Advertisement

ಸಾಹಿತಿಗೆ ಪ್ರಶಸ್ತಿ ಗುರಿಯಲ್ಲ:ಕಾಯ್ಕಿಣಿ

06:52 AM Jan 31, 2019 | |

ಕೋಲ್ಕತಾ: ‘ಪ್ರಶಸ್ತಿಗಳು ಮ್ಯಾರಥಾನ್‌ ವೇಳೆ ಓಟಗಾರನಿಗೆ ನೀಡುವ ಚಪ್ಪಾಳೆಯ ಪ್ರೋತ್ಸಾಹವಿದ್ದಂತೆ. ಆ ಚಪ್ಪಾಳೆಗಳತ್ತ ಓಟಗಾರ ಮರುಳಾಗುವ ಹಾಗಿಲ್ಲ. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶವಿಲ್ಲ. ಓಟ ಮುಗಿಸುವುದೊಂದೇ ಅವನ ಗುರಿ. ಹಾಗಾಗಿ, ಆತ ನಿರಂತರವಾಗಿ ಸಾಗುತ್ತಲೇ ಇರಬೇಕಾಗುತ್ತದೆ’. 2018ರ ಸೌತ್‌ ಏಷ್ಯನ್‌ ಲಿಟರೇಚರ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಕನ್ನಡದ ಸಾಹಿತಿ ಜಯಂತ್‌ ಕಾಯ್ಕಿಣಿ, ತಮಗೆ ಸಂದ ಪ್ರತಿಷ್ಠಿತ ಗೌರವದ ಬಗ್ಗೆ ಹೇಳಿದ ಮಾತುಗಳಿವು.

Advertisement

ಕಾಯ್ಕಿಣಿ ಅವರ ಕಥೆಗಳ ಇಂಗ್ಲೀಷ್‌ ಅನುವಾದದ ಕೃತಿಯಾದ ‘ನೋ ಪ್ರಸೆಂಟ್ಸ್‌ ಪ್ಲೀಸ್‌: ಮುಂಬೈ ಸ್ಟೋರಿಸ್‌’ ಎಂಬ ಕೃತಿಗೆ ಅನುವಾದಕ ತೇಜಸ್ವಿನಿ ನಿರಂಜನ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿರುವ ಅವರು, ಪಿಟಿಐನೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.

”ಅನುವಾದಿತ ಕೃತಿಯೊಂದಕ್ಕೆ ಪ್ರಶಸ್ತಿ ಬಂದಿರುವುದು ಒಳ್ಳೆಯ ವಿಚಾರವೇ. ಇದರಿಂದ, ಇತರ ಲೇಖಕರ ಕೃತಿಗಳ ಅನುವಾದಿತ ಪುಸ್ತಕಗಳನ್ನು ಮುದ್ರಿಸಲು ಮುದ್ರಕರು ಮುಂದೆ ಬರಬಹುದು. ಆದರೆ, ಈ ಪ್ರಶಸ್ತಿಗಳು ಸಾಹಿತಿಗಳಿಗೆ ಪ್ರಮುಖವಾಗಬಾರದು. ಏಕೆಂದರೆ, ಸಾಹಿತಿ ಪ್ರಶಸ್ತಿಗಾಗಿಯೇ ಸಾಹಿತ್ಯ ರಚಿಸುತ್ತಾನೆ ಎಂಬ ಅಭಿಪ್ರಾಯ ಜನರಲ್ಲಿ ಮೂಡದಂತೆ ನೋಡಬೇಕಿರುವುದು ಸಾಹಿತಿಗಳ ಜವಾಬ್ದಾರಿಯಾಗಿರುತ್ತದೆ” ಎಂದು ಅವರು ತಿಳಿಸಿದ್ದಾರೆ.

ಇನ್ನು, ಪುಸ್ತಕದ ಬಗ್ಗೆ ಮಾತನಾಡಿದ ಅವರು, ನಾನು ಈ ಕತೆಗಳನ್ನು ಸ್ಮಾರ್ಟ್‌ ಫೋನ್‌ ಯುಗದ ಆರಂಭಕ್ಕೂ ಮುನ್ನ ಬರೆದಿದ್ದೆ. ಅಸಲಿಗೆ ಮುಂಬೈ ಒಂದು ಅಧ್ಯಾತ್ಮಿಕ ನಗರ. ಹಾಸಿಗೆ ಇದ್ದಷ್ಟು ಕಾಲು ಚಾಚುವ ಸಂಸ್ಕೃತಿಯುಳ್ಳ ಜನರಿರುವ ನಗರ. ಅಂಥ ನಗರ ಜಾಗತೀಕರಣದ ರಂಗಿನಲ್ಲಿ ಹೇಗೆ ಪಲ್ಲಟಗೊಂಡಿತು? ಅಲ್ಲಿನ ಜನಜೀವನ ಹೇಗೆ ಬದಲಾಗುತ್ತಾ ಹೋಯಿತು ಎಂಬುದನ್ನು ನಾನು ಅಲ್ಲಿ ಕಳೆದ 22 ವರ್ಷದ ಜೀವನಾನುಭವದ ಮೇಲೆ ಬರೆದೆ” ಎಂದಿದ್ದಾರೆ. ಅಂದಹಾಗೆ, ಅವರ ಅನುವಾದಿತ ಕೃತಿ ಹೊಸ ತಲೆಮಾರಿನ ಓದುಗರಿಗೆ ಮುಟ್ಟಿರುವುದು ಅವರಿಗೆ ಖುಷಿ ತಂದುಕೊಟ್ಟಿದೆಯಂತೆ. ಆ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಅವರು,” ಈಗ, ಇಂಗ್ಲೀಷ್‌ನಲ್ಲಿ ಅನುವಾದವಾದ ನಂತರ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಹೊಸ ತಲೆಮಾರಿನ ಓದುಗರಿಗೆ ಈ ಪುಸ್ತಕ ಮುಟ್ಟಿರುವುದು ಖುಷಿ ಕೊಟ್ಟಿದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next