ನವದೆಹಲಿ: ಬಿಹಾರ, ಅಸ್ಸಾಂನಲ್ಲಿನ ಪ್ರವಾಹ ಪರಿಸ್ಥಿತಿ ಇನ್ನೂ ತಾರಕಕ್ಕೇರಿದ್ದು, ಬುಧವಾರದ ಹೊತ್ತಿಗೆ ಆ ಎರಡೂ ರಾಜ್ಯಗಳಲ್ಲಿ ಸಾವಿನ ಸಂಖ್ಯೆ 55ಕ್ಕೇರಿದೆ. ಉತ್ತರ ಪ್ರದೇಶದಲ್ಲಿ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ 14 ಜನ ಸಾವಿಗೀಡಾಗಿದ್ದಾರೆ.
ನೆರೆಯ ನೇಪಾಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಅದರ ಪರಿಣಾಮ ಬಿಹಾರದಲ್ಲಿನ ಪ್ರವಾಹ ಪರಿಸ್ಥಿತಿ ಏರಿಕೆಯಾಗುತ್ತಲೇ ಇದೆ. ಮಂಗಳವಾರ-ಬುಧವಾರ ಅಲ್ಲಿ 33 ಜನರು ಸಾವನ್ನಪ್ಪಿದ್ದಾರೆ. 25.7 ಲಕ್ಷ ಜನರು ಆಶ್ರಯ ಕಳೆದುಕೊಂಡಿದ್ದಾರೆ
ಅಸ್ಸಾಂನಲ್ಲಿ, 17 ಜನರು ಸಾವಿಗೀಡಾಗಿದ್ದು, 45 ಲಕ್ಷಕ್ಕಿಂತಲೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. ಬ್ರಹ್ಮಪುತ್ರಾ ಹಾಗೂ ಅದರ ಉಪನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಮಿಜೋರಂನಲ್ಲಿ ಪ್ರವಾಹಕ್ಕೆ 5 ಮಂದಿ ಬಲಿಯಾಗಿದ್ದಾರೆ.
ಉ.ಪ್ರದೇಶದಲ್ಲಿ 14 ಸಾವು: ಉತ್ತರ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ 14 ಜನರು ಸಾವಿಗೀಡಾಗಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ನೀಡುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಪಂಜಾಬ್, ಹರ್ಯಾಣ, ರಾಜಧಾನಿ ದೆಹಲಿಯಲ್ಲಿ ಉತ್ತಮ ಮಳೆಯಾಗಿದೆ.
ಸಾವಿನ ಸಂಖ್ಯೆ ಏರಿಕೆ: ಮುಂಬೈನ ಡೋಂಗ್ರಿಯಲ್ಲಿ ಮಂಗಳವಾರ ಸಂಭವಿಸಿದ್ದ 100 ವರ್ಷಗಳ ಹಳೆಯ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 14ಕ್ಕೇರಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವವರ ಹುಡುಕಾಟ ಸ್ಥಗಿತಗೊಳಿಸಲಾಗಿದೆ.