Advertisement

ಪುನರುಜ್ಜೀವನಗೊಳ್ಳದ ಕೆರೆಗಳು; ಎದುರಾದ ಸಂಕಷ್ಟ !

12:59 AM Feb 15, 2020 | Sriram |

ಸುರತ್ಕಲ್‌: ಕೃಷ್ಣಾಪುರದ ಸ. ಶಾಲಾ ಮುಂಭಾಗದಲ್ಲಿದ್ದ ಸರಕಾರಿ ಬಾವಿ ಮಾಯವಾಗಿದೆ. ಶಾಲಾ ಸುತ್ತಮುತ್ತ ಇದ್ದ ಕೆರೆಗಳನ್ನು ಮುಚ್ಚಿ ವಸತಿ ಸಮುಚ್ಚಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆಧುನಿಕರಣ ಹಿನ್ನೆಲೆಯಲ್ಲಿ ಇಂತಹ ಅನೇಕ ಸರಕಾರಿ ಬಾವಿಗಳು, ಕೆರೆಗಳು ಮರೆಯಾಗುತ್ತಿವೆ, ಇನ್ನು ಕೆಲವು ಸರಿಯಾಗಿ ನಿರ್ವಹಣೆಯಿಲ್ಲದೇ ನೀರು ಮಲೀನವಾಗಿ ಕುಡಿಯಲು ಅಯೋಗ್ಯವಾಗಿವೆ.

Advertisement

ಸುರತ್ಕಲ್‌ ಸರಕಾರಿ ಬಾವಿಯೊಂದು ರೋಟರಿ ನೆರವಿನಿಂದ ಉಳಿದುಕೊಂಡಿದೆ. ಬೇಸಗೆ ಬರುತ್ತಿದ್ದಂತೆ ಪಾಲಿಕೆ ನೀರಿನ ರೇಷನಿಂಗ್‌ ಬಗ್ಗೆ ಮಾತನಾಡುತ್ತದೆ. ಆದರೆ ಜಲ ಮರುಪೂರಣ, ಕೆರೆ, ಬಾವಿಗಳ ಪುನರುಜ್ಜೀವಕ್ಕೆ ಆದ್ಯತೆ ನೀಡದಿರುವುದು ಮಾತ್ರ ಬೇಸರದ ಸಂಗತಿ.

ಸ್ಥಳೀಯಾಡಳಿತಗಳ ನಿರ್ಲಕ್ಷ್ಯ
ರಸ್ತೆ, ಕಟ್ಟಡ ಕಾಮಗಾರಿಗಳಿಗೆ ಅತೀವ ನೀರಿನ ಬಳಕೆಯಾಗುತ್ತಿದೆ. ಇದರಿಂದ ಭೂಮಿಯ ಅಂತರ್ಜಲದ ಮಟ್ಟವು 700 ಅಡಿಗಳಷ್ಟು ಕುಸಿದಿದೆ. ನಗರದ ಗುಜ್ಜರಕೆರೆ, ಕಾವೂರು ಕೆರೆಗೆ ಕೋಟಿ ರೂ. ಅನುದಾನ ಬಳಕೆಯಾದರೂ ಚರಂಡಿ ನೀರು, ತ್ಯಾಜ್ಯ ನೀರು ಸೇರುತ್ತಲೇ ಇದೆ. ಮಾದರಿ ರೀತಿಯಲ್ಲಿ ಅಂತರ್ಜಲ ಉಳಿಸುವಲ್ಲಿ ಗಂಭೀರ ಪ್ರಯತ್ನವಾಗಿಲ್ಲ. ಅರೆ ಬರೆ ಕಾಮಗಾರಿ ನಡೆಸಿ ಬಳಸಿದ ಹಣದ ಮೂಲ ಉದ್ದೇಶವೇ ವ್ಯರ್ಥವಾಗಿದೆ. ಆದ್ದರಿಂದ ಸ್ಥಳೀಯಾಡಳಿತ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಕ್ರಮಕೈಗೊಳ್ಳಬೇಕಿದೆ.

ವಿಶ್ವಬ್ಯಾಂಕ್‌ ನಿಧಿಯಲ್ಲಿ ಕಡಿತ!
ವಿಶ್ವಬ್ಯಾಂಕ್‌ ಕೂಡ ದೇಶದ ಆರ್ಥಿಕ ಸ್ಥಿತಿ ಪರಿಗಣಿಸಿ ನೀಡುವ ಅನುದಾನದಲ್ಲಿ ಕಡಿತ ಮಾಡಿದೆ. ಪ್ರಥಮ ಹಂತದಲ್ಲಿ ಶೇ. 30ರಷ್ಟು ಅನುದಾನ ಮಾತ್ರ ಬಿಡುಗಡೆ ಮಾಡುತ್ತಿದೆ. ಬೈಕಂಪಾಡಿಯ ಬಗ್ಗುಂಡಿ ಕೆರೆಗೆ ಬರಬೇಕಾಗಿದ್ದ ಅನುದಾನಕ್ಕೆ ತಡೆಯಾಗಿದೆ. ಕಳಿಸಿದ ವರದಿಯಲ್ಲಿ ಕಾಂಡ್ಲಾ ಗಿಡಗಳ ಸಂರಕ್ಷಣೆ, ಸಮುದ್ರ ಕೊರೆತ ತಡೆಗೆ ಕ್ರಮ, ಪರಿಸರ ಸೂಕ್ಷ್ಮಪ್ರದೇಶಗಳ ರಕ್ಷಣೆ ಸಹಿತ ಆರು ಯೋಜನೆಗೆ 90 ಕೋಟಿ ರೂ. ವೆಚ್ಚವಾಗಲಿದ್ದು, ಸುರತ್ಕಲ್‌, ತಣ್ಣೀರುಬಾವಿ ಸಹಿತ ವಿವಿಧೆಡೆ ಕಡಲು ಕೊರೆತ ತಡೆಗೆ ಈ ಯೋಜನೆಯಲ್ಲಿ ಅವಕಾಶವಿದೆ.

ಅವೈಜ್ಞಾನಿಕ ಕೃಷಿ ಪದ್ಧತಿ, ಒಂದೇ ಜಮೀನಿನಲ್ಲಿ ಹಲವಾರು ಕೊಳವೆ ಬಾವಿ ಕೊರೆಸುವುದು, ಅಗತ್ಯಕ್ಕಿಂತ ಹೆಚ್ಚು ನೀರನ್ನು ಕೃಷಿಗೆ ಬಳಸುವುದಲ್ಲದೆ ಹಣದಾಸೆಗೆ ಟ್ಯಾಂಕರ್‌ಗಳ ಮೂಲಕ ಮಾರಾಟ ಮಾಡುವುದರಿಂದ ಅಂತರ್ಜಲ ಸಮಸ್ಯೆಗೆ ಪರಿಹಾರ ಸಿಗದಂತಾಗಿದೆ. ಬೆಳೆಯುತ್ತಿರುವ ಜನಸಂಖ್ಯೆ, ವಿಸ್ತರಣೆಯಾಗುತ್ತಿರುವ ಬಡಾವಣೆಗಳು, ಬೇಸಗೆ ಸಂದರ್ಭ ನಿರ್ಮಾಣವಾಗುವ ನೀರಿನ ಬವಣೆ ಗಮನದಲ್ಲಿಟ್ಟುಕೊಂಡು ಕೆರೆ ಬಾವಿಗಳನ್ನು ಪುನರುಜ್ಜೀವನ ಮಾಡಬೇಕಿದೆ.

Advertisement

ನೀರಿನ ಮಿತಬಳಕೆ ಅಗತ್ಯ
ಕೃತಕ ಮರುಪೂರಣ ಕಾರ್ಯಕ್ರಮಗಳು ಮುಖ್ಯ, ಚೆಕ್‌ ಡ್ಯಾಂ, ಸೋಸು ಕೆರೆ, ಇಂಗು ಬಾವಿಗಳ ರಚನೆ ಮಾಡುವುದು ಸರಕಾರ ಮತ್ತು ಜನತೆಯ ಕರ್ತವ್ಯವೂ ಆಗಿದೆ. ನಾಗರಿಕರು ನೀರಿನ ಮಿತಬಳಕೆಯ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಹೊಸಬೆಟ್ಟು, ಕೃಷ್ಣಾಪುರ ಸಹಿತ ವಿವಿಧೆಡೆ ಸರಕಾರದ ಅನುದಾನ ದಿಂದ ಕೆರೆಗಳ ಪುನರುಜ್ಜೀವನ ನಡೆದಿದೆ. ಸರಕಾರವೂ ಕೆರೆ, ಬಾವಿಗಳ ಜಲ ಮೂಲ ಉಳಿಸಲು ಗಂಭೀರವಾಗಿ ಕ್ರಮ ಕೈಗೊಳ್ಳುತ್ತಿದೆ. ಬಡಾವಣೆಗಳಲ್ಲಿ, ಗ್ರಾಮಗಳಲ್ಲಿ ಬಳಕೆಯಾಗದ ಕೆರೆ, ಬಾವಿ ಗುರುತಿಸಿ ಪುನರುಜ್ಜೀವಕ್ಕೆ ಕ್ರಮ ಕೈಗೊಳ್ಳಲಾಗುವುದು.
 ಡಾಣ ಭರತ್‌ ಶೆಟ್ಟಿ ವೈ., ಶಾಸಕರು

6 ಯೋಜನೆಗೆ 90 ಕೋ. ರೂ. ನೆರವಿನ ನಿರೀಕ್ಷೆ
ಪ್ರಥಮ ಹಂತದಲ್ಲಿ ವಿಶ್ವ ಬ್ಯಾಂಕ್‌ನಿಂದ ಹೆಚ್ಚಿನ ಅಂತರ್ಜಲ ಸತ್ವ ಹೊಂದಿರುವ ಬಗ್ಗುಂಡಿ ಕೆರೆಗೆ ಅನುದಾನ ಕೈ ತಪ್ಪಿದೆ. ಇದರ ಅಭಿವೃದ್ಧಿಗೆ ಸಮಗ್ರ ವರದಿ ಕಳಿಸಲಾಗಿತ್ತು. ಈಗ ಕರಾವಳಿಯ ಸಮುದ್ರ ತೀರ ರಕ್ಷಣೆ, ಪರಿಸರ ಸೂಕ್ಷ್ಮ ಭೂ ಪ್ರದೇಶದ ರಕ್ಷಣೆ ಸಹಿತ ವಿಶ್ವ ಬ್ಯಾಂಕ್‌ನಿಂದ ಈ ಪ್ರದೇಶದ 6 ಯೋಜನೆಗೆ 90 ಕೋ.ರೂ. ಆರ್ಥಿಕ ನೆರವಿನ ಅಂಗೀಕಾರ ಸಿಗುವ ಸಾಧ್ಯತೆಯಿದೆ.
 - ಮಹೇಶ್‌ ಕುಮಾರ್‌, ಸಿಆರ್‌ಝಡ್‌ ಅಧಿಕಾರಿ

ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next