Advertisement
ನೀವು ಅಂದು ಪರೀಕ್ಷೆ ಬರೆದು ಹಗುರವಾಗಿದ್ದರೆ ನಾನು ಮೊನ್ನೆ ಮೊನ್ನೆ ನಿಮ್ಮ ಉತ್ತರಗಳನ್ನು ಅಳೆದು ಹಗುರಾದೆ! ಎಸ್ಸೆಸ್ಸೆಲ್ಸಿಯಿಂದ ಪದವಿಯವರೆಗಿನ ಉತ್ತರಪತ್ರಿಕೆಗಳ ಮೌಲ್ಯಮಾಪನಕ್ಕೆ ಪ್ರತಿ ಬೇಸಿಗೆಯೂ ಸಾಕ್ಷಿಯಾಗುತ್ತದೆ. ನಿಮ್ಮ ಉತ್ತರಗಳನ್ನು ನೋಡುವುದು ಹತ್ತು ಹಲವು ಭಾವಗಳ ಮೊತ್ತ! ನಮ್ಮದೇ ಕಾಲೇಜಿನ, ನಮ್ಮದೇ ವಿದ್ಯಾರ್ಥಿಯ ಉತ್ತರಪತ್ರಿಕೆ ನಮ್ಮ ಕೈಯಲ್ಲಿದ್ದಾಗ ಅವನ ಹಣೆಬರಹವನ್ನು ಮೊದಲೇ ಕಂಡಿದ್ದ ನಮಗೆ; ನಮ್ಮ ಭಯವಿರುವ ಅವನಿಗೆ ಅಲ್ಲಿ ತರಲೆಗಳಿಗೆ ಅವಕಾಶವಿರುವುದಿಲ್ಲ. ಯಾರೋ ಅನಾಮಿಕನ ಕೈಸೇರುತ್ತದೆ ಅನ್ನುವ ಬರೆಯುವವನ ಭಾವ, ಪೂರ್ವಾಪರಗಳ ಪರಿಚಯವಿಲ್ಲದ ಬರೀ ಉತ್ತರಗಳನ್ನು ಹುಡುಕುತ್ತಾ ಕೂರುವ ನಮಗೆ ಅದೊಂದು ಹಲವು ರಸಗಳ ಸಂಗ್ರಹ. ಕೋಪ, ಬೇಸರ, ಹೆಮ್ಮೆ, ಹೊಟ್ಟೆಕಿಚ್ಚು, ಅಸಹನೆ, ಮರುಕ, ಖುಷಿ ಇವೆಲ್ಲವೂ ಒಂದು ಕಂತಿನ ಮೌಲ್ಯಮಾಪನ ಮುಗಿಯುವುದರೊಳಗೆ ನಮ್ಮನ್ನು ಮುತ್ತಿ ಹೋಗುತ್ತವೆ!
Related Articles
Advertisement
“ನನ್ನನ್ನು ಪಾಸ್ ಮಾಡಿ ಪ್ಲೀಸ್. ಇಲ್ಲ ಅಂದರೆ ನಮ್ಮಪ್ಪ ನನ್ನ ಮದುವೆ ಮಾಡ್ತಾರಂತೆ’ ಅಂತ ಯಾವುದೋ ಹೆಣ್ಣು ಮಗಳು ಬರೆದಿದ್ದಳು. “ನಮ್ಮಪ್ಪಂಗೆ ನಾನು ಒಬ್ಬನೇ ಮಗ. ಅದಕ್ಕಾದರೂ ಪಾಸ್ ಮಾಡಿ’ ಅನ್ನುವ ಬೇಡಿಕೆಗಳಿಗೇನು ಕಡಿಮೆಯಿಲ್ಲ. ಇತ್ತೀಚಿಗೆ ಹೊಸ ವರಸೆ ಶುರುವಾಗಿದೆ. ವಿದ್ಯಾರ್ಥಿಗಳು ತಮ್ಮ ಫೋನ್ ನಂಬರ್ ಬರೆದು “ಅಂಕ ನೀಡಿ ಹಣ ಪಡೆಯಿರಿ’ ಎಂಬ ಆಶ್ವಾಸನೆ ನೀಡಲು ಶುರುಮಾಡಿದ್ದಾರೆ. ಕೆಲವು ಉತ್ತರ ಪತ್ರಿಕೆಗಳಲ್ಲಿ ಗರಿ ಗರಿ ನೋಟುಗಳು ಬಂದಿರುತ್ತವೆ. ಇನ್ನು ಕೆಲವದರಲ್ಲಿ “ನಿಮ್ಮ ಮನೆ ಮಗನೆಂದು ಭಾವಿಸಿ’, “ನಿಮ್ಮದೇ ವಿದ್ಯಾರ್ಥಿಯೆಂದು ಭಾವಿಸಿ’ ಎಂದೂ ಬರೆಯುತ್ತಾರೆ.
ಮೌಲ್ಯಮಾಪನಕ್ಕೆ ಕುಳಿತ ಪರೀಕ್ಷಕರೆಲ್ಲ, ಹೇಗಾದರೂ ಮಾಡಿ, ಒಂದೆರಡು ಗ್ರೇಸ್ ಮಾರ್ಕ್ಸ್ ಕೊಟ್ಟು ವಿದ್ಯಾರ್ಥಿಯನ್ನೂ ಪಾಸ್ ಮಾಡಬೇಕು ಎಂದೇ ಹೆಚ್ಚಾಗಿ ಯೋಚಿಸುತ್ತಾರೆ. ಬೆಸ್ಟ್ ಅನ್ನಿಸುವ ಉತ್ತರ ಪತ್ರಿಕೆ ಸಿಕ್ಕಾಗ ಹೆಮ್ಮೆಯಾಗುತ್ತದೆ. ನನ್ನ ವಿದ್ಯಾರ್ಥಿಗಳೂ ಇದೇ ಥರ ಬರೆಯುತ್ತಿದ್ದರೆ… ಎಂದೆನಿಸುತ್ತದೆ. ಪ್ರತಿ ಪತ್ರಿಕೆ ಎದುರಾದಾಗಲೂ ಪರೀಕ್ಷಕನ ಮುಖಭಾವ ನಾನಾ ರೀತಿಯಲ್ಲಿ ಬದಲಾಗುತ್ತಾ ಹೋಗುತ್ತದೆ. 99 ಅಂಕ ಬಂದು ಒಂದೇ ಒಂದು ತಪ್ಪಾದಾಗ ಆ ಹುಡುಗನ ಬಗ್ಗೆ ಅದೆಷ್ಟು ಪಾಪ ಅನಿಸುತ್ತದೆ. ತಲೆಹರಟೆ ಪತ್ರಿಕೆಗಳು ಸಿಕ್ಕಾಗ ನಾಲ್ಕು ತದುಕಿ ಬುದ್ಧಿ ಹೇಳಬೇಕು ಅನಿಸುತ್ತದೆ.
ಮೂರು ಗಂಟೆಯ ಪರೀಕ್ಷೆಯ ಬರವಣಿಗೆಯಲ್ಲಿ ಒಂದು ಸಭ್ಯತೆ ರೂಢಿಸಿಕೊಳ್ಳಲಿಲ್ಲ ಅಂದಮೇಲೆ ಬದುಕಿನಲ್ಲಿ ಸಭ್ಯತೆ ಮೂಡುವುದೆಂತು!? ಉತ್ತರ ಬರೆದರೆ ಮಾತ್ರ ಶಿಕ್ಷಿತ ಅಂತ ಹೇಳುವುದಿಲ್ಲ, ಆದರೆ, ಓದಿಯೂ ಒಂದು ಸಭ್ಯತೆ ಇಲ್ಲವೆಂದ ಮೇಲೆ ಅವನು ಆಶಿಕ್ಷಿತನೇ ಸರಿ. ಉತ್ತರ ಗೊತ್ತಿಲ್ಲದೆ ತಪ್ಪಾಗಿ ಬರೆದರೆ, ಅಥವಾ ಬರೆಯದೇ ಇದ್ದರೆ ಒಪ್ಪಿಕೊಳ್ಳಬಹುದು ಆದರೆ ಯಾರಿಗೂ ಗೊತ್ತಾಗಲ್ಲ ಅಂತ ಅಸಭ್ಯತೆಗೆ ಇಳಿದರೆ ನಾಳೆ ಸಮಾಜದಲ್ಲಿ ಅವನ ವರ್ತನೆಗಳು ಹೇಗಿರಬಹುದು ಎಂಬುದನ್ನು ನೆನೆದರೆ ಭಯವಾಗುತ್ತದೆ.
ಸದಾಶಿವ್ ಸೊರಟೂರು