ಛಿಂದ್ವಾರ(ಮಧ್ಯಪ್ರದೇಶ): ನಿಮಗೆ ಯಾವ ಪಕ್ಷಕ್ಕೆ ಮತ ಚಲಾಯಿಸಬೇಕು ಎಂಬುದನ್ನು ನೀವೇ ನಿರ್ಧರಿಸಿ ಎಂದು ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ತಮ್ಮ ಬೆಂಬಲಿಗರಿಗೆ ಹೇಳಿದ ಬೆನ್ನಲ್ಲೇ ಭಗವಾನ್ ಶ್ರೀರಾಮ ಮತ್ತು ಹನುಮಂತನ ಭಕ್ತಿ ಬಿಜೆಪಿಯ ಹಕ್ಕುಸ್ವಾಮ್ಯವಲ್ಲ ಎಂದು ಹೇಳುವ ಮೂಲಕ ಪಕ್ಷಕ್ಕೆ ಇರಿಸುಮುರಿಸು ತಂದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಾಂಗ್ರೆಸ್,ಜೆಡಿಎಸ್ ಕರ್ನಾಟಕದ ವಿಕಾಸಕ್ಕೆ ತಡೆ: ಮಂಡ್ಯದಲ್ಲಿ ಗುಡುಗಿದ ಅಮಿತ್ ಶಾ
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ರಾಜ್ಯದಲ್ಲಿ ಹನುಮಂತನ ದೇವಾಲಯವನ್ನು ನಿರ್ಮಿಸುವುದಾಗಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉಮಾ ಭಾರತಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಮದ್ಯಪಾನ ನಿಷೇಧದ ಬೇಡಿಕೆ ಇಟ್ಟಿರುವ ಉಮಾ ಭಾರತಿಯನ್ನು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ತಮ್ಮನ್ನು ಮೂಲೆಗುಂಪು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಮದ್ಯಪಾನ ನಿಷೇಧಿಸಬೇಕೆಂದು ಆಗ್ರಹಿಸಿ ಮದ್ಯದಂಗಡಿ ಮೇಲೆ ಕಲ್ಲುತೂರಾಟ ನಡೆಸುವ ಮೂಲಕ ಉಮಾ ಭಾರತಿ ಸುದ್ದಿಯಾಗಿದ್ದರು.
ತನ್ನನ್ನು ಮೂಲೆಗುಂಪು ಮಾಡುತ್ತಿರುವ ವಿಚಾರದಲ್ಲಿ ಉಮಾ ಭಾರತಿ ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊಂದಿರುವುದಾಗಿ ವರದಿ ತಿಳಿಸಿದೆ. ಏತನ್ಮಧ್ಯೆ ಹಿಂದೂಗಳು ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರ ಇರಿಸಿಕೊಳ್ಳಬೇಕು ಎಂಬ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿವಾದಿತ ಹೇಳಿಕೆಗೆ ಉಮಾಭಾರತಿ ಬೆಂಬಲ ನೀಡಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಹಿರಿಯ ಮುಖಂಡ ಭಾರತ್ ಜೋಡೋ ಯಾತ್ರೆಯನ್ನು ರಾಮಾಯಣಕ್ಕೆ ಹೋಲಿಸಿ, ರಾಹುಲ್ ಗಾಂಧಿಯನ್ನು ಭಗವಾನ್ ಶ್ರೀರಾಮನಿಗೆ ಹೋಲಿಕೆ ಮಾಡಿರುವುದಕ್ಕೆ ತಿರುಗೇಟು ನೀಡಿರುವ ಉಮಾ ಭಾರತಿ, ಬ್ರಹ್ಮಾಂಡದ ಅಧಿಪತಿ ಶ್ರೀರಾಮನನ್ನು ರಾಹುಲ್ ಗಾಂಧಿಗೆ ಹೋಲಿಸುವುದು ತಪ್ಪು. ಭಾರತಕ್ಕೆ ಯಾವುದೇ ಜೋಡೋ ಯಾತ್ರೆಯ ಅಗತ್ಯವಿಲ್ಲ ಎಂದು ಹೇಳಿದರು.