ಕಾರವಾರ: ಜಿಲ್ಲೆಯ ಯಲ್ಲಾಪುರ, ಮುಂಡಗೋಡ, ಶಿರಸಿ, ಸಿದ್ದಾಪುರ ತಾಲೂಕುಗಳಲ್ಲಿ ಕೋವಿಡ್ ಹೆಚ್ಚಿದ ಪರಿಣಾಮ ಮೇ 21ರಿಂದ ಮೇ 24ರವರೆಗೆ ಸೀಲ್‌ಡೌನ್ ಮಾಡಿ ಜಿಲ್ಲಾಧಿ ಕಾರಿ ಆದೇಶ ಹೊರಡಿಸಿದ್ದಾರೆ. ನಾಳೆ ಬೆಳಿಗ್ಗೆ ಹತ್ತು ಗಂಟೆಯಿಂದಲೇ ಸೀಲ್ ಡೌನ್ ಪ್ರಾರಂಭವಾಗಲಿದೆ.
ಕೋವಿಡ್ ನಿಯಂತ್ರಣಕ್ಕೆ ಉಳಿದಿರುವ ದಾರಿ ಸೀಲ್ ಡೌನ್ ಮಾತ್ರವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರತ್ಯೇಕ ನಿಯಮಗಳನ್ನು ಹೇರಲಾಗಿದೆ. ಜನ ಅನಗತ್ಯವಾಗಿ ಮನೆಯಿಂದ ಹೊರ ಬರುವಂತಿಲ್ಲ. ಖಾಸಗಿ ವಾಹನ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಹಾಲು, ತರಕಾರಿ, ಹಣ್ಣು , ಮಾಂಸ ಮಾರಾಟಕ್ಕೆ ಅನುಮತಿ ಇದೆ. ಆಸ್ಪತ್ರೆಗೆ ತೆರಳಲು ಅನುಮತಿ ಇದೆ ಎಂದು ಜಿಲ್ಲಾಡಳಿತ ಹೇಳಿದೆ.
ಇನ್ನು ಮೇ 22ರಿಂದ ಮೇ 24ರವರೆಗೆ ಇಡೀ ಜಿಲ್ಲೆ ಸಂಪೂರ್ಣ ಲಾಕ್‌ಡೌನ್ ಆಗಲಿದೆ. ಮೇ 22ರ ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆ 6 ಗಂಟೆತನಕ ಅತ್ಯಂತ ಕಠಿಣ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಹೊರ ಜಿಲ್ಲೆಗಳಿಂದ ಸಹ ಅಗತ್ಯ ವಸ್ತುಗಳ ಸಾಗಾಟ ಹೊರತು ಪಡಿಸಿ, ಯಾವುದೇ ವಾಹನಗಳ ಓಡಾಟ ಇರುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಜಿಲ್ಲಾಧಿ ಕಾರಿ ಈ ಹೊಸ ಆದೇಶ ಹೊರಡಿಸಿದ್ದಾರೆ. ವಾರದ ಕೊನೆಯ ದಿನಗಳಾದ ಶನಿವಾರ, ಭಾನುವಾರ ಜನರು ಸಂತೆ ಹಾಗೂ ಅಗತ್ಯ ಸಾಮಗ್ರಿಕೊಳ್ಳಲು ಗುಂಪಾಗಿ ಸೇರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸೋಮವಾರ ಅಗತ್ಯ ವಸ್ತು ಖರೀದಿಗೆ ಜನ ಹೊರಗೆ ಬರದಂತೆ ತಡೆಯಲು ಕಠಿಣ ಕ್ರಮಕ್ಕೆ ಜಿಲ್ಲಾಧಿ ಕಾರಿ ಮುಂದಾಗಿದ್ದಾರೆ.
ಕೋವಿಡ್ ವೈರಸ್ ಚೈನ್ ಬ್ರೇಕ್ ಮಾಡುವುದು ಹಾಗೂ ಸಮುದಾಯಕ್ಕೆ ಇನ್ನಷ್ಟು ಕೋವಿಡ್ ಹರಡುವುದನ್ನು ತಡೆಯಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಜನರು ಸಾಮಾಜಿಕ ಅಂತರ ಕಾಪಾಡುವುದಿಲ್ಲ. ಮಾಸ್ಕ್ ಹಾಕಿಯೂ ಸಾಮಾಜಿಕ ಅಂತರ ಕಾಪಾಡದೇ ಹೋದದ್ದು, ಕೋವಿಡ್ ಹರಡಲು ಕಾರಣ ಎಂದು ಹೇಳಲಾಗುತ್ತಿದ್ದು, ಇದನ್ನು ತಡೆಯಲು ಜಿಲ್ಲಾಡಳಿತ ಇದೀಗ ಮುಂದಾಗಿದೆ.