Advertisement

ರಾಜಕೀಯ ಅರಾಜಕತೆಗೆ ಮತ್ತೆ ಉತ್ತರ ಕರ್ನಾಟಕ ವೇದಿಕೆ?

06:25 AM Sep 13, 2018 | Team Udayavani |

ಹುಬ್ಬಳ್ಳಿ: ಸಮ್ಮಿಶ್ರ ಸರ್ಕಾರದ ಅಸ್ಥಿರಕ್ಕೆ ಮತ್ತೂಮ್ಮೆ ಉತ್ತರ ಕರ್ನಾಟಕ ವೇದಿಕೆ ಆಗುತ್ತಿದೆಯೇ?

Advertisement

– ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಬಂಡಾಯ ಮೊಳಗಿದ್ದು ಇದೇ ಭಾಗದಿಂದ. ಇದೀಗ ಸಮ್ಮಿಶ್ರ ಸರ್ಕಾರದ ಅಸ್ಥಿರತೆ ಧ್ವನಿ ಕೇಳಿ ಬರುತ್ತಿರುವುದು ಕೂಡ ಇದೇ ಭಾಗದಿಂದ. ಕಾಕತಾಳಿಯವೆಂದರೆ ಎರಡೂ ಸಂದರ್ಭಕ್ಕೆ ಪ್ರಕೃತಿಯ ಹಲವು ಸನ್ನಿವೇಶ ಸಾಮ್ಯತೆ ನೀಡತೊಡಗಿದೆ.

ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರು ಬಂಡಾಯ ಸ್ಫೋಟಕ್ಕೆ ಪಿಎಲ್‌ಡಿಬಿ ಬ್ಯಾಂಕ್‌ ಅಧ್ಯಕ್ಷರ ಆಯ್ಕೆ ವಿವಾದ ಕೇವಲ ಒಂದು ಕಾರಣವಷ್ಟೆ. ಆದರೆ, ಅದರ ಹಿಂದಿನ ರಾಜಕೀಯ ಲೆಕ್ಕಾಚಾರ, ಪ್ರತಿಷ್ಠೆ ಹಾಗೂ ಹಿಡಿತ ಸಾಧನೆ ಪ್ರಮುಖವಾಗಿದೆ. ಅಧಿಕಾರ ಹಿಡಿಯಲು ತನ್ನದೇ ಯತ್ನದಲ್ಲಿ ತೊಡಗಿದ್ದ ಬಿಜೆಪಿಗೆ ಇದೀಗ ಜಾರಕಿಹೊಳಿ ಸಹೋದರರ ಬಂಡಾಯ ಒಂದಿಷ್ಟು ಉತ್ತೇಜನ ನೀಡಿದಂತಿದೆಯಾದರೂ, ಕೆಲ ಮೂಲಗಳ ಪ್ರಕಾರ ಬಿಜೆಪಿಯವರು ಕೇವಲ ಜಾರಕಿಹೊಳಿ ಸಹೋದರರನ್ನು ಮಾತ್ರ ನಂಬಿಕೊಳ್ಳದೆ, ತಮ್ಮದೇ ನಿಟ್ಟಿನಲ್ಲಿ ಹಲವು ಶಾಸಕರನ್ನು ಸೆಳೆಯುವ ಯೋಜನೆ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.

ಮತ್ತೆ ಉತ್ತರ ಮುನ್ನೆಲೆಗೆ: ಅಭಿವೃದ್ಧಿ ದೃಷ್ಟಿಯಿಂದ ಸದಾ ಹಿಂದಿನ ಸಾಲಿನಲ್ಲಿಯೇ ನಿಲ್ಲುವ, ಸಣ್ಣ ಸೌಲಭ್ಯಕ್ಕೂ ಹೋರಾಟ ಮಾಡಿಯೇ ಪಡೆಯುವ ಸ್ಥಿತಿ ಇರುವ ಉತ್ತರ ಕರ್ನಾಟಕ ಮಾತ್ರ ರಾಜಕೀಯ ಬಂಡಾಯ ಸಂದರ್ಭದಲ್ಲಿ ಮುನ್ನೆಲೆಗೆ ಬಂದು ಬಿಡುತ್ತದೆ. 1971ರಲ್ಲಿ ವೀರೇಂದ್ರ ಪಾಟೀಲ ಸರ್ಕಾರ ಪತನಕ್ಕೆ ಇದೇ ಉ.ಕ. ನಾಯಕರ ಬಂಡಾಯವೇ ಕಾರಣವಾಗಿತ್ತು. 2009ರಲ್ಲಿ ಬಿಜೆಪಿ ಸರ್ಕಾರದಲ್ಲಿ ಎದ್ದ ಬಂಡಾಯಕ್ಕೂ ಇದೇ ಉ.ಕ. ಕಾರಣವಾಗಿತ್ತು. ಬಳ್ಳಾರಿಯ ರೆಡ್ಡಿ ಸಹೋದರರು ಬಂಡಾಯ ಮೊಳಗಿಸಿದ್ದರು. ಆಗಲೂ ಇದಕ್ಕೆ ಧ್ವನಿಗೂಡಿಸಿದ ಬಹುತೇಕ ಶಾಸಕರಲ್ಲಿ ಉತ್ತರದವರ ಪಾಲು ಅಧಿಕವಾಗಿತ್ತು. 2010ರಲ್ಲಿ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ 16 ಶಾಸಕರು ಬಂಡಾಯ ಎದ್ದಾಗಲೂ ಇದೇ ಭಾಗದ ಶಾಸಕರ ಸಂಖ್ಯೆ ಹೆಚ್ಚು ಎನ್ನುವಂತಿತ್ತು.

ಇದೀಗ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಕ್ಕೆ ಅಸ್ಥಿರತೆ ಭೀತಿಗೆ ಕಾರಣವಾಗಿರುವುದು ಇದೇ ಭಾಗದ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ ಸಹೋದರ ನಡೆ. ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಬಿಜೆಪಿ ಕಡೆ ಸಾಗಬಹುದಾದ ಸಾಧ್ಯತೆ ಇರುವ ಶಾಸಕರ ಪಟ್ಟಿ ನೋಡಿದಾಗಲು ಅಲ್ಲೂ ಉ.ಕ.ದವರದ್ದೇ ಪಾರುಪತ್ಯ ಎನ್ನುವಂತಿದೆ.

Advertisement

ಪ್ರಕೃತಿ-ಸನ್ನಿವೇಶದ ಕಾಕಾತಾಳಿಯ: 2009ರಲ್ಲಿ ಬಿಜೆಪಿ ಸರ್ಕಾರದಲ್ಲಿ ಎದ್ದ ಬಂಡಾಯಕ್ಕೂ, 2018ರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಕ್ಕೆ ಬಂಡಾಯದ ಕಾರ್ಮೋಡ ಕವಿಯುತ್ತಿರುವುದಕ್ಕೂ ಪ್ರಕೃತಿ ಹಾಗೂ ಸನ್ನಿವೇಶಗಳು ಕೆಲ ರೂಪದ ಸಾಮ್ಯತೆ ಕಾಕಾತಾಳಿಯ ಎನ್ನಬಹುದಾಗಿದೆ. 2009ರಲ್ಲಿ ಉ.ಕ. ಕಂಡರಿಯದ ಪ್ರವಾಹಕ್ಕೆ ಸಿಲುಕಿತ್ತು. ಆ ಸಂದರ್ಭದಲ್ಲಿಯೇ ಬಂಡಾಯದ ಭಾಗವಾಗಿ ಶಾಸಕರ ರೆಸಾರ್ಟ್‌ ವಾಸ ಆರಂಭವಾಗಿತ್ತು. ಉತ್ತರದ ಅನೇಕ ಶಾಸಕರು ಹೈದರಾಬಾದ್‌, ಗೋವಾ ಇನ್ನಿತರ ಕಡೆಗಳಲ್ಲಿ ಉಳಿದಿದ್ದರು. ಪ್ರವಾಹದ ಸ್ಥಿತಿ ಕಂಡಿದ್ದು, ಸೆಪ್ಟೆಂಬರ್‌ ಕೊನೆ ಹಾಗೂ ಅಕ್ಟೋಬರ್‌ ಮೊದಲ ವಾರದಲ್ಲಿ.

2018ರಲ್ಲಿ ಉತ್ತರದ ಅನೇಕ ಜಿಲ್ಲೆಗಳು ಅದರಲ್ಲೂ ಹೈದರಾಬಾದ್‌ ಕರ್ನಾಟಕದ ಬಹುತೇಕ ಜಿಲ್ಲೆಗಳು ಬರದಿಂದ ತತ್ತರಿಸಿವೆ. ಕೊಡಗು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ತನ್ನದೇ ಅನಾಹುತ ಸೃಷ್ಟಿಸಿದೆ. ಇದೀಗ ಸಮ್ಮಿಶ್ರ ಸರ್ಕಾರಕ್ಕೆ ಬಂಡಾಯದ ಬಿಸಿ ತಾಗುವ ಸ್ಥಿತಿ ನಿರ್ಮಾಣವಾಗಿದೆ. ಅದು ಸೆಪ್ಟೆಂಬರ್‌ನ‌ಲ್ಲಿಯೇ. 2009ರಲ್ಲಿ ಬಿಜೆಪಿ ಸರ್ಕಾರಕ್ಕೆ ಬಂಡಾಯ ಎದುರಾಗಿತ್ತು. ಇದಾದ 9 ವರ್ಷಕ್ಕೆ ಅಂದರೆ 2018ರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರದಲ್ಲಿ ಬಂಡಾಯದ ಕಿಚ್ಚು ಹೆಚ್ಚತೊಡಗಿದೆ. ಎದ್ದಿರುವ ಬಂಡಾಯ ಶಮನಗೊಂಡು ಸುಖಾಂತ್ಯ ಸನ್ನಿವೇಶ ನಿರ್ಮಾಣವಾಗಲಿದೆಯೋ ಅಥವಾ ಮತ್ತೂಂದು ಸರ್ಕಾರ ಅಸ್ಥಿತ್ವ ಇಲ್ಲವೇ ಪತನಕ್ಕೆ ತಾನು ಕಾರಣ ಎಂಬ ಪಟ್ಟವನ್ನು ಉತ್ತರ ಕರ್ನಾಟಕ ಹೊತ್ತು ಇತಿಹಾಸ ಪುಟ ಸೇರಲಿದೆಯೋ ಕಾಲವೇ ನಿರ್ಣಯಿಸಬೇಕು.

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next