಪ್ ರೀಚಾರ್ಜ್ ಮಾಡಿಕೊಳ್ಳುತ್ತಾನೆ. ಅವನಿಗದು ದುಬಾರಿಯಲ್ಲ. ತಿಂಗಳಿಗೆ 300 ರೂ. ಕೊಟ್ಟಂತಾಗುವುದು ಅವನ ಗಮನಕ್ಕೆ ಬರುವುದಿಲ್ಲ. ಅದೇ ಗ್ರಾಹಕನಿಗೆ ಒಮ್ಮೆಲೇ ಸ್ಥಿರ ದೂರವಾಣಿಯ ಮಾಸಿಕ ಪೋಸ್ಟ್ ಪೇಯ್ಡ ಬಿಲ್ ಯಾವತ್ತೂ 150 ರೂ. ಬರುವುದು 290 ರೂ. ಬಂದರೆ ಆತ ಮೊದಲು ಮಾಡುವುದು ಲ್ಯಾಂಡ್‌ಲೈನ್ ಫೋನ್ ಸಂಪರ್ಕವನ್ನು ಕಡಿತಗೊಳಿಸುತ್ತಾನೆ. ಸ್ಥಿರ ದೂರವಾಣಿಯನ್ನು ಪೂರ್ವ ಪಾವತಿ ವ್ಯವಸ್ಥೆಗೆ ಅಳವಡಿಸದಿರುವುದು ಮತ್ತು ದೊಡ್ಡ ಪ್ರಮಾಣದ ಬಾಕಿದಾರರಿದ್ದೂ ಏನೂ ಮಾಡಲಾಗದ ಸ್ಥಿತಿಯಲ್ಲಿರುವುದು ಬಿಎಸ್ಸೆನ್ನೆಲ್‌ನ ವೈಫಲ್ಯ. ತಮ್ಮ ಸಂಸ್ಥೆಯನ್ನು ಉಳಿಸಿಕೊಳ್ಳುವ ಇಚ್ಛೆ ಸಂಸ್ಥೆಯೊಂದರ ಹಿರಿಯ ಅಧಿಕಾರಿಗಳಿಗೇ ಇಲ್ಲದಿದ್ದರೆ ಅದು ಹೆಚ್ಚು ಕಾಲ ಬಾಳುತ್ತದೆ ಎಂದು ಭರವಸೆ ಇಡುವಂತಿಲ್ಲ. ಆ ಮಾತು ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿಗೂ ಅನ್ವಯ. ಛೇ..! ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ