Advertisement

ಆರಂಭಗೊಳ್ಳದ ಸರಕಾರಿ ಬೆಂಬಲ ಬೆಲೆ ಭತ್ತ ಖರೀದಿ ಕೇಂದ್ರ

01:30 AM Dec 08, 2019 | Team Udayavani |

ಕೋಟ: ಮುಂಗಾರು ಕಟಾವು ಪೂರ್ಣಗೊಂಡು ಹಿಂಗಾರು ಬಿತ್ತನೆ ಆರಂಭವಾದರೂ ಸರಕಾರದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಕೇಂದ್ರಗಳಿನ್ನೂ ಆರಂಭವಾಗಿಲ್ಲ. ಸಾಮಾನ್ಯ ವರ್ಗದ ಭತ್ತ ಕ್ವಿಂಟಾಲ್‌ಗೆ 1,815 ರೂ. ಮತ್ತು ಎ ಗ್ರೇಡ್‌ಗೆ 1,835 ರೂ. ಬೆಂಬಲ ಬೆಲೆಯನ್ನು ಸರಕಾರ ನಿಗದಿಪಡಿಸಿದೆ. ಭತ್ತವನ್ನು ಖಾಸಗಿ ಮಿಲ್‌ಗ‌ಳು ಕಡಿಮೆ ಬೆಲೆಗೆ ಖರೀದಿಸುತ್ತವೆ. ಆದ್ದರಿಂದ ಜಿಲ್ಲೆಯ ಹಲವು ಕಡೆ ಸರಕಾರವೇ ಬೆಂಬಲ ಬೆಲೆಯ ಖರೀದಿ ಕೇಂದ್ರ ಸ್ಥಾಪಿಸಿ ಬೆಲೆ ಸ್ಥಿರವಾಗುವಂತೆ ಮಾಡಬೇಕು ಎನ್ನುವುದು ರೈತರ ಬೇಡಿಕೆ. ಆದರಂತೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕೃಷಿ ಮಾರುಕಟ್ಟೆ, ಜಿಲ್ಲಾ ಆಹಾರ ನಿಗಮದ ಮೂಲಕ ಬೆಂಬಲ ಬೆಲೆ ಕೇಂದ್ರ ತೆರೆಯುವಂತೆ ಸರಕಾರಕ್ಕೆ ತಿಂಗಳ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಅದಿನ್ನೂ ಈಡೇರಿಲ್ಲ.

Advertisement

ಊಟಕ್ಕಿಲ್ಲದ ಉಪ್ಪಿನಕಾಯಿ
ಪ್ರತಿ ತಾಲೂಕಿನಲ್ಲೂ ಗೋದಾಮು ಸ್ಥಾಪಿಸಿ ಖರೀದಿ ಕೇಂದ್ರ ತೆರೆಯಬೇಕು. ಆಗ ಖಾಸಗಿಯವರು ಬೆಲೆ ಹೆಚ್ಚಳ ಮಾಡುತ್ತಾರೆ. ಇದರಿಂದ ಪ್ರಯೋಜನ ವಾಗುತ್ತದೆ ಎನ್ನುವುದು ರೈತರ ವಾದ. ಆದರೆ ಈ ಬಗ್ಗೆ ಸರಕಾರ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಹೆಚ್ಚಿನ ರೈತರು ಫಸಲನ್ನು ಈಗಾಗಲೇ ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಮುಂದೆ ಸರಕಾರ ಬೆಂಬಲ ಬೆಲೆ ಕೇಂದ್ರ ಆರಂಭಿಸಿದರೂ ಅದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ ರೈತರಿಂದ ಬೇಡಿಕೆ ಇಲ್ಲದ ಕಾರಣ ಮನವಿ ಸಲ್ಲಿಕೆಯಾಗಿರಲಿಲ್ಲ.

ಕರಾವಳಿ ರೈತರ ಮೇಲೆ ಯಾಕಿಷ್ಟು ತಾತ್ಸಾರ?
ಕರಾವಳಿಯ ರೈತರ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ. ಇಲ್ಲಿಯ ಜನಪ್ರತಿನಿಧಿಗಳು ರೈತರ ಧ್ವನಿಯನ್ನು ಸರಕಾರಕ್ಕೆ ಮುಟ್ಟಿಸುವಲ್ಲಿ ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ, ವಾರಾಹಿ ಮುಂತಾದ ರೈತಪರ ಯೋಜನೆಗಳು ಹಳ್ಳ ಹಿಡಿದಿವೆ. ಈ ಬಾರಿ ಜಿಲ್ಲಾಡಳಿತವು ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಸರಕಾರ ಗಂಭೀರವಾಗಿ ಪರಿಗಣಿಸದಿರುವುದು ದುರಂತ ಎಂದು ಕೋಟ ಭತ್ತ ಬೇಸಾಯಗಾರ ಮೋಹನ್‌ ಕುಮಾರ್‌ ಹೇಳುತ್ತಾರೆ.

ನಿಯಮದಂತೆ ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಶೀಘ್ರ ಅನುಮತಿ ಸಿಗುವ ಭರವಸೆ ಇದ್ದು, ಅನಂತರ ಮುಂದಿನ ಪ್ರಕ್ರಿಯೆ ನಡೆಯಲಿದೆ.
– ಭಾರತಿ, ಎಪಿಎಂಸಿ ಕಾರ್ಯದರ್ಶಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next