ಲಕ್ನೋ(ಅಯೋಧ್ಯೆ): ಜನವರಿ 22ರಂದು ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ನೆರವೇರಿದ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಲ್ ಇಂಡಿಯಾ ಆರ್ಗನೈಝೇಶನ್ ನ ಮುಖ್ಯ ಧರ್ಮಗುರು ಡಾ.ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಮತ್ತು ಅವರ ಕುಟುಂಬ ಸದಸ್ಯರಿಗೆ ಬೆದರಿಕೆಯನ್ನೊಡ್ಡಿ, ಫತ್ವಾವನ್ನು ಕೂಡಾ ಹೊರಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Tragedy: ಪ್ರಿಯತಮೆ ಮೇಲೆ ಮಚ್ಚು ಬೀಸಿದ ಪ್ರಿಯಕರ… ಆರೋಪಿಗಾಗಿ ಪೊಲೀಸರಿಂದ ಹುಡುಕಾಟ
ರಾಮಮಂದಿರ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ತಾನು ಮತ್ತು ತನ್ನ ಕುಟುಂಬ ಜೀವ ಬೆದರಿಕೆ ಎದುರಿಸುತ್ತಿರುವುದಾಗಿ ಇಮಾಮ್ ತಿಳಿಸಿದ್ದಾರೆ. ಹಲವಾರು ಅಪರಿಚಿತ ಮೊಬೈಲ್ ನಂಬರ್ ಗಳಿಂದ ಬೆದರಿಕೆ ಕರೆಗಳನ್ನು ಸ್ವೀಕರಿಸಿರುವುದಾಗಿ ಬಹಿರಂಗಗೊಳಿಸಿದ್ದಾರೆ.
ತನ್ನ ವಿರುದ್ಧ ಹೊರಡಿಸಿರುವ ಫತ್ವಾವನ್ನು ಬಲವಾಗಿ ಖಂಡಿಸಿರುವ ಇಮಾಮ್, ದೇಶದ ಒಗ್ಗಟ್ಟು ಮತ್ತು ಸಾಮರಸ್ಯಕ್ಕಾಗಿ ಹೋರಾಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ನನಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾಮರಸ್ಯ ಕಾಯ್ದುಕೊಳ್ಳುವ ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆದರೆ ನಾನು ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಇಲ್ಯಾಸಿ ದೂರಿರುವುದಾಗಿ ಎಎನ್ ಐ ವರದಿ ಮಾಡಿದೆ.
ಫತ್ವಾಕ್ಕೆ ಹೆದರಲ್ಲ:
ಬೆದರಿಕೆ ಹಾಗೂ ಫತ್ವಾಕ್ಕೆ ಹೆದರಲ್ಲ ಎಂದು ತಿಳಿಸಿರುವ ಇಮಾಮ್ ಇಲ್ಯಾಸಿ ಅವರು ತನ್ನ ನಿರ್ಧಾರಕ್ಕೆ ಈಗಲೂ ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮುಖ್ಯ ಮೌಲ್ವಿ ಹುದ್ದೆಯಿಂದ ಕೆಳಗಿಳಿಯುವುದಾಗಲಿ, ಕ್ಷಮೆಯಾಚಿಸುವುದನ್ನು ನಿರಾಕರಿಸಿದ್ದಾರೆ. ಅವರು ಏನು ಬೇಕಾದರು ಮಾಡಿಕೊಳ್ಳಲಿ ಎಂದು ಇಮಾಮ್ ತಿರುಗೇಟು ನೀಡಿದ್ದಾರೆ.
ತಾನು ಅಯೋಧ್ಯೆಗೆ ಭೇಟಿ ನೀಡಿದ್ದರ ಹಿಂದೆ ವಿಶಾಲ ಅರ್ಥವಿದೆ. ಆಧುನಿಕ ಭಾರತದಲ್ಲಿ ಮಾನವೀಯತೆಯೇ ಪ್ರಮುಖವಾದದ್ದು. ಇದು ನವಭಾರತದ ಅನಾವರಣ. ಮಾನವೀಯತೆಯೇ ನಮ್ಮ ಬಹುದೊಡ್ಡ ಧರ್ಮವಾಗಿದೆ. ನಮಗೆ ದೇಶವೇ ಮೊದಲ ಆದ್ಯತೆಯಾಗಬೇಕಿದೆ ಎಂದು ಇಲ್ಯಾಸಿ ವಿಶ್ಲೇಷಿಸಿದ್ದಾರೆ.