ಧಾರವಾಡ: ನಾನು ಕಾಂಗ್ರೆಸ್ ಮೇಲೆ ಸಿಟ್ಟಾಗಿಲ್ಲ. ಬಿಜೆಪಿಗೆ ಹೋಗಲು ಯಾವುದೇ ತೊಂದರೆಯೂ ಇಲ್ಲ ಎಂದು ಶಾಸಕ ಬಸವರಾಜ ರಾಯರೆಡ್ಡಿ ಮಾರ್ಮಿಕವಾಗಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ಬಿಜೆಪಿಗೆ ಹೋಗಲು ನನಗೆ ಯಾವುದೇ ತೊಂದರೆಯಿಲ್ಲ. ಆದರೆ, ಆ ಪಕ್ಷದ ತತ್ವ ಸಿದ್ಧಾಂತಗಳು ನನಗೆ ಸರಿ ಹೊಂದುವುದಿಲ್ಲ. ನಾನು ಕಾಂಗ್ರೆಸ್ ಬಿಡುವುದಿಲ್ಲ. ಬಿಜೆಪಿಯವರು ನನ್ನನ್ನು ಕರೆದಿದ್ದಾರೆ ಅಂತಲ್ಲ. ಅವರು ಎಲ್ಲರನ್ನೂ ಕರೆಯುತ್ತಿರುತ್ತಾರೆ. ನಾನು ಐಡಿಯಾಲಜಿ ಇಟ್ಟುಕೊಂಡು ರಾಜಕೀಯ ಮಾಡಿದವನು. ಸಿದ್ದರಾಮಯ್ಯ ಒಳ್ಳೆಯ ಸಿಎಂ. ವೈಯಕ್ತಿಕವಾಗಿ ಸಿದ್ದರಾಮಯ್ಯ ನನಗೆ ಬಹಳ ಬೇಕಾದವರು. ಅವರೊಬ್ಬ ಒಳ್ಳೆಯ ಜನನಾಯಕ. ಸಿದ್ದರಾಮಯ್ಯನಂತಹ ರಾಜಕಾರಣಿಗಳು ಸಿಗುವುದಿಲ್ಲ. ನಾವೆಲ್ಲ ಒಂದೇ ಸಮಯದಲ್ಲಿ ರಾಜಕೀಯಕ್ಕೆ ಬಂದವರು ಎಂದರು.
ಇಂದು ಇಬ್ಬರು ಸಚಿವರನ್ನು ನಾನೇ ನನ್ನ ಫಾರ್ಮ್‌ಹೌಸ್ ಗೆ ಕರೆದಿದ್ದೆ. ಕೊಪ್ಪಳದ ಕೆಲ ಅಭಿವೃದ್ಧಿ ವಿಚಾರವಾಗಿ ನಾನೇ ಕರೆದಿದ್ದೆ. ನನ್ನ ಕ್ಷೇತ್ರಕ್ಕೆ ಇಬ್ಬರನ್ನೂ ಕರೆದುಕೊಂಡು ಹೋಗುತ್ತೇನೆ. ಹೀಗಾಗಿ ನನ್ನ ಫಾರ್ಮ್‌ಹೌಸ್ ನಲ್ಲಿ ವಸತಿ ಮಾಡಿದ್ದರು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜಕೀಯ ಮಾಡುವಾಗ ಖಂಡಿತ ಮಾಡಿಯೇ ಮಾಡುತ್ತೇವೆ. ಅಭಿವೃದ್ಧಿ ದೃಷ್ಟಿಯಿಂದ ನಾವು ಇಲ್ಲಿ ಸೇರಿದ್ದೇವೆ. ಕಾಂಗ್ರೆಸ್ ನಲ್ಲಿ ಯಾರೂ ಅಸಮಾಧಾನ ಇಲ್ಲ. ಯಾರ್‍ಯಾರಿಗೋ ಲಕ್ ಇರುತ್ತದೆ. ಅದಕ್ಕೆ ಮೋದಿ ಅವರನ್ನು ಉದಾಹರಿಸಬಹುದು. ಅಡ್ವಾಣಿ ಪಿಎಂ ಆಗಬೇಕಿತ್ತು. ಅದು ಮಿಸ್ ಆಯ್ತು. ಮಲ್ಲಿಕಾರ್ಜುನ ಖರ್ಗೆ ಪಿಎಂ ಆಗಬೇಕಿತ್ತು. ಅದೂ ಸಹ ಮಿಸ್ ಆಗಿದೆ. ಹಿರಿಯ, ಕಿರಿಯ ಅಂತೇನಿಲ್ಲ. ಲಕ್ ಇದ್ದಾಗ ಯಾರು ಬೇಕಾದರೂ ಏನಾದರೂ ಆಗಬಹುದು. ನನಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ಇಲ್ಲ. ಆದರೆ, ನಮ್ಮನ್ನು ಉಪಯೋಗಿಸಿಕೊಳ್ಳುತ್ತಿಲ್ಲವಲ್ಲ ಎಂಬ ಬೇಸರ ಇದೆ ಅಷ್ಟೆ ಎಂದರು.
ಇದನ್ನೂ ಓದಿ:Rumoured ; ಜಹೀರ್ ಇಕ್ಬಾಲ್ ಜತೆ ಕಾಣಿಸಿಕೊಂಡ ನಟಿ ಸೋನಾಕ್ಷಿ ಸಿನ್ಹಾ: ಅಫೇರ್ ಬಗ್ಗೆ ಚರ್ಚೆ
ಸಚಿವ ಎಂ.ಬಿ.ಪಾಟೀಲ ಅವರ ಮೇಲೆ ಬೇಸರ ಹೊರ ಹಾಕಿದ ರಾಯರೆಡ್ಡಿ, ಗದಗ ರೈಲ್ವೆ ವಾಡೆಯಲ್ಲಿಯೂ ಒಂದು ಸಭೆ ಕರೆದಿದ್ದೇನೆ. ಅದರ ಬಗ್ಗೆ ಸಿಎಂಗೂ ಪತ್ರ ಬರೆದಿದ್ದಾರೆ. ಇದಕ್ಕಾಗಿ ಎರಡ್ಮೂರು ಸಲ ಎಂ.ಬಿ.ಪಾಟೀಲರಿಗೆ ನೆನಪು ಮಾಡಿದ್ದೇನೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಯಾಕಂದ್ರೆ ಅವರು ಬ್ಯುಸಿಮ್ಯಾನ್ ಎಂದರು. ಅದರ ಬಗ್ಗೆ ಹೇಳಿಕೊಂಡರೆ ಬೇರೆ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನು ಸುಮ್ಮನಾಗಿದ್ದೇನೆ ಎಂದರು.
ನಾನು ಸಿಎಂಗೆ ಪತ್ರ ಬರೆದಿದ್ದು ನಿಜ. ಕೊಪ್ಪಳ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಈ ಸಮಯದಲ್ಲಿ ವಿದ್ಯುತ್ ಸರಿಯಾಗಿ ಸಿಗುತ್ತಿಲ್ಲ. ಟ್ರಾನ್ಸ್‌ಫಾರ್ಮರ್‌ಗಳು ಬರ್ನ್ ಆಗುತ್ತಿವೆ. ಆದರೆ, ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಕಲಬುರಗಿ ಜೆಸ್ಕಾಂ ವ್ಯಾಪ್ತಿಗೆ ನಮ್ಮ ಜಿಲ್ಲೆ ಬರುತ್ತದೆ. ಆದರೆ, ಅಧಿಕಾರಿಗಳು ಜಿಲ್ಲೆಗೆ ಬರುತ್ತಿಲ್ಲ. ಹೀಗಾಗಿ ಸಿಎಂಗೆ ಪತ್ರ ಬರೆದಿದ್ದೇನೆ. ಜೆಸ್ಕಾಂ ಎಂಡಿಗಳು ವಿಸಿಟನ್ನೇ ಮಾಡುತ್ತಿಲ್ಲ. ಸಿಎಂ ಹಣಕಾಸು ಖಾತೆ ಹೊಂದಿರುವುದರಿಂದ ಸಿಎಂಗೆ ಪತ್ರ ಬರೆದಿದ್ದೆ. ಜನರಿಗೆ ಗೊತ್ತಾಗಲಿ ಅಂತಾ ಆ ಪತ್ರವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದೆ. ಸೆ.5 ರಂದು ಇಂಧನ ಸಚಿವರು ಸಭೆ ಕರೆದಿದ್ದಾರೆ. ನನ್ನ ಪತ್ರದಿಂದ ಜೆಸ್ಕಾಂ ಸಮಸ್ಯೆ ಪರಿಹಾರ ಆಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.