Advertisement

ಉತ್ತರ, ಮಧ್ಯ ಕರ್ನಾಟಕ ಕಾಂಗ್ರೆಸ್‌ ಮುಕ್ತ

12:21 PM May 26, 2019 | Team Udayavani |

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಇತಿಹಾಸ ದಲ್ಲೇ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಕಾಂಗ್ರೆಸ್‌ ಮುಕ್ತವಾಗಿದೆ. ಘಟಾನುಘಟಿ ನಾಯಕರು ಸೋಲು ಕಂಡಿದ್ದು, ಮೊದಲ ಬಾರಿಗೆ ಬಿಜೆಪಿ ಈ ಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಾಬಲ್ಯ ಮೆರೆದಿದೆ.

Advertisement

ಹೈದರಾಬಾದ್‌-ಕರ್ನಾಟಕ ಹಾಗೂ ಮುಂಬಯಿ ಕರ್ನಾಟಕ ಪ್ರದೇಶ ವ್ಯಾಪ್ತಿಯ 12 ಲೋಕಸಭಾ ಕ್ಷೇತ್ರ ಮತ್ತು ಉಡುಪಿ- ಚಿಕ್ಕಮಗಳೂರು ಸೇರಿದಂತೆ ಮಧ್ಯ ಕರ್ನಾಟಕ ವ್ಯಾಪ್ತಿಯ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಕಮಲ ಅರಳಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕೂಟ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಲಾಗಿಲ್ಲ. ಕಾಂಗ್ರೆಸ್‌ಗೆ ಭದ್ರ ಕೋಟೆ ಎಂದೇ ಪರಿಗಣಿಸಲ್ಪಟ್ಟ ಹೈದರಾಬಾದ್‌ ಕರ್ನಾ ಟಕದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ದಯನೀಯ ಸ್ಥಿತಿಗೆ ತಲುಪಿದ್ದು, ಬಿಜೆಪಿ ನಿರೀಕ್ಷೆಗೂ ಮೀರಿದ ಗೆಲುವಿನ ನಗೆ ಬೀರಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ತಮ್ಮ ರಾಜಕೀಯ ಜೀವನದಲ್ಲೇ ಮೊದಲ ಬಾರಿಗೆ ಸೋಲು ಕಂಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಅನೇಕ ನಾಯಕರು ಸೋತಿದ್ದರೆ; ಬಿಜೆಪಿ ಯಿಂದ ಕೇಂದ್ರ ಸಚಿವ ರಾದ ಅನಂತಕುಮಾರ ಹೆಗಡೆ, ರಮೇಶ ಜಿಗ ಜಿಣಗಿ ಸೇರಿದಂತೆ ಅನೇಕ ನಾಯಕರು ದಾಖಲೆ ಅಂತರದ ಗೆಲುವು ಕಂಡಿದ್ದಾರೆ. ಬಿಜೆ ಪಿಯ ಕೆಲವರು ಹ್ಯಾಟ್ರಿಕ್‌, ಸತತ ನಾಲ್ಕನೇ ಗೆಲುವು ಗಳಿಸಿದ್ದಾರೆ. ಕೆಲವರು ಎರಡನೇ ಬಾರಿ, ಮೊದಲ ಬಾರಿ ಲೋಕಸಭೆ ಪ್ರವೇಶದ ಸಾಧನೆ ತೋರಿದ್ದಾರೆ.

ಬಿಜೆಪಿ ಜಯಭೇರಿ: ಮುಂಬಯಿ ಕರ್ನಾಟ ಕದ ಚಿಕ್ಕೋಡಿ, ಬೆಳಗಾವಿ, ಧಾರವಾಡ, ಹಾವೇರಿ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ; ಹೈದರಾಬಾದ್‌ ಕರ್ನಾಟಕದ ಬೀದರ, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಮಧ್ಯಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಲೋಕಸಭೆ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ ಮೇಲೇಳಲು ಆಗದಂತಹ ದೊಡ್ಡ ಪೆಟ್ಟು ನೀಡಿದೆ. ರಾಜ್ಯದ 28 ಲೋಕ ಸಭೆ ಕ್ಷೇತ್ರಗಳಲ್ಲಿ ಅರ್ಧ ಕಿಂತ ಹೆಚ್ಚು ಲೋಕಸಭೆ ಕ್ಷೇತ್ರ ಇರುವುದು ಈ ಭಾಗದಲ್ಲಿಯೇ. 2014 ರಲ್ಲಿ ನರೇಂದ್ರ ಮೋದಿ ಪ್ರಬಲ ಅಲೆಯ ನಡು ವೆಯೂ ಉತ್ತರ ಕರ್ನಾ ಟಕದಲ್ಲಿ ಕಾಂಗ್ರೆಸ್‌ ತನ್ನ ಅಷ್ಟು ಇಷ್ಟು ಅಸ್ತಿತ್ವ ಉಳಿಸಿಕೊಂಡಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಶೂನ್ಯ ಸಾಧನೆ ತೋರಿದೆ.

2014ರ ಚುನಾವಣೆಯಲ್ಲಿ ಮುಂಬಯಿ ಕರ್ನಾಟಕದ ಚಿಕ್ಕೋಡಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಹೈದರಾಬಾದ್‌ ಕರ್ನಾಟಕದಲ್ಲಿ ಕಲಬುರಗಿ, ರಾಯಚೂರು ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತಾದರೂ, 2018ರಲ್ಲಿ ಸಂಸದ ಶ್ರೀರಾಮುಲು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅದೇ ವರ್ಷ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಭರ್ಜರಿ ಗೆಲುವಿನೊಂದಿಗೆ ಹೈ-ಕ ದಲ್ಲಿ ಕಾಂಗ್ರೆಸ್‌ ತನ್ನ ಲೋಕಸಭೆ ಸ್ಥಾನಗಳನ್ನು ಮೂರಕ್ಕೆ ಹೆಚ್ಚಿಸಿಕೊಂಡಿತ್ತು.

Advertisement

ಕಾಂಗ್ರೆಸ್‌ಗೆ ದಯನೀಯ ಸ್ಥಿತಿ: ತುರ್ತು ಪರಿಸ್ಥಿತಿಯ ಕರಾಳ ದಿನಗಳ ನಂತರ 1977 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ದೇಶದ ವಿವಿಧೆಡೆ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಹೆಚ್ಚಿನ ಹಿನ್ನಡೆಯಾಗಿ, ಜನತಾ ಪಕ್ಷ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾ ಗಲೂ, ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ತೋರಿತ್ತು. ಆದರೆ, ಈಗ ಇದೇ ಮೊದಲ ಬಾರಿಗೆ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.

ಆರು ತಿಂಗಳ ಹಿಂದೆಯಷ್ಟೇ ನಡೆದಿದ್ದ ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿ ಸಿದ್ದ ಕಾಂಗ್ರೆಸ್‌, 2019ರ ಲೋಕಸಭೆ ಚುನಾವ ಣೆಯಲ್ಲಿ ಮಕಾಡೆ ಮಲಗಿದ್ದು, ಗಣಿನಾಡಲ್ಲಿ ಬಿಜೆಪಿ ಮತ್ತೆ ತನ್ನ ಪ್ರಾಬಲ್ಯ ಮೆರೆದಿದೆ. ಚಿಕ್ಕೋಡಿ, ರಾಯಚೂರು ಹಾಗೂ ಚಿತ್ರದುರ್ಗ ಲೋಕಸಭೆ ಕ್ಷೇತ್ರಗಳಲ್ಲಿ 2014ರಲ್ಲಿ ಮೋದಿ ಅಲೆಯ ನಡುವೆಯೂ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಈಗ ಈ ಮೂರು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಸಮ್ಮಿಶ್ರ ಸರಕಾರವಿದೆ, ಕಾಂಗ್ರೆಸ್‌-ಜೆಡಿ ಎಸ್‌ ಮತಗಳು ವಿಭಜನೆ ಆಗದೆ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು ಹೆಚ್ಚಿನ ರೀತಿಯಲ್ಲಿ ದೊರೆಯಲಿದೆ ಎಂದು ಎರಡೂ ಪಕ್ಷಗಳ ನಾಯಕರು ಬಿಂಬಿಸಿದ್ದರಾದರೂ ಮೋದಿ ಅಲೆ, ಮೈತ್ರಿ ಪಕ್ಷಗಳ ನಡುವಿನ ಅಪನಂಬಿಕೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಹೇಳ ಹೆಸರಿಲ್ಲದೆ ಮಾಡಿದೆ.

ಮೊದಲ ಸೋಲಿನ ಕಹಿ..
“ಸೋಲಿಲ್ಲದ ಸರದಾರ’ ಎಂದೇ ಬಿಂಬಿತರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಬಾರಿಗೆ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ. 9 ವಿಧಾನಸಭೆ ಚುನಾವಣೆ ಹಾಗೂ ಎರಡು ಲೋಕಸಭೆ ಚುನಾವಣೆಯಲ್ಲಿ ಸತತ ಗೆಲುವು ಕಂಡಿದ್ದರು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ನಂತರ ತಮ್ಮ ಗುರಮಿಟ್ಕಲ್‌ ಕ್ಷೇತ್ರ ಬದಲಿಸಿ ಚಿತ್ತಾಪುರ ವಿಧಾನಸಭೆ ಕ್ಷೇತ್ರಕ್ಕೆ ವಲಸೆ ಬಂದೂ ಗೆಲುವು ಸಾಧಿಸಿದ್ದು. ನಂತರ 2009ರಲ್ಲಿ ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. 2014ರ ಲೋಕ ಸಭೆ ಚುನಾ ವಣೆಯಲ್ಲೂ ಗೆಲುವು ಕಂಡಿದ್ದರು. ಈ ಬಾರಿಯ ಚುನಾವಣೆ ಖರ್ಗೆ ಪಾಲಿಗೆ ಕರಾಳ ಸ್ಥಿತಿ ರೂಪಿಸಿದ್ದು, ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಸೋಲು ಅನುಭವಿಸಿದ್ದಾರೆ. ಖಚಿತವಾಗಿ ಕೈ ಹಿಡಿಯಬಹುದಾದ ಕ್ಷೇತ್ರವೆಂದು ನಂಬಲಾಗಿದ್ದ ಕಲಬುರಗಿಯೂ ಕಾಂಗ್ರೆಸ್‌ಗೆ ಕೈ ಕೊಟ್ಟಿದೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next