ಸಿಯೋಲ್: ದಕ್ಷಿಣ ಕೊರಿಯಾ ಮತ್ತು ಅಮೆರಿಕ ಜಂಟಿ ಸಮರಾಭ್ಯಾಸ ನಡೆಸುತ್ತಿರುವ ನಡುವೆಯೇ ಜಪಾನ್ ಕಡೆಗೆ ಉತ್ತರ ಕೊರಿಯಾ ಎರಡು ಅಲ್ಪ ಶ್ರೇಣಿಯ ಖಂಡಾಂತರ ಕ್ಷಿಪಣಿಗಳನ್ನು ಗುರುವಾರ ಉಡಾಯಿಸಿದೆ.
ಕೊರಿಯನ್ ಭೂಪ್ರದೇಶ ವ್ಯಾಪ್ತಿಯಲ್ಲಿ ಅಮೆರಿಕ ವಿಮಾನವಾಹಕ ನೌಕೆ ನಿಯೋಜಿಸಿದ ಬೆನ್ನಲ್ಲೇ ಉತ್ತರ ಕೊರಿಯಾದಿಂದ ಈ ಪ್ರತ್ಯುತ್ತರ ಬಂದಿದೆ.
ಜಪಾನ್‌ಗೆ ಸೇರಿದ ಫೆಸಿಫಿಕ್ ಸಾಗರದ ಜಲಪ್ರದೇಶದಲ್ಲಿ ಉತ್ತರ ಕೊರಿಯಾದ ಕ್ಷಿಪಣಿ ಬಿದ್ದಿದೆ ಎಂದು ಜಪಾನ್ ಖಾತ್ರಿಪಡಿಸಿದೆ. ಉತ್ತರ ಕೊರಿಯಾದ ಈ ದಾಷ್ಯìವನ್ನು ಭಾರತ, ಅಮೆರಿಕ, ಯುಕೆ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ತೀವ್ರವಾಗಿ ಖಂಡಿಸಿದೆ.
ಉತ್ತರ ಕೊರಿಯಾದಿಂದ ಕ್ಷಿಪಣಿ ಉಡಾವಣೆಯು ಆ ಪ್ರದೇಶದ ಶಾಂತಿ ಮತ್ತು ಭದ್ರತೆಗೆ ಮಾರಕವಾಗಿದೆ ಎಂದು ಭಾರತ ಪ್ರತಿಪಾದಿಸಿದೆ.
ಇನ್ನೊಂದೆಡೆ, ಕೊರಿಯಾ ಪ್ರಾಂತ್ಯದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅಮೆರಿಕ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಅಲ್ಲದೇ ಇದರಿಂದ ಯುದ್ಧದ ಆತಂಕ ನಿರ್ಮಾಣವಾಗಿದೆ ಎಂದು ಉತ್ತರ ಕೊರಿಯಾ ಹೇಳಿದೆ.