ನವದೆಹಲಿ: ಐಟಿ ಅಧಿಕಾರಿಗಳು ಕಳೆದ ವಾರ ದಾಳಿ ನಡೆಸಿ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರಿಗೆ ಸೇರಿದೆ ಎನ್ನಲಾದ ಸುಮಾರು 353 ಕೋಟಿ ರೂಗಳನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಇದೀಗ ಸಂಸದ ಧೀರಜ್ ಸಾಹು ಮಾಧ್ಯಮದ ಮುಂದೆ ತಮ್ಮ ಮೊದಲ ಪ್ರತ್ರಿಕ್ರಿಯೆ ನೀಡಿದ್ದಾರೆ.
ದೇಶದಲ್ಲೇ ಅತಿ ದೊಡ್ಡ ಐಟಿ ದಾಳಿ ಇದಾಗಿದ್ದು ಭಾರಿ ಸುದ್ದಿ ಮಾಡಿತ್ತು, ಇದಕ್ಕಾಗಿ ಬ್ಯಾಂಕ್ ಅಧಿಕಾರಿಗಳು ಸುಮಾರು ಐದು ದಿನಗಳ ಕಾಲ ಕೇವಲ ದಾಳಿಯಲ್ಲಿ ಸಿಕ್ಕ ಹಣದ ಕಂತೆಯನ್ನು ಎಣಿಕೆ ಮಾಡಲು ತೆಗೆದುಕೊಂಡಿದ್ದಾರೆ ಸುಮಾರು ಐವತ್ತು ಅಧಿಕಾರಿಗಳ ತಂಡ ಸತತ ಐದು ದಿನಗಳ ಕಾರ್ಯಾಚರಣೆ ನಡೆಸಿ ಒಟ್ಟು 353 ಕೋಟಿ ರೂಪಾಯಿ ಹಣದ ಲೆಕ್ಕಾಚಾರವನ್ನು ನೀಡಿದ್ದಾರೆ. ಇದಾದ ಬಳಿಕ ಸಾರ್ವಜನಿಕರಲ್ಲಿ ಹಲವು ಅನುಮಾನಗಳು ಮೂಡಿತ್ತು ಇದಾದ ಬಳಿಕ ಮಾಧ್ಯಮಗಳಿಗೆ ಮೊದಲ ಭಾರಿ ಕಾಂಗ್ರೆಸ್ ಸಂಸದ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಸಂಸದ ಧೀರಜ್ ಸಾಹು ಬಹಿರಂಗ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಧೀರಜ್ ಸಾಹು ಅವರು “ಈ ಹಣ ನನ್ನ ಕುಟುಂಬದ ವ್ಯಾಪಾರ ಕಂಪನಿಗಳಿಗೆ ಸಂಬಂಧಿಸಿದ್ದು ಎಂದು ನಾನು ಈಗಾಗಲೇ ಹೇಳಿದ್ದೇನೆ… ಇದು ಕಪ್ಪು ಹಣವೇ ಅಥವಾ ಬೇರೆಯಾವುದೇ ಮೂಲದ್ದೇ ಎಂಬುದನ್ನು ತಿಳಿಯಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನ್ನ ಬಳಿ ಬರಲಿ. ಇದು ‘ಬಿಳಿ’ ಸಂಪತ್ತು’. ನಾನು ವ್ಯಾಪಾರದ ಸಾಲಿನಲ್ಲಿ ಇಲ್ಲ. ನನ್ನ ಕುಟುಂಬದ ಸದಸ್ಯರು ಇದಕ್ಕೆ ಉತ್ತರಿಸುತ್ತಾರೆ…ಜನರು ಇದನ್ನು ಹೇಗೆ ನೋಡುತ್ತಿದ್ದಾರೆಂದು ನನಗೆ ಗೊತ್ತಿಲ್ಲ ಆದರೆ ಈ ಹಣಕ್ಕೂ ಕಾಂಗ್ರೆಸ್ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಅವರು, ‘ನೋಡಿ… 30-35 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ಇದ್ದೇನೆ. ಮತ್ತು ನನಗೆ ಇಂತಹ ಘಟನೆ ನಡೆದಿರುವುದು ಇದೇ ಮೊದಲು. ಇದರಿಂದ ನನ್ನ ಹೃದಯಕ್ಕೆ ತುಂಬಾ ನೋವಾಗಿದೆ. ಏಕೆಂದರೆ ನನ್ನ ಬಗ್ಗೆ ಯಾವುದೇ ವಿವಾದಗಳು ಆಗಬಾರದು ಎಂದು ನಾನು ಯಾವಾಗಲೂ ಬಯಸುತ್ತೇನೆ. ಆದರೆ ವಿವಾದ ಎದ್ದ ನಂತರ ಈಗ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಮಾಹಿತಿ ನೀಡಲು ಬಯಸುತ್ತೇನೆ. ನಾವು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ… ನಮ್ಮ ತಂದೆ ಬಡವರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದರು. ನಾವು ಅನೇಕ ಕಾಲೇಜುಗಳು ಮತ್ತು ಶಾಲೆಗಳನ್ನು ತೆರೆದಿದ್ದೇವೆ, ಆದರೆ ಇಂದು ಏನಾಗುತ್ತಿದೆ ಎಂದು ನನಗೆ ತುಂಬಾ ದುಃಖವಾಗಿದೆ ಎಂದು ಹೇಳಿದ್ದಾರೆ.
ದಾಳಿ ನಡೆದಾಗ ಸಮಯದಲ್ಲಿ ನಾನು ದೆಹಲಿಯಲ್ಲಿದ್ದೆ ಈ ವೇಳೆ ಮಾಧ್ಯಮದವರನ್ನು ಸಂಪರ್ಕಿಸಲು ಹಲವು ಭಾರಿ ಯತ್ನಿಸಿದೆ ಆದರೆ ಅದು ಸಾಧ್ಯವಾಗಿಲ್ಲ ಎಂದು ಹೇಳಿದ ಅವರು ನಾನು ರಾಜಕೀಯ ಬಿಟ್ಟು ವ್ಯಾಪಾರದತ್ತ ಗಮನ ಹರಿಸಿಲ್ಲ. ನನ್ನ ಕುಟುಂಬದ ಸದಸ್ಯರು ದೊಡ್ಡ ದೊಡ್ಡ ವ್ಯಾಪಾರ ಮಾಡುತ್ತಿದ್ದಾರೆ ಎಂದ ಅವರು, ‘ನಮ್ಮದು ಬಹಳ ದೊಡ್ಡ ಕುಟುಂಬ. ನಾವು ಒಟ್ಟು 6 ಜನ ಸಹೋದರರು. ಪ್ರತಿಯೊಬ್ಬರ ಮಕ್ಕಳೂ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ವ್ಯವಹಾರವು ಸುಮಾರು 100 ವರ್ಷಗಳಷ್ಟು ಹಳೆಯದು. ವಶಪಡಿಸಿಕೊಂಡ ನಗದು ನಮ್ಮ ಮದ್ಯ ಸಂಬಂಧಿತ ಸಂಸ್ಥೆಗಳಿಗೆ ಸೇರಿದ್ದು. ಮದ್ಯದ ವ್ಯಾಪಾರದಲ್ಲಿ ಎಲ್ಲಾ ಮಾರಾಟಗಳು ನಗದು ಆಧಾರದ ಮೇಲೆ ನಡೆಯುತ್ತವೆ, ಯಾವುದೇ ಹಣವನ್ನು ವಶಪಡಿಸಿಕೊಂಡರೂ ಅದು ಮದ್ಯ ಮಾರಾಟದಿಂದ ಬಂದಿದೆ. ಈ ಹಣ ಕಾಂಗ್ರೆಸ್ ಅಥವಾ ಯಾವುದೇ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಇದು ಸಂಪೂರ್ಣವಾಗಿ ನಮ್ಮ ಕಂಪನಿಯ ಹಣ ಎಂದು ಹೇಳಿದರು.
ಇದನ್ನೂ ಓದಿ: Pejawar Mutt; ಸಕಲ ಕಾರ್ಯ ಧುರಂಧರ, ಕುತೂಹಲ ಹೃದಯಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು