ಸಾಗರ: ಐತಿಹಾಸಿಕ ಮಹಾಗಣಪತಿ ದೇವರ ರಥೋತ್ಸವ ಎ. 5 ರಿಂದ ನಡೆಯಲಿದ್ದು, ಜಾತ್ರಾ ಸಂದರ್ಭದಲ್ಲಿ ಹಿಂದೂಯೇತರರ ಮಳೆಗೆಗಳಿಗೆ ಅವಕಾಶ ಇಲ್ಲ ಎಂಬ ಫ್ಲೆಕ್ಸ್ ಗಣಪತಿ ದೇವಸ್ಥಾನದ ಪ್ರದೇಶದಲ್ಲಿ ಗುರುವಾರ ಪ್ರತ್ಯಕ್ಷವಾಗಿದೆ.
ಮಹಾಗಣಪತಿ ದೇವಸ್ಥಾನದ ಹೆಸರಿನಲ್ಲಿ ಹಾಕಲಾಗಿರುವ ಫ್ಲೆಕ್ಸ್‌ನಲ್ಲಿ ಕಾನೂನಿನ ಅನ್ವಯ ವ್ಯಾಪಾರಮಳಿಗೆ ಹಾಕಲು ಅನ್ಯಧರ್ಮೀಯರಿಗೆ ಅವಕಾಶ ನಿರ್ಬಂಧವನ್ನು ಸಾರಿದೆ. ರಥೋತ್ಸವ ಸಂದರ್ಭದಲ್ಲಿ ಅಮ್ಯೂಸ್‌ಮೆಂಟ್ ಚಟುವಟಿಕೆಗಳಿಗಾಗಿ ಹರಾಜು ಪ್ರಕ್ರಿಯೆ ಸೋಮವಾರ ನಡೆದು, 14.50 ಲಕ್ಷ ರೂ.ಗೆ ಮಂಜುನಾಥ ಅಡಿಗ ಎಂಬುವವರಿಗೆ ಹರಾಜು ಆಗಿತ್ತು.
ವಿಶ್ವಹಿಂದೂ ಪರಿಷತ್ ವತಿಯಿಂದ ಈಗಾಗಲೇ ಎಸಿಯವರಿಗೆ ಮನವಿ ಸಲ್ಲಿಕೆಯಾಗಿದ್ದು, ಜಾತ್ರೆಯಲ್ಲಿ ಮಹಾಗಣಪತಿ ರಸ್ತೆಯ ಇಕ್ಕೆಲಗಳಲ್ಲಿ ಹಣ್ಣುಕಾಯಿ, ಆಟಿಕೆ, ತಿಂಡಿ-ತಿನಿಸು ಇತ್ಯಾದಿ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ದೇವಸ್ಥಾನವು ಮುಜರಾಯಿಗೆ ಸೇರಿದ್ದು, ಅನ್ಯಧರ್ಮಿಯರಿಗೆ ನೀಡಲು ಅವಕಾಶ ಇಲ್ಲ. ಪ್ರಸ್ತುತ ಮುಸ್ಲಿಂ ಧರ್ಮದವರು ಈ ದೇಶದ ಕಾನೂನು, ಸಂವಿಧಾನ, ಹಿಂದೂ ಸಂಸ್ಕೃತಿ, ಧಾರ್ಮಿಕ ಪದ್ಧತಿಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಧಾರ್ಮಿಕ ಪದ್ಧತಿಗಳ ವಿರೋಧಿಸುತ್ತಾ ಬಂದವರಿಗೆ ವ್ಯಾಪಾರ ಮಳಿಗೆ ನೀಡುವುದು ಸಮಂಜಸವಲ್ಲ.
ಈಗಾಗಲೇ ದಕ್ಷಿಣ ಕನ್ನಡ, ಶಿರಸಿ, ಶಿವಮೊಗ್ಗದಲ್ಲಿ ಜಾತ್ರೆಗಳ ವ್ಯಾಪಾರ ವಹಿವಾಟುಗಳನ್ನು ಹಿಂದೂಯೇತರರಿಗೆ ನೀಡದಿರಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ತಾವು ಮುಜರಾಯಿ ಕಾಯಿದೆ ಪ್ರಕಾರ ಹಿಂದುಯೇತರರಿಗೆ ಮುಜರಾಯಿ ದೇವಸ್ಥಾನಗಳ ಆಡಳಿತ, ವ್ಯಾಪಾರ ವಹಿವಾಟಿನಲ್ಲಿ ಅವಕಾಶ ನೀಡದಂತೆ ನಿರ್ಬಂಧ ವಿಧಿಸಬಹುದಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ತನ್ನ ವಿಶಿಷ್ಟ ಸಂಭ್ರಮಾಚರಣೆಯ ಹಿಂದಿನ ಕಾರಣ ಹೇಳಿದ ವಾನಿಂದು ಹಸರಂಗ
ಈ ನಡುವೆ ಹರಾಜಿನ ದಿನ ತಹಶೀಲ್ದಾರ್ ಮಲ್ಲೇಶಪ್ಪ ಪೂಜಾರ್ ಮಾತನಾಡಿ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದವರು ಹಿಂದುಗಳಿಗೆ ಹೊರತುಪಡಿಸಿ ಬೇರೆಯವರಿಗೆ ಅಂಗಡಿ ಮಳಿಗೆ ನೀಡದಿರುವ ಬಗ್ಗೆ ಮನವಿ ನೀಡಿದ್ದಾರೆ. ಆದರೆ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳ ಆವರಣದಲ್ಲಿ ಅಂಗಡಿ ಮಳಿಗೆ ಸಂಬಂಧ ನಿಯಮ ಅನ್ವಯವಾಗುತ್ತದೆ. ಆದರೆ ಗಣಪತಿ ದೇವಸ್ಥಾನದ ಹೊರಗಡೆ ಅಮ್ಯೂಸ್‌ಮೆಂಟ್ ವ್ಯವಸ್ಥೆ ಮಾಡಲಾಗುತ್ತದೆ. ಆದ್ದರಿಂದ ಅಮ್ಯೂಸ್‌ಮೆಂಟ್ ಪಾರ್ಕ್ ವ್ಯವಸ್ಥೆಗೆ ಅನ್ವಯಿಸುವುದಿಲ್ಲ ಎಂದಿದ್ದರು. ಆದರೆ ಈಗ ಕಾಣಿಸಿಕೊಂಡಿರುವ ಫ್ಲೆಕ್ಸ್ ಬೇರೆಯದೇ ಕಥೆ ಹೇಳುತ್ತದೆ ಎಂದರು.