ಸಿಯೋಲ್/ಪ್ಯಾಂಗ್ಯಾಂಗ್: “ನಾವು ಕೊರೊನಾ ವಿರುದ್ಧ ಜಯ ಸಾಧಿಸಿದ್ದೇವೆ’ ಹೀಗೆಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಘೋಷಣೆ ಮಾಡಿದ್ದಾನೆ.
ರಾಜಧಾನಿ ಪ್ಯಾಂಗ್ಯಾಂಗ್‌ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಸರ್ವಾಧಿಕಾರಿ ಸೋಂಕಿನ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿದ್ದ ಕಠಿಣ ಕ್ರಮಗಳನ್ನು ಸಡಿಲಗೊಳಿಸಲೂ ಆದೇಶ ಮಾಡಿದ್ದಾನೆ. ಇಷ್ಟು ಮಾತ್ರವಲ್ಲ, ದೇಶ ಕೊರೊನಾ ನಿರ್ಮೂಲನೆಯಲ್ಲಿ ಮಾಡಿದ ಸಾಧನೆಯನ್ನು ಜಗತ್ತು ಅದ್ಭುತ ಸಾಧನೆ ಎಂದು ಕೊಂಡಾಡಬೇಕು ಎಂದು ಹೇಳಿಕೊಂಡಿದ್ದಾನೆ.
ದೇಶದಲ್ಲಿ ಕೊರೊನಾ ಹೆಚ್ಚಾಗಲು ದಕ್ಷಿಣ ಕೊರಿಯಾ ಬಲೂನ್‌ಗಳ ಮೂಲಕ ಕರಪತ್ರಗಳನ್ನು ಹರಿಬಿಟ್ಟು ಸೋಂಕು ಹಬ್ಬಿಸುತ್ತಿದೆ ಎಂದು ಕಿಮ್‌ನ ಸಹೋದರಿ ಕಿಮ್ ಯೋ ಜಾಂಗ್ ಆರೋಪಿಸಿದ್ದಾಳೆ. ಮೇ ನಲ್ಲಿ ಒಮಿಕ್ರಾನ್ ರೂಪಾಂತರಿ ಕಂಡುಬಂದಿತ್ತು ಎಂದು ಹೇಳಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿಯೇ 48 ಲಕ್ಷ ಮಂದಿಗೆ ಜ್ವರದ ಪ್ರಕರಣ ದೃಢಪಟ್ಟಿತ್ತು.
ಜ್ವರ ಕಾಡಿತ್ತು:
ಇದೇ ಸಂದರ್ಭದಲ್ಲಿ ಮಾತನಾಡಿದ ಕಿಮ್‌ನ ಸಹೋದರಿ ಕಿಮ್ ಯೋ ಜಾಂಗ್ “ನನ್ನ ಸಹೋದರನಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ, 17 ದಿನಗಳ ಕಾಲ ಬಾಹ್ಯ ಸಂಪರ್ಕದಿಂದ ಹೊರಗುಳಿದಿದ್ದ’ ಎಂಬ ಅಂಶ ಒಪ್ಪಿಕೊಂಡಿದ್ದಾಳೆ. ಇದರಿಂದಾಗಿ ಆತನಿಗೆ ಕೊರೊನಾ ತಗುಲಿತ್ತು ಮತ್ತು ಆತನ ಆರೋಗ್ಯ ಸರಿಯಾಗಿಲ್ಲ ಎಂಬ ಅಂಶವನ್ನು ಆಕೆ ಪರೋಕ್ಷವಾಗಿ ಹೇಳಿಕೊಂಡಂತಾಗಿದೆ.