Advertisement
ಇದೇ ಮೊದಲ ಸಲ ದೇಶದಲ್ಲಿ ಎಡ ಮತ್ತು ಬಲ ಸಿದ್ಧಾಂತಗಳು ನೇರವಾಗಿ ಮುಖಾಮುಖೀಯಾಗಿದ್ದವು. ಈ ಹೋರಾಟದಲ್ಲಿ ಬಲ ಸಿದ್ಧಾಂತಕ್ಕೆ ದಕ್ಕಿದ ಗೆಲುವು ಭವಿಷ್ಯದ ರಾಜಕೀಯದ ದಿಕ್ಸೂಚಿ ಎನ್ನಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಸಿಪಿಎಂನ 30 ವರ್ಷಗಳ ಸತತ ಆಳ್ವಿಕೆಯನ್ನು ಕೊನೆಗೊಳಿಸಿದ ಮಾದರಿಯಲ್ಲೇ ಬಿಜೆಪಿ ತ್ರಿಪುರದಲ್ಲಿ ಮಾಣಿಕ್ ಸರ್ಕಾರ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಿದೆ ಎಂಬ ಹೋಲಿಕೆಯನ್ನು ರಾಜಕೀಯ ವಿಶ್ಲೇಷಕರು ಮಾಡುತ್ತಿದ್ದಾರೆ. ಐದು ವರ್ಷದ ಹಿಂದೆ ಸ್ಪರ್ಧಿಸಿದ 50 ಸ್ಥಾನಗಳ ಪೈಕಿ 49ರಲ್ಲಿ ಠೇವಣಿ ಕಳೆದುಕೊಂಡಿದ್ದ ಪಕ್ಷವೊಂದು ಎಲ್ಲ ನಿರೀಕ್ಷೆಗಳನ್ನು ಬುಡಮೇಲು ಮಾಡಿ ಅಧಿಕಾರಕ್ಕೇರಿದ್ದು ನಿಜವಾಗಿಯೂ ಪಲ್ಟಿಯೇ ಸರಿ (ಚಲೋ ಪಲ್ಟಾಯಿ ಎನ್ನುವುದು ತ್ರಿಪುರದಲ್ಲಿ ಬಿಜೆಪಿಯ ಘೋಷಾವಾಕ್ಯವಾಗಿತ್ತು).
Related Articles
Advertisement
ಯುವ ಜನತೆಯ ಆಶೋತ್ತರಗಳಿಗೆ ಪ್ರತಿಸ್ಪಂದಿಸುವ ಗುಣಗಳು ಸಿಪಿಎಂ ಮತ್ತು ಕಾಂಗ್ರೆಸ್‌ನಲ್ಲಿ ಇಲ್ಲದಿರುವುದೇ ಆ ಪಕ್ಷಗಳ ಹಿನ್ನಡೆಗೆ ಕಾರಣ. 25 ವರ್ಷ ಎನ್ನುವುದು ಯಾವುದೇ ಪಕ್ಷಕ್ಕಾದರೂ ಸುದೀರ್ಘ ಅವಧಿ. ಪುಟ್ಟದೊಂದು ರಾಜ್ಯವನ್ನು ಈ ಅವಧಿಯಲ್ಲಿ ಮಾದರಿಯಾಗಿ ಕಟ್ಟಿ ನಿಲ್ಲಿಸಬಹುದಿತ್ತು. ಆದರೆ ಮಾಣಿಕ್ ಸರ್ಕಾರ್ ತನ್ನ ಇಮೇಜ್ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರೆ ಹೊರತು ರಾಜ್ಯವನ್ನು ಅಭಿವೃದ್ಧಿಪಡಿಸುವ ಗೋಜಿಗೆ ಹೋಗಲಿಲ್ಲ ಎಂಬ ಅಸಮಾಧಾನ ಜನರಿಗಿತ್ತು. ಈ ಅಸಮಾಧಾನವನ್ನು ಮತಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗಿದೆ.
ಸದ್ಯ ಎರಡು ರಾಜ್ಯಗಳಲ್ಲಿ ಸರಕಾರ ರಚಿಸಲು ಬಿಜೆಪಿಗೇನೂ ಸಮಸ್ಯೆಯಿಲ್ಲ. ಮೇಘಾಲಯದಲ್ಲೂ ಸರಕಾರ ರಚನೆಗೆ ತೀವ್ರ ಪ್ರಯತ್ನ ನಡೆಸುತ್ತಿದೆ. ಈ ಮೂಲಕ 22 ರಾಜ್ಯಗಳಲ್ಲಿ ಸರಕಾರ ಹೊಂದಿರುವ ಐತಿಹಾಸಿಕ ದಾಖಲೆ ಮಾಡಲು ತುದಿಗಾಲಲ್ಲಿ ನಿಂತಿದೆ. ಆದರೆ ಇಷ್ಟಕ್ಕೆ ಪಕ್ಷ ತೃಪ್ತಿ ಪಟ್ಟುಕೊಳ್ಳುವಂತಿಲ್ಲ. ವರ್ಷಾಂತ್ಯದಲ್ಲಿ ಮಿಜೋರಾಂ ರಾಜ್ಯದ ಚುನಾವಣೆ ನಡೆಯಲಿದ್ದು, ಗೆಲುವಿನ ನಾಗಾಲೋಟವನ್ನು ಮುಂದುವರಿಸುವ ಅಗತ್ಯ ಬಿಜೆಪಿಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಿರಂತರವಾಗಿ ಗೆಲ್ಲುತ್ತಾ ಹೋಗುವುದೇ ಬಿಜೆಪಿಗೆ ಟೀಕಾಕಾರರ ಬಾಯಿ ಮುಚ್ಚಿಸಲು ಇರುವ ಏಕೈಕ ದಾರಿ.