Advertisement

Rain ಮುಗಿಯದ ಮಳೆಯ ಹೊಡೆತ: ಇನ್ನೂ 3 ದಿನಗಳ ಕಾಲ ಉತ್ತರದಲ್ಲಿ ವರುಣಾಘಾತ ಮುಂದುವರಿಕೆ

12:14 AM Jul 12, 2023 | Team Udayavani |

ಹೊಸದಿಲ್ಲಿ: ಉತ್ತರ ಭಾರತದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಸದ್ಯಕ್ಕಂತೂ ವರ್ಷಧಾರೆ, ಪ್ರವಾಹ, ಭೂಕುಸಿತದಿಂದ ಜನರಿಗೆ ಮುಕ್ತಿ ಸಿಗುವ ಲಕ್ಷಣ ಗೋಚರಿಸುತ್ತಿಲ್ಲ. ಏಕೆಂದರೆ, ದೇಶದ 23 ರಾಜ್ಯಗಳಲ್ಲಿ ಇನ್ನೂ ಕೆಲವು ದಿನಗಳ ಕಾಲ ವಿಪರೀತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Advertisement

ಈಗಾಗಲೇ ಭೂಕುಸಿತದಿಂದ ನಲುಗಿ ಹೋಗಿರುವ ಉತ್ತರಾಖಂಡಕ್ಕೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದ್ದು, ಮತ್ತಷ್ಟು ಆತಂಕ ಮೂಡಿಸಿದೆ. ಇನ್ನು, ಪಶ್ಚಿಮ ಬಂಗಾಲ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲೂ ವಿಪರೀತ ಮಳೆಯಾಗಲಿದೆ ಎಂದು ಹೇಳಿದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ದಿಲ್ಲಿ, ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಇಲಾಖೆ ಹೇಳಿದ್ದು, 3 ದಿನಗಳ ಬಳಿಕ ಮಳೆಯ ಪ್ರಮಾಣ ತಗ್ಗಲಿದೆ ಎಂದಿದೆ.

ಅಧಿಕೃತ ಮಾಹಿತಿ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ದಿಢೀರ್‌ ಪ್ರವಾಹದಿಂದ ಕೇವಲ 2 ದಿನಗಳಲ್ಲಿ 37 ಮಂದಿ ಮೃತಪಟ್ಟಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಿದೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ. ಮಂಗಳವಾರ ಮಳೆ ಮತ್ತು ಹಿಮ ವರ್ಷದಿಂದ ಹಿಮಾಚಲ ಪ್ರದೇಶದ ಚಂದೇರ್‌ತಾಲ್‌ನಲ್ಲಿ ಸುಮಾರು 300 ಮಂದಿ ಪ್ರವಾಸಿಗರು ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಲು ವಾಯುಪಡೆಯ ಹೆಲಿಕಾಪ್ಟರ್‌ ಅನ್ನು ನಿಯೋಜಿಸಲಾಗಿದೆ. ಉಸಿರಾಟದ ತೊಂದರೆ ಎದುರಿಸುತ್ತಿದ್ದ ಇಬ್ಬರನ್ನು ಏರ್‌ಲಿಫ್ಟ್ ಮಾಡಲಾಗಿದೆ.

ಉಕ್ಕಿದ ಯಮುನೆ, ದಿಲ್ಲಿಗೂ ನುಗ್ಗಿದ ಪ್ರವಾಹ: ದಿಲ್ಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ (205.33 ಮೀಟರ್‌) ಮೀರಿ ಹರಿಯುತ್ತಿದ್ದು, ಪ್ರವಾಹ ಭೀತಿ ತೀವ್ರಗೊಂಡಿದೆ. ಮುಳುಗಡೆ ಸಾಧ್ಯತೆಯಿರುವ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಜತೆಗೆ ಹಳೆಯ ರೈಲ್ವೇ ಸೇತುವೆಯನ್ನು ಮುಚ್ಚಲಾಗಿದ್ದು, ವಾಹನಗಳು ಮತ್ತು ರೈಲು ಸಂಚಾರಕ್ಕೆ ಅನುಮತಿ ನಿರ್ಬಂಧಿಸಲಾಗಿದೆ. ಹರಿಯಾಣದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಯಮುನಾ ನಗರದ ಹತ್ನಿಕುಂಡ್‌

ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮವಾಗಿ ಯಮುನಾ ನದಿಯಲ್ಲಿ ನೀರಿನ ಮಟ್ಟ 206.38ಕ್ಕೇರಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ  ಹಲವಾರು ಮನೆಗಳು ಜಲಾವೃತಗೊಂಡಿವೆ.

Advertisement

ಈ ಹಿಂದೆ 1978ರಲ್ಲಿ  ಯಮುನೆಯ ನೀರಿನ ಮಟ್ಟ 207.49 ಮೀಟರ್‌ಗೆ ತಲುಪಿದ್ದೇ ಸಾರ್ವಕಾಲಿಕ ದಾಖಲೆಯಾಗಿತ್ತು. ಈ ಮಟ್ಟವನ್ನು “ಅತ್ಯಧಿಕ ಪ್ರವಾಹದ ಮಟ್ಟ’ ಎಂದು ಪರಿಗಣಿಸಲಾಗುತ್ತದೆ.

ಇದು ಆರಂಭವಷ್ಟೇ ಎಂದ ವಿಜ್ಞಾನಿಗಳು!
ವಾತಾವರಣದಲ್ಲಿ ಆಗಿರುವ ಎರಡು ಅಪರೂಪದ ವಿದ್ಯಮಾನದಿಂದಾಗಿ ಉತ್ತರ ಭಾರತವಿಡೀ ಮಳೆಯಲ್ಲಿ ತೋಯುವಂತಾಗಿದೆ. ಹಾಗಂತ ಇಂಥ ಪರಿಸ್ಥಿತಿ ಉಂಟಾಗಿರುವುದು ಕೇವಲ ಭಾರತದಲ್ಲಿ ಮಾತ್ರವಲ್ಲ; ಜಗತ್ತಿನ ಇನ್ನೂ ಅನೇಕ ದೇಶಗಳು ಇದೇ ಮಾದರಿಯ ಪ್ರವಾಹದಿಂದ ಸಂಕಷ್ಟಕ್ಕೀಡಾಗಿವೆ. ಜಪಾನ್‌ನಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ, ಭೂಕುಸಿತ ಉಂಟಾಗಿದ್ದರೆ, ನ್ಯೂಯಾರ್ಕ್‌ನ ಹಡ್ಸನ್‌ ವ್ಯಾಲಿ, ವರ್ಮೋಂಟ್‌ನಲ್ಲಿ ಪ್ರವಾಹದಿಂದ ಜನ ತತ್ತರಿಸಿಹೋಗಿದ್ದಾರೆ. 2011ರ ಚಂಡಮಾರುತಕ್ಕಿಂತಲೂ ಇಂದಿನ ಪರಿಸ್ಥಿತಿ ಭೀಕರವಾಗಿದೆ ಎಂದು ಜನ ಹೇಳಿಕೊಳ್ಳುತ್ತಿದ್ದಾರೆ. ಚೀನದ ಉತ್ತರ, ಕೇಂದ್ರ ಮತ್ತು ಆಗ್ನೇಯ ಭಾಗದಲ್ಲಿ ನೆರೆಯಿಂದಾಗಿ ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಟರ್ಕಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇವೆಲ್ಲದಕ್ಕೂ ಪರಸ್ಪರ ಸಂಬಂಧವಿದೆ ಎನ್ನುತ್ತಾರೆ ವಿಜ್ಞಾನಿಗಳು.

ತಾಪ ಹೆಚ್ಚಿರುವಂಥ ವಾತಾವರಣದಲ್ಲಿ ರೂಪುಗೊಳ್ಳುವ ಬಿರುಗಾಳಿಯೇ ಇದಕ್ಕೆ ಕಾರಣ ಎನ್ನುವುದು ಅವರ ವಾದ. ಬೆಚ್ಚಗಿನ ವಾತಾವರಣವು ಹೆಚ್ಚು ತೇವಾಂಶವನ್ನು ಹೊಂದಿರುತ್ತದೆ. ಇವು ಭಾರೀ ಮಳೆಗೆ ಕಾರಣವಾಗುತ್ತವೆ. ಜತೆಗೆ ಇಂಗಾಲದ ಡೈ ಆಕ್ಸೆ„ಡ್‌ ಮತ್ತು ಮೀಥೇನ್‌ನಂತಹ ಮಲಿನಕಾರಕಗಳು ವಾತಾವರಣದ ಬಿಸಿಯನ್ನು ಹೆಚ್ಚಿಸುತ್ತಿವೆ. ಜತೆಗೆ ತಾಪವು ಭೂಮಿಯಿಂದ ಬಾಹ್ಯಾಕಾಶದತ್ತ ಹೊರಸೂಸಲು ಅವಕಾಶ ನೀಡುವ ಬದಲು, ಇವುಗಳು ಆ ತಾಪವನ್ನು ಹಿಡಿದಿಟ್ಟುಕೊಳ್ಳುತ್ತಿವೆ. ತಾಪಮಾನ ಹೆಚ್ಚಳವಾದಂತೆಇಂಥ ಪ್ರಾಕೃತಿಕ ವಿಕೋಪಗಳೂ ಹೆಚ್ಚಳವಾಗುತ್ತಲೇ ಸಾಗುತ್ತವೆ. ಇದು ಆರಂಭವಷ್ಟೇ ಎಂಬ ಎಚ್ಚರಿಕೆಯನ್ನೂ ವಿಜ್ಞಾನಿಗಳು ನೀಡಿದ್ದಾರೆ.

ಕೊಚ್ಚಿಹೋದ ಸೇತುವೆ
ಉತ್ತರಾಖಂಡದ ಚಮೋಲಿ ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಜುಮ್ಮಾಗಡ ನದಿಯಲ್ಲಿ ಪ್ರವಾಹ ಉಂಟಾಗಿ ಸೇತುವೆಯೊಂದು ಕೊಚ್ಚಿ ಹೋಗಿದೆ. ಪರಿಣಾಮವಾಗಿ ಇಂಡೋ- ಟಿಬೆಟ್‌ ಗಡಿ ರಸ್ತೆ ಬ್ಲಾಕ್‌ ಆಗಿದ್ದು, ಸುಮಾರು 12ರಷ್ಟು ಗಡಿ ಗ್ರಾಮಗಳೊಂದಿಗಿನ ಸಂಪರ್ಕವೇ ಕಡಿತಗೊಂಡಿದೆ.

ಅಮರನಾಥ ಯಾತ್ರೆ ಪುನಾರಂಭ
ಜಮ್ಮು-ಶ್ರೀನಗದ ರಾಷ್ಟ್ರೀಯ ಹೆದ್ದಾರಿ ಮುಚ್ಚಿದ್ದರಿಂದ ಕಳೆದ 3 ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನಾರಂಭಗೊಂಡಿದೆ. ಭಾರೀ ಮಳೆಯಿಂದಾಗಿ ಹೆದ್ದಾರಿಯ ಹಲವು ಭಾಗಗಳು ಹಾನಿಗೀಡಾದ ಕಾರಣ ಈ ಮಾರ್ಗದಲ್ಲಿ ಯಾತ್ರಿಕರ ಪ್ರಯಾಣಕ್ಕೆ ಅವಕಾಶ ನಿರಾಕರಿಸಲಾಗಿತ್ತು. ರಸ್ತೆ ದುರಸ್ತಿಯಾದ ಹಿನ್ನೆಲೆ ಮಂಗಳವಾರ ಜಮ್ಮು ಬೇಸ್‌ ಕ್ಯಾಂಪ್‌ನಿಂದ ಯಾತ್ರಿಕರ ತಂಡ ಅಮರನಾಥದತ್ತ ಪ್ರಯಾಣ ಬೆಳೆಸಿದೆ.

ಉತ್ತರಕಾಶಿಯಲ್ಲಿ 4 ಯಾತ್ರಿಕರ ಸಾವು
ಉತ್ತರಾಖಂಡದ ಉತ್ತರಕಾಶಿಯಲ್ಲಿ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಗನಾನಿ ಸೇತುವೆ­ಯಲ್ಲಿ ಸಂಚರಿಸುತ್ತಿದ್ದ ಮೂರು ವಾಹನಗಳು ಭೂಕುಸಿತಕ್ಕೆ ಸಿಲುಕಿದ ಪರಿಣಾಮ ನಾಲ್ವರು ಯಾತ್ರಿಕರು ಮೃತಪಟ್ಟಿದ್ದಾರೆ. 7 ಮಂದಿ ಗಾಯಗೊಂಡಿದ್ದಾರೆ. ಸೋಮವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೂರು ವಾಹನಗಳಲ್ಲಿ ಒಟ್ಟಾರೆ 30 ಮಂದಿಯಿದ್ದರು. ಗುಡ್ಡ ಕುಸಿತದ ವೇಳೆ ದೊಡ್ಡ ಬಂಡೆಕಲ್ಲುಗಳು ಈ ವಾಹನಗಳ ಮೇಲೆ ಉರುಳಿ ಬಿದ್ದು ಅವಘಡ ಸಂಭವಿಸಿದೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಿಂದ ಒಂದು ಅಂತಸ್ತಿನ ಮನೆ ಕುಸಿದು ಬಿದ್ದು, ವ್ಯಕ್ತಿಯೊಬ್ಬ ಮೃತಪಟ್ಟು, ಪತ್ನಿ ಮತ್ತು ಮಗ ಗಾಯಗೊಂಡಿದ್ದಾರೆ.

ರಾಜಸ್ಥಾನದಲ್ಲಿ 7 ಬಲಿ
ರಾಜಸ್ಥಾನದ 14 ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವ­ರಿ­ದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆಗಳು, ರೈಲ್ವೇ ಹಳಿಗಳು ಮುಳುಗಡೆಯಾಗಿವೆ. ರವಿವಾರ ರಾತ್ರಿಯಿಂದೀಚೆಗೆ ಒಟ್ಟು 7 ಮಂದಿ ಮಳೆ ಸಂಬಂಧಿ ಅವಘಡಗಳಿಗೆ ಬಲಿಯಾಗಿದ್ದಾರೆ. ಸಿರೋಹಿಯ ಮೌಂಟ್‌ ಅಬುವಿನಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ ಅತ್ಯಧಿಕ ಅಂದರೆ 231 ಮಿ.ಮೀ. ಮಳೆ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next