Advertisement
ಅಲಂಕಾರವೆಂಬುದು ನಾರಿಯರಿಗೆ ಅಷ್ಟೊಂದು ಅಚ್ಚುಮೆಚ್ಚು. ಇಂತಹ ಸುಂದರವಾದ ಸೌಂದರ್ಯದ ಅಲಂಕಾರಕ್ಕೆ ಮತ್ತಷ್ಟು ಮೆರುಗು ನೀಡುವ ಹೊಸ ವಿನ್ಯಾಸದ ಆಭರಣವೇ ಮೂಗುತಿ.
Related Articles
Advertisement
ನಮ್ಮ ಪೂರ್ವಜರು ಹೆಣ್ಣು ಮಕ್ಕಳಿಗೆ ಮೂಗು ಚುಚ್ಚಿಸುವ ಕ್ರಿಯೆಯನ್ನು/ಪದ್ಧತಿಯನ್ನು ಮತ್ತು ಮೂಗುತಿ ಧರಿಸುವ ಸಂಸ್ಕೃತಿಯನ್ನು ಅಲಂಕಾರಕ್ಕೆ ಮಾತ್ರ ಸೀಮಿತವೆಂದು ಸೃಷ್ಟಿಸಲಿಲ್ಲ. ಬದಲಾಗಿ ಹೆಣ್ಣು ಮಕ್ಕಳಿಗೆ ಮೂಗುತಿ ಧರಿಸುವುದರಿಂದ ಹಲವಾರು ಪ್ರಯೋಜನವಿದೆಯೆಂದು ತಿಳಿಸಿ ಮೂಗು ಚುಚ್ಚಿಸಿ ಮೂಗುತಿ ಧರಿಸುವಂತೆ ಮಾಡಿದ್ದಾರೆ.
ಸಂಪ್ರಾದಾಯಿಕ ಮಹತ್ವ
ನಮ್ಮ ಪುರಾಣದ ಪ್ರಕಾರ ಮೂಗುತಿಗೆ ಅದರದೇ ಆದ ಮಹತ್ವವಿದೆ. ನಮ್ಮ ವೇದ, ಶಾಸ್ತ್ರ, ಸಂಪ್ರದಾಯ, ಸಂಸ್ಕೃತಿ ಆಚಾರ – ವಿಚಾರಗಳಲ್ಲಿ ಮೂಗುತಿಯನ್ನು ಮುತ್ತೈದೆಯರ ಸೌಭಾಗ್ಯದ ಸಂಕೇತವೆಂದು ಪರಿಗಣಿಸುತ್ತಾರೆ. ಮಾತ್ರವಲ್ಲದೆ, ಮೂಗುತಿಯನ್ನು ಧರಿಸುವ ಮೂಲಕ ಮಹಾದೇವನ ಪತ್ನಿಯಾದ ಮಾತೆ ಗೌರಿ/ ಪಾರ್ವತಿ/ ಗಿರಿಜೆಯನ್ನು ಪೂಜಿಸಿ, ಗೌರವಿಸಿದ ಫಲವಿದೆ ಎಂದು ಕೆಲವು ಪುರಾಣಗಳು ತಿಳಿಸುತ್ತದೆ.
ಮೂಗುತಿಯು ಸಂಪ್ರದಾಯಗಳೊಡನೆ ಮಾತ್ರವಲ್ಲದೇ ಹೆಣ್ಣುಮಕ್ಕಳ ಗುಣ ಸ್ವಭಾವಗಳ ಮೇಲೂ ಪರಿಣಾಮ ಬೀರುತ್ತದೆ. ಹೆಣ್ಣು ಮಕ್ಕಳು ಅತಿಯಾದ ಮುಂಗೋಪಿ, ಹಠವಾದಿ ಮತ್ತು ಚಂಚಲ ಸ್ವಭಾವದವರಾಗಿರುತ್ತಾರೆ. ಈ ಗುಣಗಳನ್ನು ನಿಯಂತ್ರಿಸಲು ಹೆಣ್ಣು ಮಕ್ಕಳಿಗೆ ಮೂಗುತಿ ಧಾರಣೆ ಮಾಡಲಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಆರೋಗ್ಯದ ಮಹತ್ವ
ಆಯುರ್ವೇದ ಪುರಾಣದ ಪ್ರಕಾರ ಮೂಗುತಿ ಧರಿಸುವುದರಿಂದ ಹೆಣ್ಣು ಮಕ್ಕಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಪ್ರಯೋಜನವಿದೆ ಎಂದು ಉಲ್ಲೇಖವಿದೆ. ಮೂಗುತಿ ಮಹಿಳೆಯರ ಅಂದ ಹೆಚ್ಚಿಸುವುದಲ್ಲದೇ, ಅವರ ಆರೋಗ್ಯವನ್ನು ವೃದ್ಧಿ ಮಾಡುತ್ತದೆ. ಮೂಗುತಿಯನ್ನು ಎಡಭಾಗದ ಹೊಳ್ಳೆಗೆ ಚುಚ್ಚಿಸಿ ಧರಿಸುತ್ತಾರೆ.
ಮೂಗಿನ ಎಡಭಾಗದ ಹೊಳ್ಳೆಯ ನರವು ನೇರವಾಗಿ ಮಹಿಳೆಯರ ಗರ್ಭಕೋಶದ ಭಾಗಕ್ಕೆ ಸಂಪರ್ಕಿಸುತ್ತದೆ. ಇದರಿಂದಾಗಿ ಹೆಣ್ಣು ಮಕ್ಕಳ ಆರೋಗ್ಯಕ್ಕೂ ಲಾಭವಿದೆ. ಹೆಣ್ಣು ಮಕ್ಕಳ ಮುಟ್ಟಿನ ನೋವನ್ನು ಶಮನಗೊಳಿಸುತ್ತದೆ. ಹೆಣ್ಣು ಮಕ್ಕಳ ಪ್ರಸವಕ್ಕೆ ಸಂಬಂಧಿಸಿ ಸಹಕಾರಿ. ಮೂಗುತಿಯು ಹೆಣ್ಣು ಮಕ್ಕಳ ಉಸಿರಾಟ ಕ್ರಿಯೆಗೂ ಸಹಕಾರಿ. ಹೆಣ್ಣು ಮಕ್ಕಳು ಉಸಿರಾಡುವ ಗಾಳಿಯನ್ನು ಶುದ್ಧವಾಗಿರಿಸಿ, ದೇಹದ ಒಳಹೋಗುವಂತೆ ಸಹಕರಿಸುತ್ತದೆ.
ಹೆಂಗಸರು ನಮ್ಮ ಈ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಬೇಕು. ಇಂತಹ ಆಭರಣಗಳನ್ನು ಹೆಣ್ಣು ಮಕ್ಕಳು ಧರಿಸಬೇಕು. ಆಭರಣಗಳು ಬರೇ ನಮ್ಮ ಅಂದ, ಚಂದಕ್ಕೆ ಮಾತ್ರ ಮೀಸಲು ಎಂದು ತಿಳಿದುಕೊಳ್ಳಬಾರದು. ಪ್ರತಿಯೊಂದು ಆಭರಣಗಳು ಕೂಡ ಆರೋಗ್ಯದ ಮೂಲವಾಗಿದೆ. ಇದರಿಂದಾಗಿ ಹೆಣ್ಣುಮಕ್ಕಳು ತಮ್ಮ ಆರೋಗ್ಯವನ್ನು ಆಭರಣಗಳನ್ನು ಧರಿಸುವ ಮೂಲಕ ಹೆಚ್ಚಿಸಿಕೊಳ್ಳಬಹುದು.
-ವಿದ್ಯಾಪ್ರಸಾಧಿನಿ
ವಿವೇಕಾನಂದ ಕಾಲೇಜು, ಪುತ್ತೂರು