ಮುಂಬಯಿ : ಕಳೆದ ನಿರಂತರ ಆರು ದಿನಗಳ ವಹಿವಾಟಿನಲ್ಲಿ ಮುನ್ನಡೆ ಸಾಧಿಸುತ್ತಲೇ ಬಂದಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 68 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭ ಗಳಿಕೆಗಾಗಿ ಶೇರು ಮಾರಾಟದಲ್ಲಿ ತೊಡಗಿದುದೇ ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಕುಸಿಯಲು ಕಾರಣವಾಯಿತಲ್ಲದೆ ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿನ ದುರ್ಬಲ ಸನ್ನಿವೇಶ ಕೂಡ ಕುಸಿತಕ್ಕೆ ಪೂರಕವಾಯಿತು. ಮೇಲಾಗಿ ಸಮರೋತ್ಸಾಹದಲ್ಲೇ ಇರುವ ಉತ್ತರ ಕೊರಿಯ ಇಂದು ಜಪಾನ್ ಆಗಸದ ಮೇಲಿಂದ ಶಾಂತ ಸಾಗರಕ್ಕೆ ಉರುಳಿ ಬೀಳುವ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಿದುದು ಕೂಡ ಏಶ್ಯನ್ ಶೇರು ಮಾರುಕಟ್ಟೆಗಳ ಕುಸಿತಕ್ಕೆ ಕಾರಣವಾಯಿತು.
ಬೆಳಗ್ಗೆ 10.15ರ ಹೊತ್ತಿಗೆ ಸೆನ್ಸೆಕ್ಸ್ 66.16 ಅಂಕಗಳ ನಷ್ಟದೊಂದಿಗೆ 32,175.77 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 30 ಅಂಕಗಳ ನಷ್ಟದೊಂದಿಗೆ 10,056.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಬ್ಯಾಂಕ್ ನಿಫ್ಟಿ 110.35 ಅಂಕಗಳ ಕುಸಿತವನ್ನು ಕಂಡಿತಾದರೆ ಐಟಿ ನಿಫ್ಟಿ 21.65 ಅಂಕಗಳ ಏರಿಕೆಯನ್ನು ಸಾಧಿಸಿತು.
ಕೋಟಕ್ ಮಹೀಂದ್ರ, ಎಚ್‌ಡಿಎಫ್ಸಿ, ವೇದಾಂತ, ಇನ್‌ಫೋಸಿಸ್, ಭಾರ್ತಿ ಇನ್‌ಫ್ರಾಟೆಲ್ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.