ಗಂಗಾವತಿ: ಕಾರ್ಯಕ್ರಮವೊಂದರಲ್ಲಿ ವೀರಸಾವರ್ಕರ್ ಕುರಿತು ಮಾಡಿದ ಭಾಷಣಕ್ಕೆ ಅಪರಿಚಿತ ವ್ಯಕ್ತಿಯೊರ್ವ ಕರೆ ಮತ್ತು ಪತ್ರ ಬರೆದು ನಿನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇಂತಹ ಗೊಡ್ಡು ಬೆದರಿಕೆಗೆ ಹೆದರುವ ವ್ಯಕ್ತಿ ನಾನಲ್ಲ ಎಂದು ಖ್ಯಾತ ಕಾದಂಬರಿಕಾರ ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.
ಈ ಹಿಂದೆ ಇಂತಹ ಬೆದರಿಕೆ ಕರೆಗಳು ಬಂದಿದ್ದವು. ಇತ್ತೀಚೆಗೆ ಪುನಃ ಬೆದರಿಕೆ ಕರೆ ಮತ್ತು ಪತ್ರಗಳು ಬರುತ್ತಿದ್ದು, ಈಗಾಗಲೇ ವಿಜಯನಗರ ಜಿಲ್ಲೆಯ ಎಸ್ಪಿಯವರಿಗೆ ಹಿತೈಷಿಗಳ ಸಲಹೆ ಮೇರೆಗೆ ದೂರು ನೀಡಲಾಗಿದೆ. ನಾನು ಮೂಲತಃ ಆಂದ್ರಪ್ರದೇಶದಲ್ಲಿ ಸರಕಾರಿ ಕೆಲಸ ಮಾಡಿದ್ದು, ಅಲ್ಲಿ ನಿತ್ಯವೂ ಕೊಲೆಯಂತಹ ಘಟನೆ ನೋಡಿದ್ದೇನೆ. ಯಾರಿಗೂ ಹೆದರುವ ಪ್ರಶ್ನೆ ಇಲ್ಲ. ಮುಂದೆಯೂ ಪ್ರಗತಿಪರ ವಿಚಾರಗಳು, ನೈಜ ವಿಷಯವನ್ನು ಪ್ರಸ್ತಾಪಿಸುತ್ತಲೇ ಇರುತ್ತೇನೆ ಎಂದಿದರು.
ಸದ್ಯ ಹಲವು ಕಡೆ ಪಠ್ಯ ಪುಸ್ತಕ ತಿರುಚಿ ಬರೆದಿರುವ ಕುರಿತು ಹೋರಾಟಗಳಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡಿದ್ದೇನೆ. ನಿಜ ಸಂಗತಿ ಹೇಳಲು ಹೆದರುವ ಪ್ರಶ್ನೆ ಇಲ್ಲ. ಲೇಖಕನಾದವನು ಸರ್ವರ ಹಿತ ಕಾಪಾಡಬೇಕು. ಪ್ರಶಸ್ತಿ ಹಣ ಗಳಿಕೆಗಾಗಿ ಭದ್ರತಾ ವಲಯದಲ್ಲಿ ಗುರುತಿಸಿಕೊಳ್ಳುವುದು ಸರಿಯಲ್ಲ. ಸಮಾಜಕ್ಕೆ ಎದುರಾಗಿ ಸರಕಾರವನ್ನು ಸದಾ ಪ್ರಶ್ನಿಸುವ ಗುಣ ಹೊಂದಿರಬೇಕು ಎಂದು ಹೇಳಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಬಿಎಸ್ ವೈ ಜೊತೆಗೆ ಈಗಲೂ ಡೀಲ್ ಮಾಡಿಕೊಂಡಿದ್ದಾರೆ: ಸಿಎಂ ಇಬ್ರಾಹಿಂ ವಾಗ್ದಾಳಿ
ರಾಜ್ಯದ ಪಠ್ಯರಚನೆಯ ವಿಷಯದಲ್ಲಿ ಸರಕಾರ ಕೂಡಲೇ ಮಧ್ಯೆ ಪ್ರವೇಶ ಮಾಡಿ ಈ ಹಿಂದೆ ಇದ್ದ ಪಠ್ಯಪುಸ್ತಕಗಳನ್ನೇ ಅಭ್ಯಾಸಕ್ಕೆ ಮುಂದುವರಿಸಬೇಕು. ಇಲ್ಲದಿದ್ದರೆ ಇತಿಹಾಸಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂದರು.