Advertisement

ಉ.ಕ. ಅನ್ಯಾಯ ಪ್ರಶ್ನಿಸಲು ಸಿದ್ಧವಾಗುತ್ತಿದೆ ಪಕ್ಷಾತೀತ ವೇದಿಕೆ

06:00 AM Dec 21, 2018 | Team Udayavani |

ಬೆಳಗಾವಿ: ಉತ್ತರ ಕರ್ನಾಟಕ ಭಾಗಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿರುವುದನ್ನು ಪ್ರಶ್ನಿಸಲು ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಅಭಿವೃದ್ಧಿಗೆ ಪೂರಕವಾಗಿ ನಿರ್ಣಯಗಳನ್ನು ಕೈಗೊಳ್ಳಲು ಉತ್ತರ ಕರ್ನಾಟಕ ಭಾಗದ ರಾಜಕೀಯ ನಾಯಕರು ಪಕ್ಷಾತೀತ ವೇದಿಕೆ ಸೃಷ್ಟಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.

Advertisement

ಇತ್ತೀಚೆಗೆ ಬೆಳಗಾವಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಸಭಾಪತಿ ಆಯ್ಕೆ ಕುರಿತಂತೆ ನಡೆದಿರುವ ಬೆಳವಣಿಗೆಗಳ ಬಗ್ಗೆ ಉತ್ತರ ಕರ್ನಾಟಕ ಭಾಗದ ರಾಜಕೀಯ ನಾಯಕರು ಅಸಮಾಧಾನಗೊಂಡಿದ್ದು, ಎಸ್‌.ಆರ್‌. ಪಾಟೀಲ್‌ ಹಾಗೂ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ಕೈ ತಪ್ಪಿಸಿರುವುದಕ್ಕೆ ಪಕ್ಷಾತೀತವಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಈ ಬೆಳವಣಿಗೆ ಉತ್ತರ ಕರ್ನಾಟಕ ಭಾಗದ ಎಲ್ಲ ರಾಜಕೀಯ ನಾಯಕರನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದ್ದು, ಸರ್ಕಾರಗಳಲ್ಲಿ ಉತ್ತರ ಕರ್ನಾಟಕ ಭಾಗದ ಅರ್ಹ ನಾಯಕರಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯದಿದ್ದರೆ, ಈ ಭಾಗದ ಅಭಿವೃದ್ಧಿಯ ಮೇಲೂ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ರಾಜಕೀಯವಾಗಿ ಹಾಗೂ ಅನುದಾನ ಹಂಚಿಕೆ ವಿಷಯ, ಯೋಜನೆಗಳನ್ನು ನೀಡುವ ವಿಷಯಗಳಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಲೂ ರಾಜ್ಯದ ಮೂರು ಪ್ರಮುಖ ಪಕ್ಷಗಳ ನಾಯಕರು ಪ್ರಯತ್ನ ಆರಂಭಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗದವರಿಗೆ ನಿರೀಕ್ಷಿತ ಪ್ರಾತಿನಿಧ್ಯ ದೊರೆಯದೇ ಇರುವುದು, ಜೆಡಿಎಸ್‌ ಪಕ್ಷಕ್ಕೆ ಉತ್ತರ ಕರ್ನಾಟಕದಲ್ಲಿ ರಾಜಕೀಯ ಪ್ರಾತಿನಿಧ್ಯ ಇಲ್ಲ ಎನ್ನುವ ಕಾರಣಕ್ಕೆ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಿರುವುದು, ಕಾಂಗ್ರೆಸ್‌ ಪಕ್ಷ ಕೂಡ ಅದೇ ಮನಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು,  ಈ  ಭಾಗದ ನಾಯಕರನ್ನು ಚಿಂತೆಗೀಡುಮಾಡಿದೆ.

ಪಕ್ಷಾತೀತ ವೇದಿಕೆಗೆ ಸಿದ್ದತೆ
ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಹಾಗೂ ರಾಜಕೀಯ ಪ್ರಾತಿನಿಧ್ಯ ಪಡೆಯುವ ನಿಟ್ಟಿನಲ್ಲಿ ವಿಧಾನ ಪರಿಷತ್‌ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ್‌ ಕವಟಗಿಮಠ ಹಾಗೂ ಸಂಸದ ಪ್ರಭಾಕರ ಕೋರೆ ನೇತೃತ್ವದಲ್ಲಿ ಈಗಾಗಲೇ ಉತ್ತರ ಕರ್ನಾಟಕದ ನಾಯಕರನ್ನು ಪಕ್ಷಾತೀತವಾಗಿ ಒಗ್ಗೂಡಿಸುವ ಪ್ರಯತ್ನ ಆರಂಭವಾಗಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಉತ್ತರ ಭಾಗದ ಪ್ರಮುಖ ನಾಯಕರಾದ ಎಂ.ಬಿ. ಪಾಟೀಲ್‌, ಎಸ್‌.ಆರ್‌.ಪಾಟೀಲ್‌, ಬಸವರಾಜ ಹೊರಟ್ಟಿ, ಎಚ್‌.ಕೆ. ಪಾಟೀಲ್‌, ಸತೀಶ್‌ ಜಾರಕಿಹೊಳಿ, ಕೆ.ಸಿ. ಕೊಂಡಯ್ಯ, ಅವರೊಂದಿಗೆ ಪ್ರಾಥಮಿಕ ಹಂತದ ಮಾತುಕತೆ ನಡೆಸಿದ್ದು, ಜಗದೀಶ್‌ ಶೆಟ್ಟರ್‌, ಉಮೇಶ್‌ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಬಸನಗೌಡ ಪಾಟೀಲ್‌, ಸಚಿವರಾದ ಆರ್‌.ವಿ.ದೇಶಪಾಂಡೆ, ರಾಜಶೇಖರ್‌ ಪಾಟೀಲ್‌,  ಬಂಡೆಪ್ಪ ಕಾಂಶಪೂರ್‌, ಜೆಡಿಯು ಮುಖಂಡ ಎಂ.ಪಿ. ನಾಡಗೌಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಮುಖ ನಾಯಕರನ್ನು ಸಂಪರ್ಕಿಸಿ, ಉತ್ತರ ಕರ್ನಾಟಕ ಭಾಗಕ್ಕೆ ರಾಜಕೀಯವಾಗಿ ಹಾಗೂ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯವಾಗುತ್ತಿರುವುದನ್ನು ಸಂಘಟಿತವಾಗಿ ಪ್ರಶ್ನಿಸಲು ಮುಂದಾಗಿದ್ದಾರೆ.

Advertisement

ಖರ್ಗೆ ಜೊತೆಗೂ ಮಾತುಕತೆ:
ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೂ ಮಾತುಕತೆ ನಡೆಸಿ ಉತ್ತರ ಕರ್ನಾಟಕ ಭಾಗಕ್ಕೆ ರಾಜಕೀಯ ಪ್ರಾತಿನಿಧ್ಯದ ಕೊರತೆಯಿಂದಾಗಿ ಈ ಭಾಗದ ಅಭಿವೃದ್ಧಿ ಮೇಲೂ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಮನದಟ್ಟು ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಧಿವೇಶನ ಮುಗಿದ ನಂತರ ಸಭೆ
ಬೆಳಗಾವಿ ಅಧಿವೇಶನ ಮುಗಿದ ನಂತರ ಶೀಘ್ರವೇ ಈ ಕುರಿತು ಸಭೆ ನಡೆಸಿ ಉತ್ತರ ಕರ್ನಾಟಕ ನಾಯಕರ ಪಕ್ಷಾತೀತ ವೇದಿಕೆ ರಚಿಸುವ ಅಧಿಕೃತ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರ ಕರ್ನಾಟಕ ಭಾಗಕ್ಕೆ ಮೊದಲಿನಿಂದಲೂ ಅನ್ಯಾಯವಾಗುತ್ತಾ ಬಂದಿದೆ. ಈ ಭಾಗದ ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ ಯೋಚಿಸುವ ಅಗತ್ಯವಿದೆ. ಹೀಗಾಗಿ ಈ ಭಾಗದ ನಾಯಕರೆಲ್ಲ ಸೇರಿ ಪಕ್ಷಾತೀತ ವೇದಿಕೆ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ.
ಮಹಾಂತೇಶ ಕವಟಗಿಮಠ, ವಿಧಾನಪರಿಷತ್‌ ಪ್ರತಿಪಕ್ಷದ ಮುಖ್ಯ ಸಚೇತಕ

ಉತ್ತರ ಕರ್ನಾಟಕದ ವಿಷಯದಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಲು ಈ ಭಾಗದ ಎಲ್ಲ ನಾಯಕರು ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶನ ಮಾಡುವುದು ಅಗತ್ಯವಿದೆ. ಇದು ರಾಜಕೀಯ ಲಾಭಕ್ಕಿಂತ ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ.
ಎಸ್‌.ಆರ್‌.ಪಾಟೀಲ್‌, ಧಾನಪರಿಷತ್‌ ಸದಸ್ಯ, ಕಾಂಗ್ರೆಸ್‌ ನಾಯಕ

ಶಂಕರ ಪಗೋಜಿ

Advertisement

Udayavani is now on Telegram. Click here to join our channel and stay updated with the latest news.

Next