ಮಳವಳ್ಳಿ: ರೈತರು ದೇಶದ ಬೆನ್ನೆಲುಬು. ನಮ್ಮನ್ನು ಆಳುತ್ತಿರುವ ಸರ್ಕಾರಗಳು ರೈತರ ಕಿಬ್ಬದಿಯ ಕೀಲು ಮುರಿದು ಜೀವನ್ಮರಣದ ನಡುವೆ ಹೋರಾಟ ಮಾಡುವಂತಹ ಪರಿಸ್ಥಿತಿ ತಂದೊಡ್ಡಿವೆ ಎಂದು ಪ್ರಾಂತ ರೈತ ಸಂಘಟನೆಯ ತಾಲೂಕು ಅಧ್ಯಕ್ಷ ಭರತ್‌ರಾಜ್ ವಿಷಾದಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಹಲಗೂರು ಹೋಬಳಿಯ ಮಟ್ಟದ ಹಾಗೂ ಗ್ರಾಮಮಟ್ಟದ ಸಮಿತಿ ರಚನಾ ಸಭೆಯಲ್ಲಿ ಮಾತಾನಾಡಿ, ವಿದೇಶಿ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿರುವ ಸರ್ಕಾರಗಳು, ಕಾರ್ಪೋರೆಟ್ ಕಂಪನಿಗಳಿಗೆ ನಿವೇಶನ, ಜಾಗ, ನೀರು, ವಿದ್ಯುತ್ ಹಾಗೂ ಕೋಟ್ಯಂತರ ರೂ. ಹಣ, ಸಹಾಯಧನ ಎಲ್ಲವನ್ನೂ ನೀಡುತ್ತಿದೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳ 3.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ, ದೇಶದ ರೈತರ ಗೋಳನ್ನು ಯಾರೂ ಕೇಳುತ್ತಿಲ್ಲ ಎಂದು ಹೇಳಿದರು.
ವೈಜ್ಞಾನಿಕ ಬೆಲೆ: ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ತಾನು ಹೂಡಿದ ಬಂಡವಾಳ, ವ್ಯಯಿಸಿದ ಖರ್ಚಿನ ಹಣ ವಾಪಸಾಗದೆ ರೈತ ಸಾಲಗಾರನಾಗುತ್ತಿದ್ದಾನೆ. ಕೊನೆಗೆ ಸಾಲ ತೀರಿಸಲಾಗದೆ ಮಾನಕ್ಕೆ ಅಂಜಿ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾನೆ. ದೇಶದಲ್ಲಿ 3.5 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ದಾರಿ ಹಿಡಿದಿರುವುದು ಶೋಚನೀಯ ಸಂಗತಿ. ಪ್ರಪಂಚದ ಬೇರೆಲ್ಲೂ ಇಂತಹ ಕೆಟ್ಟ ಪರಿಸ್ಥಿತಿ ಇಲ್ಲ ಎಂದರು.
ಬಿಲಿಯನರ್ಸ್ ಬಚಾವೋ : ಮೋದಿ ದೇಶದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಬೇಟಿ ಬಚಾವೋ, ಕಿಸಾನ್ ಬಚಾವೋ ಬದಲಿಗೆ ಬಿಲಿಯನರ್ಸ್ ಬಚಾವೋ ಆಗಿದೆ. ಅಂಬಾನಿ ಆಸ್ತಿ 2014ರಲ್ಲಿ 23 ಬಿಲಿಯನ್ ಡಾಲರ್ ಇತ್ತು. ನಾಲ್ಕೇ ವರ್ಷದಲ್ಲಿ 55 ಬಿಲಿಯನ್ ಡಾಲರ್ ಆಗಿದೆ. ತನ್ನ ಜೀವಿತಾವಧಿ ಯಲ್ಲಿ ಸಂಪಾದಿಸಿದ ಆಸ್ತಿಗಿಂತ ಹೆಚ್ಚು ಸಂಪತ್ತನ್ನು ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿದ್ದಾರೆ. ದಿನ ವೊಂದಕ್ಕೆ 122 ಕೋಟಿ ರೂ. ಆದಾಯ ಬಂದಿದೆ. ಅದೇ ರೀತಿ ಗೌತಮ್ ಆದಾನಿಯ ಆಸ್ತಿ ಮೋದಿ ಅವಧಿಯಲ್ಲಿ ಐದು ಸಾವಿರ ಪಟ್ಟು ಹೆಚ್ಚಳವಾಗಿದೆ ಎಂದರು.
ಸಂಘಟಿತರಾಗಿ: ರೈತರ ಮೂಲ ಸೌಕರ್ಯ, ಸೌಲಭ್ಯ, ಬೇಡಿಕೆಗಳನ್ನು ಪಡೆಯಲು ಪ್ರಾಂತ ರೈತ ಸಂಘದಡಿಯಲ್ಲಿ ಸಂಘಟಿತರಾಗಿ ತಮ್ಮ ಬೇಡಿಕೆ ಮತ್ತು ಹಕ್ಕುಗಳನ್ನು ಪಡೆಯಲು ಒಟ್ಟಾಗಿ ಶ್ರಮಿಸಬೇಕು ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಹೋಬಳಿಯ ಮಟ್ಟದ ಸಂಚಾಲಕ ಮಹದೇವು ಸಹ ಸಂಚಾಲಕರಾದ ಶಿವಣ್ಣ, ಬಸವರಾಜು, ಲೋಕೇಶ್, ಕಬ್ಟಾಳೇಗೌಡ, ಕುಮಾರ್ ದಾಳನ ಕಟ್ಟೆ ಆಯ್ಕೆಯಾದರು, ಉಪಾಧ್ಯಕ್ಷರಾದ ಶಂಕರ್, ಜಯಶಂಕರ್, ನಾಗರಾಜು, ರಾಜಣ್ಣ, ಮಹೇಶ್, ಲೋಕೇಶ್, ಉಮೇಶ್, ಮಹದೇವ, ಉಪಸ್ಥಿತರಿದ್ದರು.