ಬೆಳಗಾವಿ: “ಅಭಿವೃದ್ಧಿ ಹಾಗೂ ಸೌಲಭ್ಯದ ವಿಷಯದಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷé ಮಾಡುವ ಮೂಲಕ ಸರ್ಕಾರವೇ ಜನರಲ್ಲಿ ಪ್ರತ್ಯೇಕತೆಯ ಭಾವನೆ ಮೂಡಿಸುತ್ತಿದೆ’ ಎಂದು ಆರೋಪಿಸಿರುವ ಮಠಾಧೀಶರು, ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಹಾಗೂ ಸುವರ್ಣಸೌಧ ಸಕ್ರಿಯಗೊಳಿಸಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕದ ಮಠಾಧೀಶರು ಜು.31ರಂದು ಸುವರ್ಣ ಸೌಧದ ಎದುರು ಸಾಂಕೇತಿಕ ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗನೂರು ರುದ್ರಾಕ್ಷಿಮಠದ ಡಾ| ಸಿದ್ಧರಾಮ ಸ್ವಾಮೀಜಿ, “ಅಖಂಡ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಉತ್ತರ ಕರ್ನಾಟಕದ ಜನರಿಗೆ ಪ್ರತ್ಯೇಕ ರಾಜ್ಯವೇ ಬೇಕು ಎಂಬ ಉದ್ದೇಶ ಇಲ್ಲ. ಆದರೇ ಇದುವರೆಗೆ ಆಡಳಿತ ನಡೆಸಿರುವ ಸರ್ಕಾರಗಳು ಈ ಭಾಗವನ್ನು ನಿರಂತರವಾಗಿ ನಿರ್ಲಕ್ಷಿಸಿವೆ. ಈ ಭಾಗದ ಬಗ್ಗೆ ಸರ್ಕಾರಕ್ಕೆ ಗಮನವೇ ಇಲ್ಲ ಎಂದರು.
“ಸುವರ್ಣ ವಿಧಾನಸೌಧಕ್ಕೆ ಸರ್ಕಾರದ ಮುಖ್ಯ ಕಚೇರಿಗಳು ಸ್ಥಳಾಂತರ ಆಗಬೇಕು ಎಂದು ಅದು ಉದ್ಘಾಟನೆಗೊಂಡಾಗಿನಿಂದ ಒತ್ತಾಯ ಮಾಡುತ್ತಲೇ ಬರಲಾಗಿದೆ. ಆದರೆ ಅಲ್ಲಿಗೆ ಕಚೇರಿಗಳ ಸ್ಥಳಾಂತರವಾದರೆ ಆದಾಯ ಕಡಿಮೆಯಾಗುತ್ತದೆ ಎಂಬ ಕಾರಣದಿಂದ ಇಲ್ಲಿಗೆ ಕಚೇರಿಗಳನ್ನು ತರುತ್ತಿಲ್ಲ. ಈ ರೀತಿಯ ಅನ್ಯಾಯವನ್ನು ಎಷ್ಟು ದಿನ ಸಹಿಸಬೇಕು’ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, “ಉತ್ತರ ಕರ್ನಾಟಕದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಏನೂ ಆಗಿಲ್ಲ. ಅಖಂಡ ಕರ್ನಾಟಕ ಹಾಗೆಯೇ ಉಳಿಯಬೇಕು ಎಂಬ ಇಚ್ಛೆ ಇದ್ದರೂ ಅನ್ಯಾಯ ಎದ್ದು ಕಾಣುತ್ತದೆ. ಈ ಭಾಗದ ಶಾಸಕರು ಗಟ್ಟಿ ದನಿ ಎತ್ತಿ ಆಗಿರುವ ಅನ್ಯಾಯ ಸರಿಪಡಿಸಬೇಕು’ ಎಂದರು.
ನಿಡಸೋಸಿ ಮಠದ ಪಂಚಮಲಿಂಗೇಶ್ವರ ಸ್ವಾಮೀಜಿ ಮಾತನಾಡಿ, “ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ, 4 ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರೂ ಯಾವ ಸರ್ಕಾರಗಳೂ ಗಮನ ಹರಿಸಿಲ್ಲ. ಈ ಭಾಗದ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದರು.
ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ನಿಜಗುಣ ದೇವರು, ವಿಜಯಪುರದ ಸಿದ್ದಾರೂಢ ಸ್ವಾಮೀಜಿ, ಜಮಖಂಡಿಯ ಸಾವಳಗೀಶ್ವರ ಸ್ವಾಮೀಜಿ, ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಮುಖಂಡ ಅಶೋಕ ಪೂಜಾರಿ, ಕಲ್ಯಾಣರಾವ ಮುಚಳಂಬಿ, ಆರ್.ಎಸ್. ದರ್ಗೆ, ನಾಗೇಶ ಗೋಲಶೆಟ್ಟಿ, ದೀಪಕ ರಾಯಣ್ಣವರ, ಮಹೇಶ ಪೂಜಾರಿ ಇದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಉ.ಕ.ಕ್ಕೆ ಅನ್ಯಾಯವಾಗಿಲ್ಲ ಎಂಬುದರ ಕುರಿತು ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಬಿಡುಗಡೆ ಮಾಡಿರುವ ದಾಖಲೆಗಳು ನನಗೆ ತಲುಪಿಲ್ಲ. ದಾಖಲೆ ದೊರೆತರೆ ಬಹಿರಂಗ ಚರ್ಚೆಗೆ ಸಿದ್ಧ. ಜೆಡಿಎಸ್ ನಾಯಕರು ಮೊದಲು ಹೊಸದಾಗಿ ರಚನೆಯಾಗಿರುವ ತಾಲೂಕುಗಳಿಗೆ ಅನುದಾನ ಕೊಡಿಸುವ ಪ್ರಯತ್ನ ಮಾಡಲಿ.
– ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ