Advertisement

ರಬ್ಬರ್‌ ತೋಟಗಳಲ್ಲಿ ಉತ್ತರದ ವಲಸೆ ಕಾರ್ಮಿಕರು!

10:36 AM Aug 26, 2018 | |

ಸುಬ್ರಹ್ಮಣ್ಯ: ಕೊಡಗು ಮತ್ತು ದ.ಕ. ಜಿಲ್ಲೆಯ ಗಡಿಭಾಗ ಕಡಮಕಲ್ಲಿನಲ್ಲಿ ಸಾವಿರಾರು ಎಕರೆ ವಿಸ್ತಾರದ ರಬ್ಬರ್‌ ಎಸ್ಟೇಟ್‌ ತೋಟಗಳಲ್ಲಿ ದೇಶದ ಉತ್ತರ ಹಾಗೂ ಪೂರ್ವ ಭಾಗದ ವಲಸೆ ಕಾರ್ಮಿಕರಿದ್ದಾರೆ. ಗುರುತಿನ ದಾಖಲೆಗಳಿಲ್ಲದ ಇಂಥವರಿಗೆ ಕಡಮಕಲ್ಲು ಪ್ರದೇಶ ಅತ್ಯಂತ ಸುರಕ್ಷಿತ ಸ್ಥಳವಾಗಿದೆ!

Advertisement

ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕಡಮಕಲ್ಲು ಮತ್ತು ಕೂಜುಮಲೆ ಎರಡು ರಬ್ಬರ್‌ ಎಸ್ಟೇಟುಗಳು ಗಾಳಿಬೀಡು ಮತ್ತು ಕಾಲೂರು ಗ್ರಾಮಕ್ಕೆ ಸೇರಿದೆ. ಕಡಮಕಲ್ಲು ಎಸ್ಟೇಟಿನಲ್ಲಿ ಸುಮಾರು 2,800 ಎಕರೆ ಹಾಗೂ ಕೂಜುಮಲೆ ಎಸ್ಟೇಟಿನಲ್ಲಿ 1,200 ಎಕರೆ ವಿಸ್ತಾರದಲ್ಲಿ ರಬ್ಬರ್‌ ತೋಟವಿದೆ. ಎರಡು ಎಸ್ಟೇಟಿನಲ್ಲಿ 650ಕ್ಕೂ ಅಧಿಕ ಕಾರ್ಮಿಕರಿದ್ದು ಇವರೆಲ್ಲರೂ ವಲಸಿಗರು. ಕಡಿಮೆ ವೇತನಕ್ಕೆ ಇವರನ್ನು ದುಡಿಸಿಕೊಳ್ಳಲಾಗುತ್ತಿದೆ. ಹಿಂದಿ ಭಾಷಿಗರಾದ ಇವರ ಮೂಲ ವಿಚಾರಿಸಿದರೆ ಜಾರ್ಖಂಡ್‌, ಅಸ್ಸಾಂ, ಒಡಿಶಾ, ಛತ್ತಿಸ್‌ ಘಡ ಎನ್ನುತ್ತಾರೆ. 

ಹದಿಹರೆಯದವರೇ ಹೆಚ್ಚು
ವಲಸೆ ಬಂದ ಕಾರ್ಮಿಕರಲ್ಲಿ ಬಾಂಗ್ಲಾ ವಲಸಿಗರೂ ಇದ್ದಾರೆಯೇ ಎಂಬ ಶಂಕೆಯಿದೆ. ಮುಸ್ಲಿಂ, ಹಿಂದೂ ಸಮುದಾಯದ ಇವರಲ್ಲಿ ಹೆಚ್ಚಿನವರು 18 ವರ್ಷ ವಯೋಮಿತಿಯ ಒಳಗಿನವರು. ಆದಿವಾಸಿಗಳೆಂದು ಹೇಳುವ ಇವರಿಗೇ ಆಗಲೇ ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ.

ಲೀಸ್‌ಗೆ ಪಡೆದ ಜಾಗ
ಬ್ರಿಟಿಷರ ಕಾಲದಲ್ಲಿ ಅಂದಿನ ಮೈಸೂರು ಮತ್ತು ಮದ್ರಾಸ್‌ ರಾಜರ ಆಡಳಿತದ ತೋಟವಾಗಿತ್ತು ಈ ಸ್ಥಳ. ಶ್ರೀಲಂಕಾ ಮತ್ತು ತಮಿಳು ನಿರಾಶ್ರಿತರು ಇಲ್ಲಿ ನೆಲಸಿದ್ದರು. ಇದೇ ಕಾರ್ಮಿಕರನ್ನು ಬೆಂಗಳೂರು-ಮಂಗಳೂರು ರೈಲ್ವೆ ಹಳಿ ನಿರ್ಮಿಸಲು ಬಳಸಿಕೊಳ್ಳಲಾಗಿತ್ತು.

ಅರಣ್ಯ ಇಲಾಖೆಗೆ ಸೇರಿದ ನೂರಾರು ಎಕರೆ ಭೂಮಿಯನ್ನು 1902ರಲ್ಲಿ ಕೇರಳ ಮೂಲದ ರಮಾನಾಥಪುರಂ ಗ್ರೂಪ್ಸ್‌ ಸಂಸ್ಥೆಯವರು ಅರಣ್ಯ ಇಲಾಖೆಯಿಂದ ಲೀಸಿಗೆ ಪಡೆದು ರಬ್ಬರ್‌ ತೋಟ ನಿರ್ಮಿಸಿದ್ದರು. ಲೀಸ್‌ ಅವಧಿ ಮುಗಿದಿದ್ದು, 99 ವರ್ಷ ಇರುವುದನ್ನು 999 ವರ್ಷ ಎಂದು ತಿದ್ದಿದ್ದಾರೆ ಎಂಬ ಆರೋಪವಿದೆ.ಅರಣ್ಯ ಭೂಮಿಯ ಒತ್ತುವರಿ ನಡೆದಿದೆ ಎನ್ನಲಾಗಿದೆ. ಲೀಸ್‌ನಲ್ಲಿ ಪಡೆದ ಭೂಮಿಗಿಂತ 6,000 ಎಕರೆಯಷ್ಟು ಹೆಚ್ಚು ಭೂಮಿಯಲ್ಲಿ ರಬ್ಬರ್‌ ತೋಟವಿದೆ. ತೋಟದ ಕಾರ್ಮಿಕರಿಗಾಗಿ ಆಸ್ಪತ್ರೆ, ಪ್ರಾರ್ಥನಾ ಮಂದಿರ, ಜಿನಸು ಅಂಗಡಿ ಈ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ 200 ಮಕ್ಕಳಿದ್ದು, ಬಹುತೇಕ ಎಲ್ಲರೂ ಶಾಲೆಯಿಂದ ಹೊರಗುಳಿದಿದ್ದಾರೆ.

Advertisement

ಪೊಲೀಸರಿಗೂ ಮಾಹಿತಿ ಇಲ್ಲ!
ಈ ಕಾರ್ಮಿಕರು ಎಲ್ಲಿಯವರು? ಇವರ ಅಸಲಿ ಹೆಸರೇನು? ಮಾಹಿತಿ ಇಲ್ಲ. ಆದರೂ ಅವರನ್ನು ಕೂಲಿ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ಈ ಕಾರ್ಮಿಕರು ಇಲ್ಲಿಗೆ ಹೇಗೆ? ಎಲ್ಲಿಂದ ಬಂದರು? ಕರೆತಂದವರು ಯಾರು? ಎನ್ನುವ ಪ್ರಶ್ನೆಗಳಿಗೆ ಪೊಲೀಸರ ಸಹಿತ ಯಾರಲ್ಲೂ ಉತ್ತರವೇ ಇಲ್ಲ!

ನಕ್ಸಲ್‌ ಚಟುವಟಿಕೆಯ ಪ್ರದೇಶ
ಈ ಭಾಗ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿದ್ದು, ನಕ್ಸಲರ ಚಟುವಟಿಕೆ ಇದೆ. ಇಷ್ಟಿದ್ದರೂ ಅಕ್ರಮ ವಲಸಿಗರ ಕುರಿತು ಪೊಲೀಸ್‌ ಇಲಾಖೆ ನಿಗಾ ವಹಿಸದಿರುವುದು ಅಚ್ಚರಿಯಾಗಿದೆ.

ಸ್ಥಳೀಯರಿಗೆ ಉದ್ಯೋಗ ಕೊಡಿ
ಕಂಪೆನಿಯಲ್ಲಿ ಸ್ಥಳೀಯ ಕಾರ್ಮಿಕರು ಬೆರಳೆಣಿಕೆಯಲ್ಲಿದ್ದಾರೆ. ಕಡಿಮೆ ಸಂಬಳಕ್ಕೆ ಉತ್ತರ ಭಾರತದ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ನಮಗೂ ಕೆಲಸ ಕೊಡಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ದಾಖಲೆ ತೋರಿಸಲು ಹಿಂದೇಟು
ಗುರುತಿನ ಚೀಟಿ, ಅಧಾರ್‌ ಕಾರ್ಡು, ಪಡಿತರ ಚೀಟಿ ಇದೆ ಎನ್ನುವ ಇವರು, ಅದನ್ನು ತೋರಿಸಲು ಹಿಂದೇಟು ಹಾಕುತ್ತಾರೆ. ದಾಖಲೆ ಪರಿಶೀಲಿಸಿದ ವೇಳೆ ಒಂದೊಂದರಲ್ಲಿ ಒಂದೊಂದು ರಾಜ್ಯದ ವಿಳಾಸವಿರುವುದು ಬೆಳಕಿಗೆ ಬಂದಿದೆ. ಅವರ ಬ್ಯಾಂಕಿನ ಖಾತೆ ಎಸ್ಟೇಟ್‌ ಮ್ಯಾನೇಜರ್‌ನ ವಿಳಾಸ ಹೊಂದಿದೆ.

ಶೀಘ್ರ ತನಿಖೆ
ಕೊಡಗು-ದಕ್ಷಿಣ ಕನ್ನಡ ಗಡಿಭಾಗ ಕಡಮಕಲ್ಲು ಪ್ರದೇಶ ನಕ್ಸಲ್‌ ಚಲನವಲನವಿದ್ದ ಪ್ರದೇಶವೆಂಬುದರ ಕುರಿತು ಇಲಾಖೆಗೆ ಅರಿವಿದೆ. ರಬ್ಬರ್‌ ತೋಟ ದ.ಕ. ವ್ಯಾಪ್ತಿಗೆ ಸೇರಿದ್ದರೆ ಕಾರ್ಮಿಕರು ಅಕ್ರಮ ವಲಸಿಗರೇ ಎಂಬ ಕುರಿತು ತನಿಖೆ ನಡೆಸುತ್ತೇವೆ.
– ವಿ.ಜೆ. ಸಜೀತ್‌
ಎಎಸ್‌ಪಿ, ದ.ಕ., ಮಂಗಳೂರು

ತನಿಖೆ ಆಗಬೇಕು
ಕಂಪೆನಿ ಅಡ್ಡದಾರಿಯಲ್ಲಿ ಕಾನೂನು ಮೀರಿ ಲೀಸ್‌ ಅವಧಿ ಮುಂದುವರೆಸಿದೆ. ಅರಣ್ಯ ಒತ್ತುವರಿ ಮಾಡಿರುವುದು ಸ್ಪಷ್ಟ. ಜತೆಗೆ ಅಕ್ರಮ ಬಾಂಗ್ಲಾ ನಿವಾಸಿಗರು ಇಲ್ಲಿರುವ ಸಾಧ್ಯತೆಯೂ ಇದೆ. ಮಾನವ ಹಕ್ಕು ಉಲ್ಲಂಘನೆ ಜತೆ ಮಕ್ಕಳ ಶೈಕ್ಷಣಿಕ ಹಕ್ಕನ್ನು ಇಲ್ಲಿ ಕಸಿದುಕೊಳ್ಳಲಾಗಿದೆ. ಈ ಕುರಿತು ತನಿಖೆಯಾಗಬೇಕು.
– ಪ್ರದೀಪ್‌ ಕುಮಾರ್‌ ಕೆ.ಎಲ್‌., ನ್ಯಾಯವಾದಿ

ದಿನ ಸಂಬಳಕ್ಕೆ ಕೆಲಸ
ನಾನು ಅಸ್ಸಾಂ ನಿವಾಸಿ. ಆದಿವಾಸಿ ಜನಾಂಗಕ್ಕೆ ಸೇರಿದ್ದೇನೆ. ಐದು ವರ್ಷಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದು ಮದುವೆಯಾಗಿ ನಾಲ್ಕು ಮಂದಿ ಮಕ್ಕಳಿದ್ದಾರೆ. ದಿನ ಸಂಬಳಕ್ಕೆ ಕೆಲಸ ಮಾಡುತ್ತಿದ್ದೇನೆ.
– ಸಮೇಲ್‌ ಕಾರ್ಮಿಕ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next