Advertisement

ಅಸುನೀಗಿದ ಉಗ್ರ ಐಸಿಸ್‌ ಸದಸ್ಯ ಅಲ್ಲ

03:45 AM Mar 09, 2017 | Harsha Rao |

ಲಕ್ನೋ/ ನವದೆಹಲಿ: ಠಾಕೋರ್‌ಗಂಜ್‌ನ ಎನ್‌ಕೌಂಟರ್‌ನಲ್ಲಿ ಹತನಾದ ಸೈಫ‌ುಲ್ಲಾ ಐಸಿಸ್‌ ಉಗ್ರ ಅಲ್ಲ. ಆದರೆ, ಐಸಿಸ್‌ನಿಂದ ಪ್ರೇರಿತಗೊಂಡು ಸ್ವಯಂ ಉಗ್ರ ಆಗಿರಬಹುದು ಎಂದು ಉತ್ತರ ಪ್ರದೇಶ ಪೊಲೀಸ್‌ ಹೇಳಿದೆ.

Advertisement

ಉಗ್ರನ ಮೃತದೇಹದೊಂದಿಗೆ ಇಸ್ಲಾಮಿಕ್‌ ಸ್ಟೇಟ್ಸ್‌ ಸಂಘಟನೆ (ಐಸಿಸ್‌) ಧ್ವಜ ಸಿಕ್ಕಿದೆ. ಅಲ್ಲದೆ, ಇಂಗ್ಲಿಷ್‌ ಮತ್ತು ಉರ್ದುವಿನಲ್ಲಿರುವ ಐಸಿಸ್‌ ಸಾಹಿತ್ಯಗಳೂ ಅಲ್ಲಿದ್ದವು. ಐಸಿಸ್‌ ಐಡಿಯಾಲಜಿಯಿಂದ ಆತ ಪ್ರಭಾವಿತನಾಗಿದ್ದನಷ್ಟೇ. ಆದರೆ, ಮೊಬೈಲ್‌ ಕರೆಗಳ ಮಾಹಿತಿ ನೋಡಿದರೆ ಆತನಿಗೆ ಜಾಗತಿಕ ನಂಟೂ ಇಲ್ಲವೆಂಬುದು ಸ್ಪಷ್ಟ. ಐಸಿಸ್‌ ಉಗ್ರ ಎನ್ನಲು ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ ಎಂದು ಉ.ಪ್ರ. ಎಡಿಜಿ ದಲ್ಜಿತ್‌ ಚೌಧರಿ ಸ್ಪಷ್ಟಪಡಿಸಿದ್ದಾರೆ. ಸೈಫ‌ುಲ್ಲಾ ಐಸಿಸ್‌- ಖೊರಸಾನ್‌ ಉಗ್ರಪಡೆಯ ಸದಸ್ಯ ಎಂಬುದನ್ನು ತಳ್ಳಿಹಾಕಿದ್ದಾರೆ. ಯಾವ ಸಂಘಟನೆಗೆ ಸೇರಿದ್ದ ಎನ್ನುವ ವಿಚಾರ ತಿಳಿದು ಬಂದಿಲ್ಲ.

ರಾಜಕೀಯ ಕೆಸರಾಟ: ಲಕ್ನೋದಲ್ಲಿನ ಉಗ್ರನ ದಾಳಿ ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಿಜೆಪಿ ಸರ್ಕಾರ ಮುಸಲ್ಮಾನರನ್ನು ಪ್ರತ್ಯೇಕವಾಗಿ ನೋಡುತ್ತಿರುವುದಕ್ಕೆ ಇಂಥ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಆರೋಪಿಸಿದ್ದಾರೆ. “ಕೇಂದ್ರ ಸರ್ಕಾರಕ್ಕೆ ಇದು ಎಚ್ಚರಿಕೆಯ ಗಂಟೆ. ಮುಸ್ಲಿಮ್‌ ಯುವಕರಿಗೆ ಸಮಾನ ಹಕ್ಕು, ಅವಕಾಶ ನೀಡಲು ಸರ್ಕಾರ ಮುಂದಾಗಬೇಕು. ಮತಾಂಧತೆ ಎನ್ನುವುದು ಯಾವತ್ತೂ ಸಮಸ್ಯೆ ಸೃಷ್ಟಿಸುವಂಥದ್ದೇ. ಸರ್ಕಾರ ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದಿದ್ದಾರೆ.

ಉಗ್ರನ ಸದೆಬಡಿಯುವಲ್ಲಿ ಯಶಸ್ವಿಯಾದ ಎಟಿಎಸ್‌ ಕಾರ್ಯಾಚರಣೆಯನ್ನು ಬಿಜೆಪಿ ಕೊಂಡಾಡಿದೆ. “ಉಗ್ರವಾದ ಮಟ್ಟಹಾಕಲು ನಮ್ಮ ಪೊಲೀಸ್‌ ಹಾಗೂ ಇತರೆ ರಕ್ಷಣಾ ದಳಗಳು ಅಪಾರ ಶ್ರಮಿಸುತ್ತವೆ. ಎಲ್ಲರೂ ಒಗ್ಗಟ್ಟಾಗಿ ಉಗ್ರರನ್ನು ನಾಶ ಮಾಡುತ್ತಿದ್ದಾರೆ’ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್‌ ಶರ್ಮಾ ಹೇಳಿದ್ದಾರೆ. “ಉಗ್ರವಾದದಂಥ ವಿಚಾರದಲ್ಲಿ ಮೃದುತನ ತಾಳುವುದು, ರಾಜಕೀಯ ಮಾಡುವುದು ಸರಿಯಲ್ಲ’ ಎಂದೂ ಹೇಳಿದ್ದಾರೆ.

ಎನ್‌ಐಎ ತನಿಖೆ: ಲಕ್ನೋ ಬಳಿಯ ಉಗ್ರನ ಎನ್‌ಕೌಂಟರ್‌ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆಯು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಿದೆ. ಸೈಫ‌ುಲ್ಲಾ ಸಹಚರರು ದೇಶದ ಬೇರೆ ಬೇರೆ ಕಡೆಯೂ ಓಡಾಡಿದ್ದು, ಈ ಬಗ್ಗೆ ಸಮಗ್ರ ತ‌ನಿಖೆಯನ್ನು ಎನ್‌ಐಎ ಮೂಲಕ ಮಾಡಲು ಇಲಾಖೆ ನಿರ್ಧರಿಸಿದೆ.

Advertisement

ಕಾಶ್ಮೀರದಲ್ಲೂ ಉಗ್ರರ ದಾಳಿ
ಇನ್ನೊಂದೆಡೆ ಉಗ್ರವಾದಕ್ಕೆ ದಕ್ಷಿಣ ಕಾಶ್ಮೀರವೂ ಬೆಚ್ಚಿಬಿದ್ದಿದೆ. ಶೋಪಿಯನ್‌ನಲ್ಲಿನ ಪೊಲೀಸ್‌ ಅಧಿಕಾರಿಯ ಮನೆ ಮೇಲೆ 12 ಉಗ್ರರ ತಂಡ ದಾಳಿ ನಡೆಸಿ, ಕುಟುಂಬಸ್ಥರನ್ನು ಒತ್ತೆಯಾಳಾಗಿರಿಸಿಕೊಂಡಿತ್ತು. ಅಧಿಕಾರಿ ಮನೆಯಲ್ಲಿ ಇಲ್ಲದಿದ್ದಾಗ ಈ ಘಟನೆ ನಡೆದಿದ್ದು, ಮನೆಯಲ್ಲಿನ ವಸ್ತುಗಳನ್ನೆಲ್ಲ ಉಗ್ರರು ನಾಶಪಡಿಸಿದ್ದಾರೆ. “ಪೊಲೀಸರೆಲ್ಲ ನಮ್ಮ ಆಸ್ತಿಪಾಸ್ತಿಗಳನ್ನು ನಾಶ ಮಾಡಿದ್ದಾರೆ. ನಮಗೂ ನಿಮ್ಮಂತೆ ವಸತಿ ಕಲ್ಪಿಸಿ’ ಎಂದು ಉಗ್ರರು ಆಕ್ರೋಶ ಹೊರಹಾಕಿದ್ದರು. ಕೊನೆಗೂ ಕಾರ್ಯಾಚರಣೆಯಲ್ಲಿ ಯಶಸ್ವಿಗೊಂಡ ಪೊಲೀಸರು, “ಇಂಥ ಕೃತ್ಯಕ್ಕೆ ಇಳಿಯುವ ಮುನ್ನ ನಿಮಗೂ ಕುಟುಂಬ ಇದೆ ಎಂಬುದು ನೆನಪಿರಲಿ’ ಎಂದು ಡಿಜಿಪಿ ಶೇಷ್‌ ಪೌಲ್‌, ಉಗ್ರರಿಗೆ ಖಡಕ್ಕಾಗಿ ಎಚ್ಚರಿಕೆ ರವಾನಿಸಿದ್ದಾರೆ.

ಉಗ್ರ ಬಲ್ವಿಂದರ್‌ಗೆ ಅಮೆರಿಕ ಜೈಲು!
ನ್ಯೂಯಾರ್ಕ್‌: ಸಿಖVರ ಪ್ರತ್ಯೇಕ ರಾಜ್ಯ “ಖಲಿಸ್ತಾನ’ಕ್ಕೆ ಬೆಂಬಲವಾಗಿ ನಿಂತಿದ್ದ ಭಾರತೀಯ ಮೂಲದ ಉಗ್ರ ಬಲ್ವಿಂದರ್‌ ಸಿಂಗ್‌ಗೆ ನೇವಾಡಾ ಜಿಲ್ಲಾ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಖಲಿಸ್ತಾನ ಹೋರಾಟಗಾರರಿಗೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವು ನೀಡಿದ ಆರೋಪವನ್ನು ಬಲ್ವಿಂದರ್‌ ಎದುರಿಸುತ್ತಿದ್ದರು. ನೇವಾಡ ಜಿಲ್ಲಾ ಅಟಾರ್ನಿ ಡೇನಿಯಲ್‌ ಬೋಗ್ಡೆನ್‌, “ಅಮೆರಿಕ ಮತ್ತು ವಿದೇಶಿ ಸಮುದಾಯಗಳ ರಕ್ಷಣೆ ವಿಚಾರದಲ್ಲಿ ಕಾನೂನು ಯಾವತ್ತೂ ಒಂದೇ ಎನ್ನುವುದಕ್ಕೆ ಈ ಶಿಕ್ಷೆ ಸಾಕ್ಷಿ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next