Advertisement

ದಕ್ಷಿಣದತ್ತ ಕ್ಷಿಪಣಿಯ ಮಳೆಗರೆದ ಉತ್ತರ ಕೊರಿಯಾ

01:27 PM Nov 03, 2022 | Shreeram Nayak |

ಸಿಯೋಲ್‌: ರಷ್ಯಾ-ಉಕ್ರೇನ್‌ ಯುದ್ಧದ ಘೋರ ಪರಿಣಾಮಗಳನ್ನು ಇಡೀ ಜಗತ್ತೇ ಎದುರಿಸುತ್ತಿರುವಂತೆಯೇ ಅತ್ತ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವೆ ಹೊಸ ಸಂಘರ್ಷದ ಬಿರುಗಾಳಿ ಎದ್ದಿದೆ.

Advertisement

ಬುಧವಾರ ಉ.ಕೊರಿಯಾವು ಬರೋಬ್ಬರಿ 23 ಕ್ಷಿಪಣಿಗಳನ್ನು ಸಮುದ್ರದ ಕಡೆಗೆ ಉಡಾವಣೆ ಮಾಡಿದೆ. ಈ ಪೈಕಿ ಒಂದು ಕ್ಷಿಪಣಿಯು ದಕ್ಷಿಣ ಕೊರಿಯಾದ ಜಲಗಡಿಗಿಂತ ಕೇವಲ 60 ಕಿ.ಮೀ. ದೂರದಲ್ಲಿ ಬಿದ್ದಿದೆ. ಈ ಅಪ್ರಚೋದಿತ ನಡೆಯಿಂದ ಕೆಂಡಾಮಂಡಲರಾಗಿರುವ ದ.ಕೊರಿಯಾ ಅಧ್ಯಕ್ಷ ಯೂನ್‌ ಸುಕ್‌-ಯಿಯೋಲ್‌ ಅವರು ಇದನ್ನು “ಗಡಿ ಅತಿಕ್ರಮಣ’ ಎಂದು ಹರಿಹಾಯ್ದಿದ್ದಾರೆ.

ಜತೆಗೆ, ಕ್ಷಿಪಣಿ ನುಗ್ಗಿ ಬರುತ್ತಿದ್ದಂತೆ, ದ.ಕೊರಿಯಾದ ಉಲ್ಲೆಯಂಗ್‌ ದ್ವೀಪದಲ್ಲಿ ವೈಮಾನಿಕ ದಾಳಿಯ ಸೈರನ್‌ಗಳನ್ನು ಮೊಳಗಿಸಲಾಗಿದೆ. ಜತೆಗೆ, ಅಲ್ಲಿನ ನಿವಾಸಿಗಳನ್ನು ಕೂಡಲೇ ಭೂಗತ ಆಶ್ರಯತಾಣಗಳಿಗೆ ಸ್ಥಳಾಂತರಿಸಲಾಗಿದೆ.

1945ರಲ್ಲಿ ಪರ್ಯಾಯದ್ವೀಪವು ವಿಭಜನೆಯಾದ ಬಳಿಕ ದಕ್ಷಿಣದ ಸಮುದ್ರದಲ್ಲಿ ಖಂಡಾಂತರ ಕ್ಷಿಪಣಿಯೊಂದು ಬಂದು ಬಿದ್ದಿದ್ದು ಹಾಗೂ ಒಂದೇ ದಿನ ಇಷ್ಟೊಂದು ಸಂಖ್ಯೆಯ ಕ್ಷಿಪಣಿಗಳನ್ನು ಉ.ಕೊರಿಯಾ ಉಡಾಯಿಸಿದ್ದು ಇದೇ ಮೊದಲು.

ಕಾರಣವೇನು?:
ಅಮೆರಿಕ ಮತ್ತು ದಕ್ಷಿಣ ಕೊರಿಯಾವು ಸೇನಾ ಕವಾಯತು ಆರಂಭಿಸಿದ್ದೇ ಉ.ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರ ಸಿಟ್ಟಿಗೆ ಕಾರಣ. ಈ ಸಮರಾಭ್ಯಾಸಕ್ಕೆ ಅಮೆರಿಕ ಮತ್ತು ದ.ಕೊರಿಯಾಗಳು “ಇತಿಹಾಸದಲ್ಲೇ ಅತ್ಯಂತ ಭೀಕರವಾದ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದ್ದ ಉ.ಕೊರಿಯಾ, ಅಣ್ವಸ್ತ್ರ ದಾಳಿಯ ಬೆದರಿಕೆಯೊಡ್ಡಿತ್ತು. ಅದರ ಬೆನ್ನಲ್ಲೇ ದಕ್ಷಿಣದತ್ತ ಕ್ಷಿಪಣಿಗಳ ಮಳೆಯನ್ನೇ ಸುರಿಸಲಾಗಿದೆ.

Advertisement

ಪ್ರತಿದಾಳಿ ನಡೆಸಿದ ದ.ಕೊರಿಯಾ:
ಉತ್ತರ ಕೊರಿಯಾದ ಈ ಪ್ರಚೋದನೆಗೆ ತತ್‌ಕ್ಷಣವೇ ದಿಟ್ಟ ಉತ್ತರ ನೀಡಲಾಗುತ್ತದೆ ಎಂದು ಘೋಷಿಸಿದ ದ.ಕೊರಿಯಾ, ಕೆಲವೇ ಗಂಟೆಗಳಲ್ಲಿ ಮೂರು ಕ್ಷಿಪಣಿಗಳನ್ನು ಉತ್ತರ ಕೊರಿಯಾದತ್ತ ಉಡಾಯಿಸಿದೆ. ಈ ಪೈಕಿ ನಿಖರ ದಾಳಿ ನಡೆಸಬಲ್ಲಂಥ ಹಾಗೂ 360ಕೆ.ಜಿ. ಸಿಡಿತಲೆಗಳನ್ನು ಹೊತ್ತು 270 ಕಿ.ಮೀ.ವರೆಗೆ ಸಾಗಬಲ್ಲಂಥ ಅಮೆರಿಕದ ಮೂಲದ “ಸನ್ನದ್ಧ ಸ್ಥಿತಿಯಲ್ಲಿದ್ದ’ ಕ್ಷಿಪಣಿ ಕೂಡ ಒಂದು.

Advertisement

Udayavani is now on Telegram. Click here to join our channel and stay updated with the latest news.

Next