ಪ್ಯಾಂಗ್‌ಯಾಂಗ್: ಉತ್ತರ ಕೊರಿಯಾ ತಾನು ಹೊಂದಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಸಿದ್ಧವಿದೆ ಎಂದಿದೆ. ಆದರೆ ಅಮೆರಿಕ ಕೂಡ ತಾನು ಕೈಗೊಂಡ ಕ್ರಮಗಳನ್ನೇ ಅನುಸರಿಸಬೇಕು ಎಂಬ ಷರತ್ತನ್ನೂ ಹಾಕಿದೆ. ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಂ ಜಾಂಗ್ ಉನ್ ನಡುವೆ ಬುಧವಾರ ನಡೆದ ಮಾತುಕತೆ ವೇಳೆ ಅಂಶ ಪ್ರಸ್ತಾಪವಾಗಿದೆ. ಬಾಹ್ಯ ವೀಕ್ಷಕರ ಸಮ್ಮುಖದಲ್ಲಿ ಉತ್ತರ ಕೊರಿಯಾದ ನ್ಯಾಂಗ್‌ಬ್ಯಾನ್‌ನಲ್ಲಿರುವ ಮುಖ್ಯ ಪರಮಾಣು ಪರೀಕ್ಷೆ ಮತ್ತು ಕ್ಷಿಪಣಿ ಉಡಾವಣಾ ಕೇಂದ್ರ ಮುಚ್ಚಲು ಒಪ್ಪಿಕೊಳ್ಳಲಾಗಿದೆ. ಜತೆಗೆ 2032ರಲ್ಲಿ ಬೇಸಗೆ ಕಾಲದ ಒಲಿಂಪಿಕ್ ಕ್ರೀಡಾಕೂಟವನ್ನು ಉತ್ತರ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ಆಯೋಜಿಸುವ ಬಗ್ಗೆ ಕಿಂ ಪ್ರಸ್ತಾಪ ಮಾಡಿದ್ದಾರೆ ಎಂದು ಮಾತುಕತೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ತಿಳಿಸಿದ್ದಾರೆ. ಇದರ ಜತೆಗೆ ಕಿಂ ಜಾಂಗ್ ಉನ್ ಈ ವರ್ಷ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಕೊರಿಯಾ ಪ್ರದೇಶವನ್ನು ಶಾಂತಿಯುತ ಸ್ಥಳವನ್ನಾಗಿಸುವ ಇರಾದೆ ಹೊಂದಿರುವುದಾಗಿ ಕಿಂ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.