ಸಿಲ್ಚಾರ್: ಎನ್‌ಆರ್‌ಸಿ (ರಾಷ್ಟ್ರೀಯ ಪೌರರ ರಿಜಿಸ್ಟ್ರಿ) ಯಿಂದ ಒಬ್ಬನೇ ಒಬ್ಬ ಭಾರತೀಯನನ್ನು ಕೂಡ ಕೈಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಸ್ಸಾಮಿನ ಸಿಲ್ಚಾರ್ ನಲ್ಲಿ ಇಂದು ಶುಕ್ರವಾರ ನಡೆದ ಬೃಹತ್ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಎನ್‌ಆರ್‌ಸಿ ಗೆ ಸಂಬಂಧಿಸಿ ಜನರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ತೊಂದರೆಗಳ ಬಗ್ಗೆ ಸರಕಾರಕ್ಕೆ ಪೂರ್ಣ ಅರಿವಿದೆ ಎಂದರು.
ಎನ್‌ಆರ್‌ಸಿ ದಶಕಗಳ ಕಾಲದಿಂದ ಬಾಕಿ ಉಳಿದಿದೆ. ನಾವು ಇದರ ಪ್ರಕ್ರಿಯೆಯನ್ನು ಸರಳಗೊಳಿಸಲು ಸುಪ್ರೀಂ ಕೋರ್ಟಿನಲ್ಲಿ ವಿಶೇಷ ಆಸ್ಥೆಯನ್ನು ತೋರಿದೆವು ಎಂದು ಮೋದಿ ಹೇಳಿದರು.
ಸರಕಾರದ ಸಂಸತ್ತಿನಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಪಾಸು ಮಾಡುವ ದಿಶೆಯಲ್ಲಿ ಕೆಲಸ ಮಾಡುತ್ತಿದೆ ಎಂದವರು ಹೇಳಿದರು.
ಪೌರತ್ವ (ತಿದ್ದುಪಡಿ) ಮಸೂದೆಯನ್ನು ತರುವತ್ತ ನಮ್ಮ ಸರಕಾರ ಶ್ರಮಿಸುತ್ತಿದೆ. ಇದು ಭಾವನೆ ಮತ್ತು ಜನರ ಬದುಕಿನೊಂದಿಗೆ ಬೆಸೆದಿರುವ ವಿಚಾರವಾಗಿದೆ. ಇದು ಯಾರೊಬ್ಬರ ಲಾಭಕ್ಕಾಗಿ ಇರುವುದಲ್ಲ. ಹಿಂದೆ ಎಸಗಲಾದ ಅನ್ಯಾಯವನ್ನು ಸರಿಪಡಿಸುವ ಉದ್ದೇಶ ಹೊಂದಿರುವ ಮಸೂದೆ ಇದಾಗಿದೆ. ಅದು ಸಂಸತ್ತಿನಲ್ಲಿ ಬೇಗನೆ ಪಾಸಾಗುವುದೆಂದು ಹಾರೈಸಲಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.