Advertisement

ಶಿಂಗಾಣಿ: ಉಪಯೋಗಕ್ಕಿಲ್ಲದ ಸೇತುವೆ

12:12 AM Jul 30, 2017 | Team Udayavani |

ನಗರ: ಸೇತುವೆ ಜನಸಂಪರ್ಕಕ್ಕೆ ಪೂರಕ ಆಗಿರಬೇಕು. ರಸ್ತೆಯನ್ನು ಬಿಟ್ಟು ಗುಡ್ಡೆಗೆ ಸಂಪರ್ಕ ಕಲ್ಪಿಸುವಂತೆ ಸೇತುವೆ ಕಟ್ಟಿರುವ ಘಟನೆ ನಗರಸಭೆ ವ್ಯಾಪ್ತಿಯ ಶಿಂಗಾಣಿಯಲ್ಲಿ ನಡೆದಿದೆ. ದಿನಂಪ್ರತಿ ನೂರಾರು ಜನರು ಸಂಚರಿಸುವ ರಸ್ತೆಯಿದು. ಹಲವು ವಿದ್ಯಾರ್ಥಿಗಳು ಶಾಲಾ – ಕಾಲೇಜಿಗೆ ಹೋಗುವ ಏಕೈಕ ಮಾರ್ಗವಿದು. ನೂರಾರು ಕುಟುಂಬಗಳು ಶಿಂಗಾಣಿ, ಕುಡಿಪ್ಪಾಡಿಯಲ್ಲಿ ವಾಸವಾಗಿದ್ದು, ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಇದು ಗ್ರಾಮೀಣ ಭಾಗವಂತು ಅಲ್ಲವೇ ಅಲ್ಲ. ಮಾಣಿ-ಮೈಸೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದೆ. ನಗರ ಪ್ರದೇಶದಲ್ಲೇ ಇಂತಹ ರಸ್ತೆ, ಸೇತುವೆ, ಅವ್ಯವಸ್ಥೆ ಇರುವುದು ವಿಪರ್ಯಾಸ.

Advertisement

ತುಂಬಿ ಹರಿಯುವ ತೋಡು
ಮಂಜಲ್ಪಡು ಶಿಂಗಾಣಿ ನಡುವೆ ಹರಿಯುವ ತೋಡು ಮಳೆಗಾಲದಲ್ಲಿ ಪೂರ್ತಿ ಸಂಪರ್ಕವನ್ನೇ ಕಡಿತಗೊಳಿಸುತ್ತದೆ. ತುಂಬಿ ಹರಿಯುವ ತೋಡಿಗೆ ಇಳಿದು ರಸ್ತೆ ಸಂಚಾರ ಸಾಧ್ಯವಿಲ್ಲ. ಈ ಹೊತ್ತಲ್ಲಿ ಕಾಲು ದಾರಿ ಮಾತ್ರ ತೆರೆದಿರುತ್ತದೆ. ಈ ಹಿನ್ನೆಲೆಯಲ್ಲಿ ಊರಿಗೊಂದು ಸೇತುವೆ ನಿರ್ಮಿಸಿಕೊಡಬೇಕೆಂದು ನಗರಸಭೆಯನ್ನು ಒತ್ತಾಯಿಸಲಾಯಿತು.

ಮನವಿಗೆ ಸ್ಪಂದಿಸಿದ ನಗರಸಭೆ ಸುಮಾರು 10 ಲಕ್ಷ ರೂ.ಗಳನ್ನು ಮಂಜೂರು ಮಾಡಿತು. ಆದ್ದರಿಂದ ಸಹಜವಾಗಿಯೇ ಈ ಭಾಗದ ಜನ ಹರ್ಷಪಟ್ಟರು. ಆದರೆ ಖುಷಿ ತುಂಬಾ ದಿನ ಉಳಿಯಲೇ ಇಲ್ಲ. ಕಾರಣ ರಸ್ತೆಗೆ ಬೇಕಾಗಿರುವ ಕಡೆ ಸೇತುವೆ ನಿರ್ಮಿಸಲೇ ಇಲ್ಲ. ಅಂದರೆ ರಸ್ತೆಯ ಬದಿಗಿರುವ ಗುಡ್ಡಕ್ಕೆ ಒತ್ತಿಕೊಂಡಂತೆ ಸೇತುವೆ ನಿರ್ಮಿಸಲಾಯಿತು. ಇದೇನಾಗಿ ಹೋಯಿತು ಎಂದು ಜನ ನೋಡುತ್ತಿದ್ದಂತೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬಿಡಲಾಯಿತು. ಈ ರಸ್ತೆ ತೀರಾ ಹದಗೆಟ್ಟು ಹೋಗಿದೆ. ಅನುದಾನವಿದ್ದು ಸಮರ್ಪಕ ವ್ಯವಸ್ಥೆ ಮಾಡಲಾಗದ್ದು, ಆಡಳಿತದ ವೈಫಲ್ಯ. ಶಿಂಗಾಣಿ ಭಾಗದ ಜನರು ದ್ವಿಚಕ್ರ ವಾಹನದಲ್ಲಿ ತೋಡು ದಾಟಿ ಹೇಗೋ ಕಷ್ಟಪಟ್ಟು ಹೋಗುತ್ತಾರೆ. ಚತುಶ್ಚಕ್ರ ವಾಹನಗಳು ಈ ದಾರಿಯಿಂದ ಹೋಗುವಂತೆಯೇ ಇಲ್ಲ.

ಗುಡ್ಡಕ್ಕೆ ಸೇತುವೆ?
ರಸ್ತೆಗಿಲ್ಲದ ಸೇತುವೆ, ಗುಡ್ಡಕ್ಕೇಕೆ ಎಂದು ಪ್ರಶ್ನಿಸಿದರೆ, ಗುಡ್ಡದ ಜಾಗವನ್ನು ಭೂಸ್ವಾಧೀನ ಮಾಡುವ ಮಾತು ಕೇಳಿ ಬರುತ್ತಿದೆ. ಗುಡ್ಡದ ಜಾಗ ತೋಟಗಾರಿಕಾ ಇಲಾಖೆ ಹಾಗೂ ಖಾಸಗಿ ವ್ಯಕ್ತಿಗೆ ಸೇರಿದೆ. ಈ ಜಾಗವನ್ನು ರಸ್ತೆ ಗಾಗಿ ಬಿಟ್ಟುಕೊಡಲು ಅವರು ಸಿದ್ಧರಿಲ್ಲ. ಆದ್ದರಿಂದ ಸೇತುವೆ ಕಟ್ಟುವ ಮೊದಲು ಆಲೋಚಿಸಬೇಕಿತ್ತು. ಸೇತುವೆ ಕಟ್ಟಿದ ಬಳಿಕ ಭೂಸ್ವಾಧೀನದ ಮಾತನ್ನು ಆಡಿದರೆ, ಕೇಳುವವರಾರು. ಒಟ್ಟಿನಲ್ಲಿ ಇದು ಅನುದಾನ ದುರುಪಯೋಗಕ್ಕೆ ಒಂದು ಸ್ಪಷ್ಟ ಉದಾಹರಣೆ ಎಂದು ಸ್ಥಳೀಯರ ಆರೋಪ.

ಸೂಕ್ತ ಕಾಳಜಿ ವಹಿಸಿ
ಮಳೆಗಾಲದಲ್ಲಿ ನಡೆದಾಡಲು ಕಷ್ಟ ಪಡುವ ರಸ್ತೆಯಿದು. ವಿದ್ಯಾರ್ಥಿಗಳನ್ನು ಕಳುಹಿಸಲು ಭಯಪಡುತ್ತೇವೆ. ಸುಮಾರು 100ಕ್ಕೂ ಅಧಿಕ ಮನೆಗಳಿವೆ. ಕಾಲನಿಯೂ ಇದೆ. ಇದರ ಬಗ್ಗೆ ನಗರಸಭೆ ಸೂಕ್ತ ಕಾಳಜಿ ವಹಿಸಬೇಕಿತ್ತು. ಆದರೆ ಸೇತುವೆ ನೋಡಿದಾಗ ನಗರಸಭೆಗೆ ನಮ್ಮ ಮೇಲಿರುವ ಕಾಳಜಿ ತಿಳಿಯುತ್ತದೆ.
– ಅಶೋಕ್‌ ಶಿಂಗಾಣಿ, ಗ್ರಾಮಸ್ಥ

Advertisement

ಮಳೆ ನಿಂತ ಬಳಿಕ ಕಾಮಗಾರಿ
ಮಂಜಲ್ಪಡು ಶಿಂಗಾಣಿ ನಡುವಿನ ಸೇತುವೆಗೆ ರಸ್ತೆ ಸಂಪರ್ಕ ಕಲ್ಪಿಸಲು 8 ಲಕ್ಷ ರೂ. ಅನುದಾನ ನೀಡಲಾಗಿದೆ. ಈಗಾಗಲೇ ಟೆಂಡರ್‌ ಕರೆದಿದ್ದು. ಆಗಸ್ಟ್‌ ತಿಂಗಳು ಕೊನೆ. ತೋಟಗಾರಿಕಾ ಇಲಾಖೆ ಜಾಗ ಬಿಟ್ಟುಕೊಡುವುದಷ್ಟೇ ಬಾಕಿ. ಮಳೆ ನಿಂತ ಬಳಿಕ ಕಾಮಗಾರಿ ಆರಂಭ ಆಗುವ ಸಾಧ್ಯತೆ ಇದೆ.
– ಯಶೋದಾ, ವಾರ್ಡ್‌ ಸದಸ್ಯೆ

ಹಣ ದುರುಪಯೋಗ 
ತೋಡಿಗೆ ಯಾವ ರೀತಿ ಮೋರಿ ಅಥವಾ ಸೇತುವೆ ನಿರ್ಮಿಸಬೇಕೆಂಬುದೇ ತಿಳಿಯದ ಹಿಂದಿನ ಆಡಳಿತ ಮಾಡಿದ ಕೆಲಸವಿದು. ಸೇತುವೆಗಾಗಿ ಮೀಸಲಿಟ್ಟ 10 ಲಕ್ಷ ರೂ. ಹಣ ದುರುಪಯೋಗ ಆಗಿದೆ. ಸರಿಯಾಗಿ ಕೆಲಸ ಕಾರ್ಯ ನಡೆಯಲೇ ಇಲ್ಲ.
– ಜಯಂತಿ ಬಲ್ನಾಡು, ಅಧ್ಯಕ್ಷೆ, ನಗರಸಭೆ

– ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next