ನವಲಗುಂದ: ವ್ಯಾಪಾರ ಮಾಡೋಕೆ ನಾನು ಶೆಟ್ಟರ ಅಲ್ಲ, ನೂರು ಸುಳ್ಳು ಹೇಳಿ ಅದೇ ಸತ್ಯವೆಂದು ಹೇಳುವ ಜೋಶಿಯೂ ಅಲ್ಲ. ನಾನು ಒಕ್ಕಲುತನ ಮಾಡುತ್ತೇನೆ. ಸುಳ್ಳು ಹೇಳುವ ಅಭ್ಯಾಸ ನನಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಉದ್ಘಾಟನೆಗೆ ಆಗಮಿಸಿದ್ದ ವೇಳೆ ಪಕ್ಞಾತೀತ ಹೋರಾಟ ಸಮಿತಿ ರೈತ ಹೋರಾಟಗಾರರು ಸಚಿವರಿಗೆ ಮುತ್ತಿಗೆ ಹಾಕಿ ಪಶ್ನೆಗಳ ಸುರಿಮಳೆ ಗೈದರು. ಈ ವೇಳೆ ಮೇಲಿನಂತೆ ಸಚಿವರು ಪ್ರತಿಕ್ರಿಯಿಸಿದರು. ಪಕ್ಞಾತೀತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ, ಉಪವಾಸ ಸತ್ಯಾಗ್ರಹ ಕುಳಿತ ಸಂದರ್ಭದಲ್ಲಿ ರೈತರಿಗೆ ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ.
ರೈತರಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಮಾತನಾಡಿದ ಉಸ್ತುವಾರಿ ಸಚಿವರು, ಗೋವಾ ರಾಜ್ಯದಲ್ಲಿ ಬಿಜೆಪಿ ಆಡಳಿತ ಇರುವುದರಿಂದ ಅಲ್ಲಿ ಮೊದಲು ನಾವು ಹೋಗಿ ಮಾತುಕತೆ ಮಾಡಿಕೊಂಡು ಬರುತ್ತೇವೆಂದು ಬಿಜೆಪಿಯವರು ಸರ್ವ ಪಕ್ಷ ಸಭೆಯಲ್ಲೇ ಭರವಸೆ ನೀಡಿದ್ದರು.
ಬಿಜೆಪಿಯವರು ಗೋವಾ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ದಿನಾಂಕ ನಿಗದಿ ಮಾಡಿದರೆ ನಾವೆಲ್ಲರೂ ಗೋವಾಕ್ಕೆ ತೆರಳಲು ಸಿದ್ಧರಿದ್ದೇವೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ರೈತರು, ನೀವು ಅವರ ಮೇಲೆ, ಅವರು ನಿಮ್ಮ ಮೇಲೆ ದೋಷಾರೋಪ ಮಾಡುತ್ತಾರೆ. ರೈತರು ಏನು ಮಾಡಬೇಕು ನೀವು ಹೇಳಿ ಎಂದು ಪಟ್ಟು ಹಿಡಿದರು.
ಕಡಲೆ ಬೀಜದ ದರ ಧಾರವಾಡ ಜಿಲ್ಲೆಯಲ್ಲಿ ಒಂದಿದ್ದರೆ, ಗದಗ ಜಿಲ್ಲೆಯಲ್ಲಿ ಮತ್ತೂಂದು ದರವಿದೆ. ಈ ಸಮಸ್ಯೆ ಸರಿಪಡಿಸಬೇಕೆಂದು ಆಗ್ರಹಿಸಿದರು. ಶಾಸಕ ಎನ್.ಎಚ್. ಕೋನರಡ್ಡಿ, ರೈತ ಮುಖಂಡ ಸುಬಾಸಚಂದ್ರಗೌಡ ಪಾಟೀಲ, ರವಿಗೌಡ ಪಾಟೀಲ, ಸಂಗಪ್ಪ ನಿಡವಣಿ, ಡಿ.ವಿ. ಕುರಹಟ್ಟಿ, ಸದುಗೌಡ ಪಾಟೀಲ ಇತರರಿದ್ದರು.