ಸಿಯೋಲ್: ಅಮೆರಿಕ ಹಾಗೂ ಉತ್ತರ ಕೊರಿಯ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ದಕ್ಷಿಣ ಕೊರಿಯದ ಜತೆಗೆ ಸಮರಾಭ್ಯಾಸಕ್ಕೆ ಅಮೆರಿಕ ಮುಂದಡಿ ಇಡುವ ಮುನ್ನವೇ, ಸೋಮವಾರ ಮತ್ತೆರೆಡು ಕ್ಷಿಪಣಿಗಳನ್ನು ಉ.ಕೊರಿಯ ಪರೀಕ್ಷಿಸಿದ್ದು ಮತ್ತೆ ದೊಡ್ಡಣ್ಣನಿಗೆ ಎಚ್ಚರಿಕೆ ರವಾನಿಸಿದೆ.
ದಕ್ಷಿಣ ಕೊರಿಯ ಹಾಗೂ ಅಮೆರಿಕ ನಡುವಿನ ಸಮರಾಭ್ಯಾಸವನ್ನು ಸಂಭವನೀಯ ಅಪಾಯವೆಂದೆ ಉ.ಕೊರಿಯ ಪರಿಗಣಿಸಿದೆ.
ಈಗಾಗಲೇ ತನ್ನ ವಿರುದ್ಧ ನಡೆಯಬಹುದಾದ ದಾಳಿ ಹಿಮ್ಮೆಟ್ಟಿಸಲು ಸಿದ್ಧತೆ ನಡೆಸಿದೆ. ಒಂದೇ ತಿಂಗಳಲ್ಲಿ ಒಟ್ಟು 7 ಕ್ಷಿಪಣಿಗಳನ್ನು ಉ.ಕೊರಿಯಾ ಪರೀಕ್ಷಿಸಿದೆ. ಏತನ್ಮಧ್ಯೆ, ಇದ್ಯಾವುದಕ್ಕೂ ಜಗ್ಗದ ಅಮೆರಿಕ-ದ.ಕೊರಿಯ ಸಮರಾಭ್ಯಾಸವನ್ನು ಆರಂಭಿಸಿವೆ. “ಇಂಥ ಯಾವ ಬೆದರಿಕೆಗಳಿಗೂ ಹೆದರುವುದಿಲ್ಲ. ಈ ಘಟನೆಗಳೇ ಜಂಟಿ ಸಮರಾಭ್ಯಾಸವನ್ನು ಮತ್ತಷ್ಟು ಉತ್ತೇಜಿಸುವುದು’ ಎಂದು ದಕ್ಷಿಣ ಕೊರಿಯಾದ ವಕ್ತಾರ ಕೂಡ ಹೇಳಿದ್ದಾರೆ.
ಮತ್ತೊಂದೆಡೆ ಸಮರಾಭ್ಯಾಸ ಘೋಷಣೆಯಾದಗಿನಿಂದಲೂ ಉ.ಕೊರಿಯ ಪರಮಾಣು ಸಮರ್ಥ ಕ್ಷಿಪಣಿಯೂ ಸೇರಿ, ಸಾಲು-ಸಾಲು ಕ್ಷಿಪಣಿ ಪರೀಕ್ಷೆ ನಡೆಸಿ ತನ್ನ ಬಲ ಪ್ರದರ್ಶಿಸುತ್ತಿದೆ.