ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ಇದೀಗ ಅಡುಗೆ ಅನಿಲ ಎಲ್ ಪಿಜಿ ಸಿಲಿಂಡರ್ ಗಳ ದರ ಮತ್ತೆ ಇಳಿಕೆ ಮಾಡಲಾಗಿದ್ದು, ಪ್ರತಿ ಸಿಲಿಂಡರ್ ಬೆಲೆಯನ್ನು ಶುಕ್ರವಾರ 162.50 ರೂಪಾಯಿ ಇಳಿಕೆ ಮಾಡಿರುವುದಾಗಿ ತಿಳಿಸಿದೆ.
ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಸತತ ಮೂರನೇ ಬಾರಿಗೆ ಇಳಿಕೆ ಮಾಡಿದಂತಾಗಿದೆ. ವರ್ಷಕ್ಕೆ 14.2ಕೆಜಿಯ 12 ಸಿಲಿಂಡರ್ ಕೋಟಾ ಮುಗಿದ ಬಳಿಕವೂ ಮನೆ ಬಳಕೆಗೆ ಸಬ್ಸಿಡಿ ರಹಿತ ಸಿಲಿಂಡರ್ ಖರೀದಿಸಬಹುದಾಗಿದೆ ಎಂದು ವರದಿ ತಿಳಿಸಿದೆ.ದರ ಇಳಿಕೆ ನಂತರ ದೆಹಲಿಯಲ್ಲಿ 14.2ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ಇದೀಗ 581.50ರೂಪಾಯಿಗೆ ಸಿಗಲಿದೆ. ಇದಕ್ಕೂ ಮುನ್ನ ಪ್ರತಿ ಸಿಲಿಂಡರ್ ಬೆಲೆ 744 ರೂಪಾಯಿ ನಿಗದಿಯಾಗಿತ್ತು.
ಮುಂಬೈನಲ್ಲಿ ಪ್ರತಿ ಎಲ್ ಪಿಜಿ ಸಿಲಿಂಡರ್ ಗೆ 579 ರೂ. ಇದ್ದಿದ್ದು, ಈ ಮೊದಲು 714.50 ರೂಪಾಯಿ ಪಾವತಿಸಬೇಕಾಗಿತ್ತು. ಕೋಲ್ಕತಾದಲ್ಲಿ 584.50 ರೂಪಾಯಿ ಮತ್ತು ಚೆನ್ನೈನಲ್ಲಿ 569.50 ರೂಪಾಯಿಯಾಗಿರುವುದಾಗಿ ವರದಿ ತಿಳಿಸಿದೆ.
2019ರ ಜನವರಿ ತಿಂಗಳಿನಲ್ಲಿ ಸಬ್ಸಿಡಿ ರಹಿತಿ ಪ್ರತಿ ಸಿಲಿಂಡರ್ ಬೆಲೆಯನ್ನು 150.5 ರೂಪಾಯಿ ಇಳಿಕೆ ಮಾಡಲಾಗಿತ್ತು. ಈ ಹಿಂದೆಯೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಾದ ನಿಟ್ಟಿನಲ್ಲಿ ಸಿಲಿಂಡರ್ ಬೆಲೆಯನ್ನೂ ಕಡಿಮೆ ಮಾಡಲಾಗಿತ್ತು. ಮಾರ್ಚ್ ತಿಂಗಳಿನಲ್ಲಿ 53 ರೂಪಾಯಿ ಹಾಗೂ ಏಪ್ರಿಲ್ ನಲ್ಲಿ ಪ್ರತಿ ಸಿಲಿಂಡರ್ ಗೆ 61.50 ರೂಪಾಯಿ ಕಡಿತಗೊಳಿಸಲಾಗಿತ್ತು ಎಂದು ತೈಲ ಕಂಪನಿ ವಿವರಿಸಿದೆ.
ಅಡುಗೆ ಅನಿಲ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಸಿದಂತೆ, ವಾಣಿಜ್ಯ ಬಳಕೆಯ ಪ್ರತಿ ಸಿಲಿಂಡರ್ ಬೆಲೆಯನ್ನು 1,285 ರೂಪಾಯಿಯಿಂದ 1,029.50 ರೂಪಾಯಿಗೆ ಇಳಿಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.