ಮಲೆನಾಡು ಎಂದ ಕೂಡಲೇ ನೆನಪಾಗುವುದು ಹಚ್ಚ ಹಸಿರಾದ ಬೆಟ್ಟ-ಗುಡ್ಡಗಳು, ಭವ್ಯವಾದ ಶಿಲ್ಪಕಲೆಯುಳ್ಳ ದೇವಸ್ಥಾನಗಳು, ಪ್ರಾಣಿ ವರ್ಗ ಹಾಗೂ ಅಲ್ಲಿನ ಶ್ರೀಮಂತ ಹೃದಯದ ಜನರು. ಮಲೆನಾಡ ಜನರ ಬದುಕಿನ ಶೈಲಿಗೂ ಇಲ್ಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಮಲೆನಾಡು ಹಸಿರು ತೋರಣಗಳ ನಾಡು. ಅಲ್ಲಿ ಕೃಷಿಯಲ್ಲಿ ತೊಡಗುವವರ ಸಂಖ್ಯೆ ಹೆಚ್ಚು. ಉದಾ ; ಕರಾವಳಿಯಲ್ಲಿ ಮೀನುಗಾರಿಕೆ ಹೇಗೋ ಅಲ್ಲಿ ಕೃಷಿಯೂ ಹಾಗೆ, ಒಂದೂರಿನಲ್ಲಿ 100 ಮನೆ ಇದೆಯೆಂದಾದರೆ ಅದರಲ್ಲಿ 80ರಷ್ಟು ಮನೆಯವರು ಹೊಲ, ಗದ್ದೆ,ತೋಟ ಹೊಂದಿರುತ್ತಾರೆ. ಮನೆಯಲ್ಲಿ ತಮ್ಮದೇ ಆದ ಸ್ವಲ್ಪಮಟ್ಟಿಗೆ ತೋಟ ಅಥವಾ ಗದ್ದೆ ಇದ್ದರೂ ಕೂಡ ಊರಿನ ಎಸ್ಟೇಟ್ ಗಳಿಗೆ ಹೋಗಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.
ಮಲೆನಾಡಿನ ಯಾವುದೇ ಮನೆಗಳಿಗೆ ಭೇಟಿ ಕೊಟ್ಟರೆ ಸುಮ್ಮನೆ ಕೂತು ಕಾಲಹರಣ ಮಾಡುವಂತಿಲ್ಲ, ಏಕೆಂದರೆ ಪ್ರತಿಯೊಂದು ಮನೆಯೂ ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವೀಕ್ಷಣೀಯವಾಗಿದೆ. ವಿಭಿನ್ನವಾದ ವಿನ್ಯಾಸದೊಂದಿಗೆ ಮನೆಗೆ ಬರುವವರನ್ನು ತನ್ನೊಡಲಿಗೆ ಸೇರಿಸಿಕೊಳ್ಳುತ್ತದೆ. ಮಲೆನಾಡಿಗರಿಗೆ ಅದಕ್ಕಿಂತ ದೊಡ್ಡ ಆಸ್ತಿ ಇನ್ನೊಂದಿಲ್ಲ ಎಂದರೆ ತಪ್ಪಾಗದು.
ಅಲ್ಲಿನ ಜನರಿಗೆ ಬೆಳಗಾಗುವುದು ಮನೆಯ ಕೋಳಿ ಕೊಕ್ಕೊಕ್ಕೋ ಎಂದು ರಾಗ ಹಾಕಿದಾಗಲೆ. ಮುಂಜಾನೆ ಮನೆಯ ಕುಬೇರರಿಗೆ ತಿನ್ನಲು ಹುಲ್ಲು ತಂದು ಹಾಕಿ ಮೇವಿಗೆ ಬಿಟ್ಟರೆ ಮತ್ತೆ ಕೆಲಸ ಶುರುವಾಗುವುದು ದವಡೆ ಹಲ್ಲಿಗೂ ಮತ್ತು ವೀಳ್ಯದೆಲೆ,ಅಡಿಕೆಗೆ ಯುದ್ಧ ಆರಂಭವಾದಗಲೆ. ಗದ್ದೆಯಲ್ಲೊ, ತೋಟದಲ್ಲೊ ಬೆವರು ಸುರಿಸಿ ಬಂದರೆ ಮನೆಯಲ್ಲಿ ಬೆಲ್ಲಕ್ಕೆ ನೀರು ಹಾಕಿದಂತೆ ಮಾಡಿದ ಕಾಫಿಯನ್ನು ಕುಡಿಯುತ್ತಾರೆ.
ಮಳೆಗಾಲದ ಸಂದರ್ಭದಲ್ಲಿ ಮಲೆನಾಡು ಸ್ವರ್ಗದ ದ್ವಾರ ಬಾಗಿಲಿನಂತೆ ಕಾಣುತ್ತಿರುತ್ತದೆ. ಆ ಸಮಯದಲ್ಲಿ ಪಟಪಟನೆ ಹಂಚಿನ ಮೇಲೆ ಬೀಳುವ ಮಳೆಗೆ ಹಲಸಿನ ಹಬ್ಬಳ ಮುರಿಯುವ ಮಜವೇ ಬೇರೆ. ಮನೆಯ ಅಂಗಳದಲ್ಲಿ ಬಿಟ್ಟರೆ ಇನ್ನುಳಿದ ಕಡೆ ನದಿಯೋ, ಜಲಪಾತವು ಹರಿಯುತ್ತಿರುತ್ತದೆ. ಅಣಬೆ ಎಂದರೆ ಎಲ್ಲರೂ ಕೇಳಿರಲಿಕ್ಕಿಲ್ಲ, ನಿಮಗೆ ಅರ್ಥವಾಗುವಂತೆ (ಮಶ್ರೂಮ್ ) ನಾಯಿಕೊಡೆಯನ್ನು ಹುಡುಕುವುದು ಸಿಲಿಕಾನ್ ಸಿಟಿ ಟ್ರಾಫಿಕ್ ನಲ್ಲಿ ತಿಂಡಿ ತಿಂದು ಮುಗಿಸಿದಷ್ಟು ಸುಲಭದ ಕೆಲಸ. ಗದ್ದೆಯಂಚಿನಲ್ಲಿ ಹಾಳು ಬಿದ್ದ ಜಾಗದಲ್ಲಿ ಹುಟ್ಟಿರುತ್ತದೆ.
ಎಂದಿನಂತೆ ಅಲ್ಲಿಗೂ ಇಲ್ಲಿಗೂ ತುಂಬಾ ವ್ಯತ್ಯಾಸವಿದೆ, ಇಲ್ಲಿ ಮನೆಗಳಿಗೆ ಕಂಪೌಂಡ್ ಏರಿಸಿದ್ದಾರೆ, ಅಲ್ಲಿ ಅಚ್ಚುಕಟ್ಟಾದ ತಂತಿಬೇಲಿ, ಮನೆ ಎದುರಿಗೆ ಇಲ್ಲಿ ಸಿಮೆಂಟಿನ ಹಾಸಿಗೆ, ಅಲ್ಲಿ ಹಸಿರು ಬಳ್ಳಿಗಳು ಎದ್ದು ನಿಂತಿರುತ್ತವೆ, ಇಲ್ಲಿ ತಿನ್ನಲು ಜೊತೆಗೆ ಜಾಮ್ ಅಥವಾ ಸಾಸ್ ಇದ್ದರೆ, ಅಲ್ಲಿ ಚಗಳಿ ಇರುವೆ ಚಟ್ನಿ ಹೀಗೆ ಹೇಳುತ್ತ ಹೋದರೆ ಮುಗಿಯದಷ್ಟಿದೆ.
ಬದುಕೆಂಬುದು ನೆನಪಿನ ದೋಣಿ ಇದ್ದ ಹಾಗೆ ಅದು ಮಧ್ಯದಲ್ಲಿ ಮುಳುಗಿ ಹೋಗಬಹುದು ಅಥವಾ ದಡಸೇರಲು ಬಹುದು. ಬದುಕು ಕೊನೆಗೊಳ್ಳುವ ಮೊದಲು ಆದಷ್ಟು ಸಿಹಿ ಕಹಿ ನೆನಪುಗಳು ಉಳಿದು ಅಳಿದು ಹೋಗುತ್ತವೆ. ಆದರೆ ಕಲ್ಲು-ಸಕ್ಕರೆಯಂಥ ಸಿಹಿನೆನಪು ಬದುಕಿನಲ್ಲಿ ಉಳಿಯಬೇಕಾದರೆ ನೀವು ಒಮ್ಮೆ ಮಲೆನಾಡಿಗೆ ಕಾಲಿಡಲೇ ಬೇಕು.
ರಾಹುಲ್, ಎಂಜಿಎಂ ಕಾಲೇಜು ಉಡುಪಿ