Advertisement

ಕಾಗದ ರಹಿತ ಆಡಳಿತದತ್ತ ವಾಯವ್ಯ ಸಾರಿಗೆ ಸಂಸ್ಥೆ

02:44 PM Oct 25, 2021 | Team Udayavani |

ಹುಬ್ಬಳ್ಳಿ: ಕರ್ತವ್ಯದಲ್ಲಿ ಪಾರದರ್ಶಕತೆ, ಕಾಲಮಿತಿಯೊಳಗೆ ಕಡತ ವಿಲೇವಾರಿಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಲೆಸ್‌ ಪೇಪರ್‌ (ಇ-ಆಫೀಸ್‌) ವ್ಯವಸ್ಥೆಗೆ ಮುಂದಾಗಿದೆ.

Advertisement

ಸಂಸ್ಥೆಯ ಆಡಳಿತ ಸೌಧ ಇಲ್ಲಿನ ಕೇಂದ್ರ ಕಚೇರಿಯಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಯಶಸ್ವಿಯಾಗಿ ಮುಂದುವರಿದರೆ ಮಣ ಭಾರದ ಕಡತಗಳಿಗೆ ಕಡಿವಾಣ ಬೀಳಲಿದ್ದು, ಕಾಗದ ರಹಿತ ಕಚೇರಿಯಾಗಲಿದೆ.

ಕಡತ ವಿಲೇವಾರಿ ವಿಳಂಬ, ನಿರ್ಲಕ್ಷ, ಸಿಬ್ಬಂದಿಯಲ್ಲಿ ಸಮಯಪ್ರಜ್ಞೆ ಕೊರತೆ ಹೀಗೆ ಹತ್ತು ಹಲವು ನ್ಯೂನತೆ ಹಾಗೂ ಪ್ರಮಾದಗಳನ್ನು ತಪ್ಪಿಸುವ ಉದ್ದೇಶದಿಂದ ಈ ವ್ಯವಸ್ಥೆಗೆ ಸಾರಿಗೆ ಸಂಸ್ಥೆ ಮುಂದಾಗಿದೆ.

ಈಗಾಗಲೇ ಕೆಲ ಸರಕಾರಿ ಕಚೇರಿಗಳಲ್ಲಿ ಇದು ಕಡ್ಡಾಯವಾಗಿದೆ. ಸಿಬ್ಬಂದಿ ಕರ್ತವ್ಯದಲ್ಲಿ ಶಿಸ್ತು ಹಾಗೂ ಹೊಸ ತಾಂತ್ರಿಕ ಯುಗಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆ ಆರಂಭದಲ್ಲಿ ಲೆಸ್‌ ಪೇಪರ್‌ ಅಳವಡಿಸಿಕೊಂಡು ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ಕಾಗದ ರಹಿತ ಕಚೇರಿಯನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ. ಕಾಗದ, ಫೈಲ್‌, ಪಿನ್‌ ಹೀಗೆ ಹಲವು ವಸ್ತುಗಳಿಗೆ ತಗಲುತ್ತಿರುವ ಖರ್ಚು ಉಳಿಯಲಿದೆ.

ಹೆಚ್ಚು ವೆಚ್ಚದಾಯಕವಲ್ಲ

Advertisement

ಸರಕಾರ ಹಾಗೂ ಇತರೆ ಸಾರಿಗೆ ಸಂಸ್ಥೆಗಳೊಂದಿಗೆ ಪತ್ರ ವ್ಯವಹಾರ ನಡೆಸುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಕೇಂದ್ರ ಕಚೇರಿಯಲ್ಲಿ ಲೆಸ್‌ ಪೇಪರ್‌ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಶುರು ಮಾಡಲಾಗಿದೆ. ಸಂಸ್ಥೆಯ ಐಟಿ ಇಲಾಖೆ ಇದರ ಅನುಷ್ಠಾನ ಹಾಗೂ ನಿರ್ವಹಣೆ ಮಾಡುತ್ತಿದೆ. ಕಚೇರಿಯಲ್ಲಿರುವ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಡಿಜಿಟಲ್‌ ಕೀ ನೀಡಲಾಗಿದ್ದು, ಆಯಾ ಇಲಾಖೆ ಸಿಬ್ಬಂದಿಗೆ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ನೀಡಲಾಗಿದೆ. ಈಗಾಗಲೇ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ಕೇಂದ್ರ ಕಚೇರಿಯಲ್ಲಿ ಐವರು ಮಾಸ್ಟರ್‌ ತರಬೇತುದಾರರಿದ್ದಾರೆ. ಪ್ರಾಯೋಗಿಕವಾಗಿ ಕಾರ್ಯಾರಂಭವಾಗಿ ಆಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡತಗಳು ಈಗ ಈ ವ್ಯವಸ್ಥೆಯಲ್ಲಿ ವಿಲೇವಾರಿ ಆಗುತ್ತಿವೆ.

ಕಾರ್ಯ ನಿರ್ವಹಣೆ ಹೇಗಿದೆ?

ಸರಕಾರದ ಅಧಿಕೃತ ತಾಂತ್ರಿಕ ಸಂಸ್ಥೆಯಾಗಿರುವ ಎನ್‌ ಐಸಿಯಿಂದ ಕೇ ಸ್ವ್ಯಾನ್‌ ನೆಟ್‌ವರ್ಕ್‌ ಪಡೆಯಲಾಗಿದೆ. ಕೇಂದ್ರ ಕಚೇರಿಯಲ್ಲಿ ಎಲ್ಲಾ ಸಿಬ್ಬಂದಿಗೂ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಆಯಾ ಇಲಾಖೆ ಸಿಬ್ಬಂದಿ ಪ್ರತಿಯೊಂದು ಕಡತಗಳನ್ನು ಇಲಾಖೆ ಮುಖ್ಯಸ್ಥರಿಗೆ ಮಂಡನೆ ಮಾಡುತ್ತಾರೆ. ಆ ಕಡತದ ತಿದ್ದುಪಡಿ ಅಥವಾ ಅನುಮೋದನೆ ಅವರಿಗೆ ಬಿಟ್ಟಿದ್ದು. ಒಂದು ವೇಳೆ ಅದು ಇತರೆ ಇಲಾಖೆಗೆ ಸಂಬಂಧಿಸಿದ್ದರೆ ಅಲ್ಲಿಗೆ ಮುಖ್ಯಸ್ಥರೇ ಕಳುಹಿಸುತ್ತಾರೆ. ಇ-ಆಫೀಸ್‌ನಲ್ಲಿ ಒಂದು ಕಡತ ಸೃಷ್ಟಿಸಿದರೆ ಅಥವಾ ಸ್ಕ್ಯಾನ್‌ ಮಾಡಿದರೆ ಆ ಕಡತಕ್ಕೆ ಡಿಜಿಟಲ್‌ ಸಂಖ್ಯೆ ಸಿದ್ಧವಾಗುತ್ತದೆ. ಹೀಗಾಗಿ ಸಿಬ್ಬಂದಿಯಿಂದ ಹಿಡಿದು ಮೇಲಧಿಕಾರಿಗಳಿಗೆ ಮಂಡನೆಯಾದ ಸಮಯ, ದಿನಾಂಕ ಪ್ರತಿಯೊಂದು ಮಾಹಿತಿ ದೊರೆಯುತ್ತದೆ. ಇಲ್ಲಿ ವಿಳಂಬ, ನಿರ್ಲಕ್ಷ್ಯಕ್ಕೆ ಆಸ್ಪದವಿಲ್ಲ.

ಇದನ್ನೂ ಓದಿ: ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಮನವಿ

ವಿಭಾಗೀಯ ಕಚೇರಿಗಳಿಗೆ ಚಿಂತನೆ

ಕೇಂದ್ರ ಕಚೇರಿಯ ಮಾದರಿಯಲ್ಲೇ ವಿಭಾಗೀಯ ಕಚೇರಿಗಳಲ್ಲಿ ಆಡಳಿತ ವ್ಯವಸ್ಥೆಯಿದೆ. ನೇರವಾಗಿ ನೌಕರರಿಗೆ ಹತ್ತಿರವಾಗುತ್ತದೆ. ಹೀಗಾಗಿ ಇ-ಆಫೀಸ್‌ ವ್ಯವಸ್ಥೆಯನ್ನು ಇಲ್ಲಿನ ಕಚೇರಿಗೂ ವಿಸ್ತರಿಸುವ ಚಿಂತನೆ ಅಧಿಕಾರಿಗಳಲ್ಲಿದೆ. ಎಲ್ಲಾ ಸಿಬ್ಬಂದಿಗೂ ಕಂಪ್ಯೂಟರ್‌, ಇಂಟರ್‌ನೆಟ್‌ ವ್ಯವಸ್ಥೆಯಿರುವುದರಿಂದ ವೆಚ್ಚದಾಯಕವಲ್ಲ. ಇಲ್ಲಿ ಸಿಬ್ಬಂದಿಯ ಪರೀಕ್ಷಾರ್ಥ, ಕಾಯಂನಂತಹ ಪ್ರಕ್ರಿಯೆ, ಬಸ್‌ಗಳ ಕಾರ್ಯಾಚರಣೆ, ಲೆಕ್ಕಪತ್ರ ಶಾಖೆ, ಕಾರ್ಮಿಕ, ಕಾನೂನು ಸೇರಿದಂತೆ 11-12 ಶಾಖೆಗಳಿವೆ. ಹೀಗಾಗಿ ಕೆಲ ಸಿಬ್ಬಂದಿ ಹಲವು ಕಾರಣಗಳಿಗೆ ವಿಳಂಬ ಮಾಡುವ ಪ್ರಕ್ರಿಯೆ ಹೊಂದಿದ್ದಾರೆ. ಇದನ್ನು ತಡೆಯುವುದಕ್ಕಾಗಿ ಇ-ಕಚೇರಿ ಅಗತ್ಯವಾಗಿದೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

ಕೈ ಬಿಟ್ಟಿದ್ದು ಹಗರಣಕ್ಕೆ ಕಾರಣವಾಯಿತು!

ಐದು ವರ್ಷಗಳ ಹಿಂದೆ ಅಂದಿನ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ವಿನೋತ ಪ್ರಿಯಾ ಅವರು ನಾಲ್ಕು ಸಾರಿಗೆ ಸಂಸ್ಥೆಗಳ ಪೈಕಿ ವಾಕರಸಾ ಸಂಸ್ಥೆಯಲ್ಲಿ ಮೊದಲಿಗೆ ಲೆಸ್‌ ಪೇಪರ್‌ ಜಾರಿಗೆ ತಂದಿದ್ದರು. ಈ ವ್ಯವಸ್ಥೆ ಮೂಲಕ ಬಾರದ ಕಡತಗಳಿಗೆ ಅನುಮೋದನೆ ನೀಡುತ್ತಿರಲಿಲ್ಲ. ಮಂಡನೆಯ ಪ್ರತಿಯೊಂದು ಹಂತಗಳನ್ನು ಪರಿಶೀಲಿಸುತ್ತಿದ್ದರು. ಹೀಗಾಗಿ ಸಂಸ್ಥೆಯಲ್ಲಿ ಒಂದಿಷ್ಟು ಶಿಸ್ತು ಮೂಡಿತ್ತು. ಆದರೆ ಇವರ ವರ್ಗವಾದ ನಂತರ ಕೆಲ ಅಧಿಕಾರಿಗಳು ಈ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಿದರು. ಹೀಗಾಗಿಯೇ ಸಂಸ್ಥೆಯಲ್ಲಿ ನಡೆದ ದೊಡ್ಡಮಟ್ಟದ ವರ್ಗಾವಣೆ ದಂಧೆಗೆ ನಿಖರ ಸಾಕ್ಷಿ, ಪುರಾವೆಗಳು ದೊರಕಲಿಲ್ಲ. ಅಕ್ರಮ ವರ್ಗಾವಣೆಯ ಕಡತಗಳನ್ನು ಸಿಬ್ಬಂದಿ ಸಿದ್ಧಪಡಿಸಿ ನಕಲಿ ಸಹಿ ಮಾಡಿದ್ದಾರೋ, ಯಾರ್ಯಾರ ಪಾತ್ರ ಎಷ್ಟಿದೆ ಎನ್ನುವ ಗೊಂದಲಗಳು ಇಂದಿಗೂ ಇವೆ. ಆದರೆ ಈ ಹಗರಣದಲ್ಲಿ ಯಾವುದೇ ಪಾಲು ಇಲ್ಲದ ಸಿಬ್ಬಂದಿ ಕೂಡ ಶಿಸ್ತುಕ್ರಮಕ್ಕೆ ಬಲಿಯಾಗಬೇಕಾಯಿತು.

ಸರಕಾರಿ ಕಚೇರಿಗಳಲ್ಲಿ ಈಗಾಗಲೇ ಇ-ಆಫೀಸ್‌ ಆರಂಭವಾದ ಕಾರಣ ಇದನ್ನು ಅನುಷ್ಠಾನಕ್ಕೆ ತರುವುದು ಅನಿವಾರ್ಯವಾಗಿದೆ. ಈ ವ್ಯವಸ್ಥೆಯಿಂದ ಸಿಬ್ಬಂದಿಯಲ್ಲಿ ಸಮಯಪ್ರಜ್ಞೆ ಮೂಡುತ್ತದೆ. ಎಲ್ಲಾ ಇಲಾಖೆಗಳು ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಹಾಗೂ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಸೂಚಿಸಲಾಗಿದೆ. ವಿಭಾಗೀಯ ಕಚೇರಿಗಳಿಗೆ ಇದೆಷ್ಟು ಸೂಕ್ತ ಎನ್ನುವುದನ್ನು ಅರಿತು ಅಗತ್ಯಬಿದ್ದರೆ ವಿಸ್ತರಿಸಲಾಗುವುದು. -ಗುರುದತ್ತ ಹೆಗಡೆ, ವ್ಯವಸ್ಥಾಪಕ ನಿರ್ದೇಶಕ, ವಾಕರಸಾ ಸಂಸ್ಥೆ

ವ್ಯವಸ್ಥಾಪಕ ನಿರ್ದೇಶಕರ ಸೂಚನೆ ಮೇರೆಗೆ ಎಲ್ಲಾ ಇಲಾಖೆಗೆ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಎಲ್ಲರಿಗೂ ತರಬೇತಿ ನೀಡಲಾಗಿದೆ. ಮೊದಲ ಹಂತದಲ್ಲಿ ಲೆಸ್‌ಪೇಪರ್‌ ಕಚೇರಿ ಆಗುತ್ತಿದ್ದು, ಶೀಘ್ರದಲ್ಲಿ ಪೇಪರ್‌ ಲೆಸ್‌ ಕಚೇರಿ ಆಗಲಿದೆ. ಇದರಿಂದ ಸಂಸ್ಥೆಗೆ ಒಂದಿಷ್ಟು ಖರ್ಚು ಉಳಿಯಲಿದೆ. ಡಿಜಿಟಲ್‌ ಕೀ ಬಳಸಿ ಪ್ರಯಾಣದ ಸಂದರ್ಭದಲ್ಲಿಯೂ ಇದನ್ನು ಬಳಸಬಹುದಾಗಿದೆ. -ಮಹಾದೇವ ಮುಂಜಿ, ಮುಖ್ಯ ಯೋಜನಾ ಮತ್ತು ಅಂಕಿ ಸಂಖ್ಯೆ ಅಧಿಕಾರಿ

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next