Advertisement

ತುರ್ತು ಕಾಮಗಾರಿ ಕೈಗೊಳ್ಳಲು ಸರ್ಕಾರ ವಿಫಲ

09:03 PM May 21, 2021 | Team Udayavani |

ಭಟ್ಕಳ: ಕಳೆದ ಸುಮಾರು ಐದು ದಿನಗಳ ಹಿಂದೆ ಅಬ್ಬರಿಸಿದ ಚಂಡಮಾರುತದಿಂದ ಬಂದರ-ತಲಗೋಡ ರಸ್ತೆ ಕೊಚ್ಚಿಕೊಂಡು ಹೋಗಿ ಅಪಾಯದಂಚಿನಲ್ಲಿದ್ದರೂ ಸಹ ಇನ್ನೂ ತನಕ ತುರ್ತು ಕಾಮಗಾರಿಯನ್ನು ಕೈಗೊಳ್ಳಲು ಸರಕಾರ ವಿಫಲವಾಗಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡ ಮಂಕಾಳ ಎಸ್‌. ವೈದ್ಯ ಅವರು ದೂರಿದ್ದಾರೆ.

Advertisement

ಗುರುವಾರ ಸಂಜೆ ಇಲ್ಲಿನ ಮಾವಿನಕುರ್ವೆ ಬಂದರಿನಲ್ಲಿ ಚಂಡಮಾರುತದಿಂದ ಆದ ಹಾನಿಯನ್ನು ಪರಿಶೀಲಿಸಿದ ನಂತರ ಮಾತನಾಡಿದರು. ಚಂಡಮಾರುತದಿಂದ ರಸ್ತೆ ಹಾನಿಯಾಗಿ ಸುಮಾರು ಐದು ದಿನಗಳೇ ಕಳೆದು ಹೋಗಿದೆ. ತಕ್ಷಣ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಸರಕಾರ ಇನ್ನೂ ಮೀನಮೇಷ ಮಾಡುತ್ತಿರುವುದು ಸರಿಯಲ್ಲ.

ಕಾಮಗಾರಿಗೆ ತುರ್ತಾಗಿ ದೊಡ್ಡ ದೊಡ್ಡ ಕಲ್ಲುಗಳನ್ನು ಇಲ್ಲವೇ ಸಿಮೆಂಟ್‌ ಕಾಂಕ್ರೀಟನ್ನಾದರೂ ಬಳಸಬಹುದೇ ವಿನಃ ಇಂಥ ಸಂದರ್ಭದಲ್ಲಿ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸರಕಾರ ದೂಡಬಾರದು ಎಂದೂ ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ಕಡಲಕೊರೆತ ಪ್ರದೇಶಕ್ಕೆ ಹಾನಿ ವೀಕ್ಷಿಸಲು ಇಡೀ ಸರಕಾರವೇ ಬಂದು ಹೋಗಿದ್ದು 24 ಗಂಟೆಗಳಲ್ಲಿ ಹಾನೀಗೀಡಾದ ಪ್ರದೇಶದಲ್ಲಿ ಅಗತ್ಯ ಕಾಮಗಾರಿ ನಡೆಸಬೇಕಾಗಿರುವುದು ಸರಕಾರದ ಜವಾಬ್ದಾರಿಯ ನಡೆಯಾಗಿತ್ತು. ಆದರೆ ಇನ್ನೂ ಕಾಮಗಾರಿ ಮಾಡದೇ ಇರುವುದು ಕಡಲತೀರವಾಸಿಗಳು ಸಂಕಷ್ಟದಲ್ಲಿರುವಂತೆ ಮಾಡಿದೆ. ಎಷ್ಟೋ ಜನರು ಮನೆಗಳಿಗೆ ನೀರು ನುಗ್ಗುತ್ತವೆಂಬ ಭೀತಿಯಲ್ಲೇ ಇನ್ನೂ ಕೂಡಾ ಕಾಲ ಕಳೆಯುತ್ತಿದ್ದಾರೆ.

ಅತಿವೃಷ್ಟಿ ಹಾನಿ ಉಂಟಾದ ಪ್ರದೇಶದಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಜಿಲ್ಲಾ ಧಿಕಾರಿಯವರ ಖಾತೆಯಲ್ಲಿ ಸಾಕಷ್ಟು ಹಣವಿರುತ್ತದೆ. ಈ ಹಣವನ್ನು ಬಳಸಿಕೊಂಡು ತುರ್ತು ಕಾಮಗಾರಿಯನ್ನು ಹಾನಿಯಾದ ಮರುದಿನವೇ ಆರಂಭಿಸಬೇಕಿತ್ತು. ಆದರೆ ಆ ಕೆಲಸ ಮಾಡುವಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದ ಅವರು ತಕ್ಷಣ ಜನರ ಸಮಸ್ಯೆ ಬಗೆಹರಿಯಬೇಕು. ಸರಕಾರ ಸ್ಪಂದಿಸಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದರು.

ಈ ಪ್ರದೇಶದಲ್ಲಿ ಮತ್ತೇನಾದರೂ ಹಾನಿ ಉಂಟಾದರೆ ಇದಕ್ಕೆ ಜನಪ್ರತಿನಿ ಧಿಗಳು, ಸರಕಾರವೇ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಜನರಿಗೆ ತೊಂದರೆ ಆಗುವುದನ್ನು ಸರಕಾರ ಕೂಡಲೇ ತಪ್ಪಿಸಿ ಪರಿಹಾರಕ್ಕೆ ಮುಂದಾಗಬೇಕು ಎಂದರು.

Advertisement

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ ನಾಯ್ಕ, ಜಿಪಂ ಮಾಜಿ ಸದಸ್ಯ ಅಬ್ದುರ್‌ ರಹೀಂ ಶೇಖ್‌, ಮೀನುಗಾರರ ಮುಖಂಡರಾದ ವಸಂತ ಖಾರ್ವಿ, ರಮೇಶ ಖಾರ್ವಿ, ಶ್ರೀನಿವಾಸ ಖಾರ್ವಿ, ರಾಜೇಂದ್ರ ಖಾರ್ವಿ ಇದ್ದರು.

ಮೀನುಗಾರರ ಕಡೆಗಣನೆ ಸರಿಯಲ್ಲ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಘೋಷಿಸಿದ ಲಾಕಡೌನ್‌ ಪ್ಯಾಕೇಜ್‌ ಸಮಂಜಸವಾಗಿಲ್ಲ. ಸರಕಾರ ಪರಿಹಾರದ ಘೋಷಣೆ ವೇಳೆ ಮೀನುಗಾರರನ್ನು ಕಡೆಗಣಿಸಿರುವುದು ಸರಿಯಲ್ಲ. 2020ರಲ್ಲಿ ಘೋಷಿಸಿದ ಪರಿಹಾರದ ಮೊತ್ತವೇ ಇನ್ನೂ ತನಕ ಅನೇಕರಿಗೆ ಪಡೆಯಲು ಸಾಧ್ಯವಾಗಿಲ್ಲ, ಮತ್ತೆ ಘೋಷಣೆ ಮಾಡಿದ್ದೂ ಸಹ ಸರಳೀಕರಣ ಮಾಡದಿದ್ದರೆ ಕನಿಷ್ಟ ತಲುಪಬೇಕಾದವರಿಗೂ ತಲುಪುದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next