ವಾಡಿ: ಜನರ ಪ್ರೀತಿ, ವಿಶ್ವಾಸ ನನ್ನ ಜತೆಗಿರುವಾಗ ಅತೃಪ್ತರು ಮಾಡುವ ಆರೋಪಗಳಿಗೆ ನಾನು ಹೆದರುವುದಿಲ್ಲ. ಏ.20ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮತದಾರರಲ್ಲಿ ಮನವಿ ಮಾಡಿದರು.
ಚಿತ್ತಾಪುರ ಮೀಸಲು ಮತಕ್ಷೇತ್ರ ವ್ಯಾಪ್ತಿಯ ನಾಲವಾರ, ಸನ್ನತಿ, ಕನಗನಹಳ್ಳಿ, ಬನ್ನೇಟಿ, ರಾಂಪುರಹಳ್ಳಿ, ಉಳಂಡಗೇರಾ, ಕೊಲ್ಲೂರ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಜನರಿಗೆ ನನ್ನ ಮೇಲೆ ನಂಬಿಕೆಯಿದೆ. ಯಾರ ಆರೋಪಗಳಿಗೂ ನಾನು ಕಿವಿಗೊಡುವುದಿಲ್ಲ. ಚುನಾವಣೆಯಲ್ಲಿ ಜನರು ನನಗೆ ನೀಡುವ ಆಶೀರ್ವಾದವೇ ವಿರೋಧಿಗಳಿಗೆ ಉತ್ತರವಾಗಲಿದೆ ಎಂದರು.
ನನ್ನನ್ನು ಗೆಲ್ಲಿಸಿದರೆ ಚಿತ್ತಾಪುರ ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಕಳೆದ ಚುನಾವಣೆಯಲ್ಲಿ ಮಾತು ಕೊಟ್ಟಿದ್ದೆ.
ಅದರಂತೆ ನಡೆದುಕೊಂಡಿದ್ದೇನೆ. ಅಭಿವೃದ್ಧಿಯಲ್ಲಿ ಶೂನ್ಯ ಸ್ಥಿತಿಯಲ್ಲಿದ್ದ ಚಿತ್ತಾಪುರ ಕ್ಷೇತ್ರವನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಿದ್ದೇನೆ ಎನ್ನುವುದಕ್ಕೆ ಕಾಮಗಾರಿಗಳು ಸಾಕ್ಷಿಯಾಗಿ ನಿಂತಿವೆ ಎಂದು ಹೇಳಿದರು.
ರಾಯಚೂರು ಕೃಷಿ ವಿವಿ ನಿರ್ದೇಶಕ, ಕಾಂಗ್ರೆಸ್ ಹಿರಿಯ ಮುಖಂಡ ವೀರಣ್ಣಗೌಡ ಪರಸರೆಡ್ಡಿ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಚಿತ್ತಾಪುರ ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ಶಂಕ್ರಯ್ಯಸ್ವಾಮಿ ಮದರಿ, ಟೋಪಣ್ಣ ಕೋಮಟೆ, ಜಾಫರ್ ಪಟೇಲ, ರವಿ ಚವ್ಹಾಣ, ಚಂದ್ರಸೇನ ಮೇನಗಾರ, ಯುನ್ಯೂಸ್ ಪ್ಯಾರೆ, ಸಾಯಬಣ್ಣ ಬನ್ನೇಟಿ, ರಾಧಾಕೃಷ್ಣ ಅಂಬೇಕರ, ಜಗದೀಶ ಸಿಂಧೆ, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸೈದಾಪುರ, ಹರೀಶ್ವಚಂದ್ರ ಕರಣಿಕ, ರಾಜಾ ಪಟೇಲ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.