ಜಗಳೂರು: ಕಾಯಂ ಶಿಕ್ಷಕರನ್ನು ನೇಮಿಸುವಂತೆ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿ ಅಣಬೂರು ಗುರುಸಿದ್ದನಗೌಡ ನಗರದ ನಿವಾಸಿಗಳು ಮಕ್ಕಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಾಲೆಯ ವಿದ್ಯಾರ್ಥಿಗಳೊಂದಿಗೆ ಆಗಮಿಸಿದ ಪಾಲಕರು, ನಿವಾಸಿಗಳು ಕಚೇರಿಯ ಎದುರು ಧರಣಿ ಕುಳಿತು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರೇಶ್ ಮಾತನಾಡಿ, ಎಸ್‌ಎಸ್‌ಐ ಯೋಜನೆಯಡಿ ಪ್ರಾರಂಭಿಸಲಾಗಿರುವ ಶಾಲೆಗೆ ಶಿಕ್ಷಣ ಇಲಾಖೆ ಕಾಯಂ ಶಿಕ್ಷಕರನ್ನು ನೇಮಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು. ಮೇ 28 ರಿಂದ ಶಾಲೆ ಪ್ರಾರಂಭವಾಗಿದೆ. ಆದರೆ ಶಿಕ್ಷಕರಿಲ್ಲದೆ ಶಾಲೆಗೆ ಬೀಗ ಜಡಿಯಲಾಗಿದೆ. ಇಲ್ಲಿಯವರೆಗೂ ಯಾವೊಬ್ಬ ಶಿಕ್ಷಕರೂ ಬಂದಿಲ್ಲ. ಶಿಕ್ಷಕರನ್ನು ನೇಮಿಸುವಂತೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಧರಣಿ ನಿರತರ ಮನವಿ ಆಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಚಂದ್ ಮಾತನಾಡಿ, ಶಾಲೆಗೆ ಹನುಮಂತಪ್ಪ ಎಂಬ
ಶಿಕ್ಷಕರನ್ನು ನಿಯೋಜಿಸಲಾಗಿದೆ. ನಾಳೆಯಿಂದ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆಂದು ಪ್ರತಿಭಟನಾಕಾರರ
ಮನವೊಲಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ನಿರ್ದೇಶಕ ಕೆ. ಚಂದ್ರಪ್ಪ, ಮುಖಂಡರಾದ ಎಚ್.ಕೆ ಸಣ್ಣಕಾಟಪ್ಪ, ನಾಗರಾಜ್, ರೇಣುಕೇಶ್, ತಿಪ್ಪೇಸ್ವಾಮಿ ಇತರರು ಇದ್ದರು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 56 ಶಿಕ್ಷಕರ ಕೊರತೆ ಎದುರಾಗಿದೆ. ಸಮಸ್ಯೆ ಇದ್ದ ಕಡೆ ಖಾಸಗಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಶಿಕ್ಷಕರ ಕೊರತೆ ಎದುರಾಗಿರುವ ಶಾಲೆಗಳಿಗೆ ಕೂಡಲೇ ನಿಯೋಜನೆಯ ಮೂಲಕ ಹೊಂದಾಣಿಕೆ ಮಾಡಲಾಗುವುದು.
ಈಶ್ವರ್‌ಚಂದ್, ಕ್ಷೇತ್ರ ಶಿಕ್ಷಣಾಧಿಕಾರಿ