Advertisement

112 ಅಲ್ಲ, 50 ಮರವಷ್ಟೇ ಸ್ಥಳಾಂತರ?

12:40 PM Mar 13, 2017 | Team Udayavani |

ಬೆಂಗಳೂರು: ಜಯಮಹಲ್‌ ರಸ್ತೆ ವಿಸ್ತರಣೆ ವೇಳೆ ಮರಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾಮಗಾರಿ ನಡೆಸಲು ಉದ್ದೇಶಿಸಿರುವ ಬಿಬಿಎಂಪಿ, ಇದಕ್ಕಾಗಿ ಇನ್‌ಸ್ಟಿಟ್ಯೂಟ್‌ ಆಫ್ ವುಡ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ (ಐಡಬ್ಲ್ಯುಎಸ್‌ಟಿ) ಸಂಸ್ಥೆಯ ನೆರವು ಪಡೆಯುತ್ತಿದೆ. 

Advertisement

ಜಯಮಹಲ್‌ ರಸ್ತೆ ವಿಸ್ತರಣೆ ವೇಳೆ 112 ಮರಗಳನ್ನು ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾದ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು, ಸಾರ್ವಜನಿಕರಿಂದ ಆಕ್ಷೇಪಣೆ ಕೇಳಿದ್ದರು. ರಸ್ತೆ ವಿಸ್ತರಣೆಗಾಗಿ ಮರಗಳನ್ನು ಕಡಿದುಹಾಕು ಪಾಲಿಕೆಯ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಮರಗಳಿಗೆ ಹಾನಿಯಾಗದಂತೆ ರಸ್ತೆ ವಿಸ್ತರಣೆ ಮಾಡಲು ಪಾಲಿಕೆ ಐಡಬ್ಲ್ಯುಎಸ್‌ಟಿ ನೆರವು ಕೋರಿದೆ. 

ಈಾಗಲೇ ರಸ್ತೆಯಲ್ಲಿರುವ ಮರಗಳನ್ನು ಪರಿಶೀಲನೆ ನಡೆಸಿರುವ ಐಡಬ್ಲ್ಯುಎಸ್‌ಟಿಯ ತಜ್ಞರು ಎಷ್ಟು ಮರಗಳನ್ನು ಸ್ಥಳಾಂತರಿಸಬೇಕಾಗುತ್ತದೆ, ಯಾವ ಮರಗಳನ್ನು ಉಳಿಸಿಕೊಂಡು ರಸ್ತೆ ಕಾಮಗಾರಿ ನಡೆಸಬಹುದು, ರಸ್ತೆಗಳ ನಡುವಿನ ಜಾಗದಲ್ಲಿ ನೆಡಬೇಕಾದ ಗಿಡಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಸಂಸ್ಥೆಯ ಅಧ್ಯಯನ ವರದಿ ಪಾಲಿಕೆಗೆ ನೆರವಾಗಲಿದೆ.

ದಂಡು ರೈಲ್ವೆ ನಿಲ್ದಾಣದಿಂದ ಬೆಂಗಳೂರು ದೂರದರ್ಶನ ಕೇಂದ್ರವರೆಗಿನ ರಸ್ತೆಯನ್ನು 30 ಮೀಟರ್‌ ಮತ್ತು ದೂರದರ್ಶನ ಕೇಂದ್ರದಿಂದ ಮೇಖೀÅ ವೃತ್ತದವರೆಗೆ 45 ಮೀಟರ್‌ ರಸ್ತೆ ವಿಸ್ತರಿಸುವುದು ಪಾಲಿಕೆಯ ಯೋಜನೆಯಾಗಿದೆ. ಇದಕ್ಕಾಗಿ ಸರ್ವೆ ನಡೆಸಿ ಎಷ್ಟು ಮರಗಳನ್ನು ಕತ್ತರಿಸಬೇಕು ಎಂಬು ವರದಿ ಸಿದ್ಧಪಡಿಸಲಾಗಿದೆ.

ವರದಿಯಲ್ಲಿ 112 ಮರಗಳಿಗೆ ಹಾನಿಯಾಗಲಿದೆ ಎಂಬ ಅಂಶ ಉಲ್ಲೇಖೀಸಲಾಗಿತ್ತು. ಆ ಹಿನ್ನೆಲೆ ಯಲ್ಲಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಮರ ಕತ್ತರಿಸುವ ಯೋಜನೆಯನ್ನು ಕೈಬಿಟ್ಟು ಮರಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ. 

Advertisement

50 ಮರಗಳ ಸ್ಥಳಾಂತರ ಅನಿವಾರ್ಯ!: ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ನಡೆಸಿದ ಟೋಟಲ್‌ ಸ್ಪೇಷನ್‌ ಸರ್ವೆಯಲ್ಲಿ ಒಟ್ಟು 280 ಮರಗಳನ್ನು ಗುರುತಿಸಲಾಗಿದೆ. ಈ ಪೈಕಿ 112 ಮರಗಳನ್ನು ತೆರವುಗೊಳಿಸಬೇಕಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿತ್ತು.

ಆದರೆ ಇತ್ತೀಚಿಗೆ ರಸ್ತೆಯಲ್ಲಿರುವ ಮರಗಳನ್ನು ಪರಿಶೀಲನೆ ನಡೆಸಿರುವ ಐಡಬ್ಲ್ಯುಎಸ್‌ಟಿ ತಜ್ಞರು 40-50 ಮರಗಳನ್ನು ಪಕ್ಕದ ಅರಮನೆ ಮೈದಾನದ ಆವರಣಕ್ಕೆ ಸ್ಥಳಾಂತರ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಮರಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸಬಹುದು ಎಂದು ತಜ್ಞರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಪ್ರತಿ ಮರ ಸ್ಥಳಾಂತರಕ್ಕೆ 50 ಸಾವಿರ ರೂ.!: ಜಯಮಹಲ್‌ ರಸ್ತೆಯಲ್ಲಿರುವ ಮರಗಳನ್ನು ಅರಮನೆ ಮೈದಾನಕ್ಕೆ ಸ್ಥಳಾಂತರ ಮಾಡಿ ನೆಡಬೇಕಾದರೆ ಪ್ರತಿ ಮರಕ್ಕೆ ಸುಮಾರು 50 ಸಾವಿರ ರೂ. ವೆಚ್ಚವಾಗಲಿದೆ. ಐಡಬ್ಲ್ಯುಎಸ್‌ಟಿ ತಜ್ಞರು 50 ಮರಗಳನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ತಿಳಿಸಿದ್ದು, ಒಟ್ಟಾರೆಯಾಗಿ ಮರಗಳ ಸ್ಥಳಾಂತರಕ್ಕೆ 25 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಶೀಘ್ರದಲ್ಲಿಯೇ ಐಡಬ್ಲ್ಯುಎಸ್‌ಟಿಯಿಂದ ವರದಿ ಪಾಲಿಕೆ ಕೈಸೇರಲಿದೆ. ಎಷ್ಟು ಮರಗಳನ್ನು ಸ್ಥಳಾಂತರ ಮಾಡಬೇಕು ಎಂಬುದು ವರದಿ ನಂತರ ತಿಳಿಯಲಿದೆ. ಇದರೊಂದಿಗೆ ರಸ್ತೆಗಳ ನಡುವಿನ ಖಾಲಿ ಜಾಗದಲ್ಲಿ ಹೊಸದಾಗಿ ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ. ಮರ ಸ್ಥಳಾಂತರಕ್ಕೆ ಅಗತ್ಯ ವೆಚ್ಚವನ್ನು ಪಾಲಿಕೆಯಿಂದ ಭರಿಸಲಾಗುವುದು. 
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವಿಶೇಷ ವರದಿ 

Advertisement

Udayavani is now on Telegram. Click here to join our channel and stay updated with the latest news.

Next