ಕುಷ್ಟಗಿ: ಹರಿಯಾಣ ಮೂಲದ ರೈತರೊಬ್ಬರು ಕುಷ್ಟಗಿ ತಾಲೂಕಿನ ಭೂಮಿಯಲ್ಲಿ ಉತ್ತರ ಭಾರತದಲ್ಲಿ ಬೆಳೆಯುವ ಕುಂಬಳಕಾಯಿ ಬೆಳೆದು ನಿರೀಕ್ಷಿತ ಲಾಭ ಕಂಡುಕೊಂಡಿದ್ದಾರೆ. ನಾಮಧಾರಿ ಸೀಡ್ಸ್ ಕಂಪನಿ ಪ್ರತಿನಿಧಿ ಯಾಗಿ ವಿವಿಧ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸಿ ಬಳಿಕ ಈ ಕೆಲಸ ಒಗ್ಗದೇ ಇದ್ದಾಗ ಕುಷ್ಟಗಿಯಲ್ಲಿ ನೆಲೆ ನಿಂತು ಕೃಷಿಕರಾಗಿದ್ದಾರೆ ಹರಿಯಾಣ ರಾಜ್ಯದ ಸಿರಸಾ ಜಿಲ್ಲೆಯ ಸಂತನಗರದ ರೈತ ಲಖ್ವೀರ್ ಸಿಂಗ್. ಬೀಜೋತ್ಪಾದನೆ ಕೃಷಿಯಲ್ಲಿ ಸಾಕಷ್ಟು ಅನುಭವಿ ಆಗಿರುವ ಲಖ್ವೀರ್ ಸಿಂಗ್ ಕಳೆದ ಹತ್ತಾರು ವರ್ಷಗಳಿಂದ ಕುಷ್ಟಗಿಯಲ್ಲಿಯೇ ವಾಸವಿದ್ದು, ತಾಲೂಕಿನಲ್ಲಿ ಬ್ಯಾಲಿಹಾಳ ಸೀಮಾದಲ್ಲಿ 16 ಎಕರೆ ಜಮೀನನ್ನು ಲೀಜ್ ಒಪ್ಪಂದದ ಆಧಾರದಲ್ಲಿ ಪಡೆದು ವಿವಿಧ ಬೆಳೆ ಬೆಳೆಯುತ್ತಿದ್ದಾರೆ.
Advertisement
ಪ್ರತಿ ವರ್ಷವೂ ತಪ್ಪದೇ ಬೀಜೋತ್ಪಾದನೆ ಕೃಷಿಯಲ್ಲಿ ಕುಂಬಳಕಾಯಿ ಬೆಳೆಯುತ್ತಿದ್ದು, ನಿರೀಕ್ಷಿತ ಲಾಭ ಗಳಿಸುತ್ತಿರುವುದು ವಿಶೇಷ. ಸದ್ಯ ಒಂದೂವರೆ ಎಕರೆಯಲ್ಲಿ ಕುಂಬಳಕಾಯಿ ಬೆಳೆದಿದ್ದಾರೆ. ಕಳೆದ ನವೆಂಬರ್‌ನಲ್ಲಿ ನಾಟಿ ಮಾಡಿದ್ದು, ಸದ್ಯ ಐದು ತಿಂಗಳ ಬೆಳೆ ಇದೆ. ಈ ಕುಂಬಳಕಾಯಿ ನಿರೀಕ್ಷಿತ ಇಳುವರಿಗೆ ಪರಾಗಸ್ಪರ್ಶ ಪ್ರಮುಖ ಘಟ್ಟವಾಗಿದೆ. ಗಂಡು ಹೂವಿನ ತಳಿಯ ಕುಂಬಳಕಾಯಿ ಪ್ರತ್ಯೇಕ ಬೆಳೆಸಲಾಗುತ್ತಿದೆ. ಇದರ ಹೂವಿನ ಪರಾಗವನ್ನು ಹೆಣ್ಣು ತಳಿಯ ಕುಂಬಳ ಬಳ್ಳಿಯ ಹೂಗಳಿಗೆ ಸ್ಪರ್ಶ ಕ್ರಿಯೆ ಮಾಡಲಾಗುತ್ತದೆ.ಈ ಕೆಲಸ ಒಂದು ವಾರ ಹಿಡಿಯುತ್ತಿದೆ. ಪ್ರತಿ ಬಳ್ಳಿಗೆ ಎರಡು ಕುಂಬಳ ಕಾಯಿಗಳನ್ನು ಬಿಟ್ಟಿದ್ದು, ಪ್ರತಿ ಕುಂಬಳಕಾಯಿ 7ರಿಂದ 8 ಕೆ.ಜಿ. ತೂಕವಿದ್ದು, ಪ್ರತಿ ಕಾಯಿಯಿಂದ 60ರಿಂದ 70 ಗ್ರಾಂ ಇಳುವರಿಯಂತೆ ಎರಡೂವರೆ ಕ್ವಿಂಟಲ್‌ನಷ್ಟು ಕುಂಬಳಕಾಯಿ ಬೀಜ ನಿರೀಕ್ಷಿಸಬಹುದಾಗಿದೆ. ಪ್ರತಿ ಕ್ವಿಂಟಲ್‌ಗೆ 60 ಸಾವಿರ ರೂ. ಇದ್ದು, ಎರಡೂವರೆ ಕ್ವಿಂಟಲ್ ಗೆ 1.50ಲಕ್ಷ ರೂ. ಆದಾಯವಿದೆ. 40 ಸಾವಿರ ಖರ್ಚು ಆದರೆ ಈ ಬೆಳೆ 6 ತಿಂಗಳಲ್ಲಿ 1ಲಕ್ಷರೂ. ಆದಾಯ ನಿಶ್ಚಿತ ಎನ್ನುತ್ತಾರೆ ಲಖ್ವೀರ್ ಸಿಂಗ್
-ಲಖ್ವೀರ್ ಸಿಂಗ್, ಹರಿಯಾಣ ಮೂಲದ ರೈತ