ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಿಸಿ, ಕಚೇರಿಗಳ ಉದ್ಘಾಟನೆಯಾಗಿ ವರ್ಷ ಕಳೆದಿದೆ. ಆದರೆ, ಇದುವರೆಗೂ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿ ಆರಂಭಗೊಂಡಿಲ್ಲ. ತಹಶೀಲ್ದಾರ್ ಕಚೇರಿ ಬಿಟ್ಟರೇ ಬೇರೆ ಇಲಾಖೆಗಳ ಆರಂಭದ ಬಗ್ಗೆ ಮಾಹಿತಿಯೇ ಸಿಗುತ್ತಿಲ್ಲ.
ಇನ್ನೂ ತೆರೆದಿಲ್ಲ ಹಲವು ಕಚೇರಿ: ತಾಲೂಕಿನ ನಾನಾ ಕಚೇರಿಗಳ ಆರಂಭಕ್ಕೆ ಕಚೇರಿ ಗುರುತಿಸಲಾಗಿದೆ. ಗುಳೇದಗುಡ್ಡದಲ್ಲಿ ತಹಶೀಲ್ದಾರ್ ಕಚೇರಿ ಆರಂಭಗೊಂಡು ಹಲವು ದಿನ ಕಳೆದರೂ ಇದುವರೆಗೂ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಕಚೇರಿ ಕಾರ್ಯಾರಂಭ ಮಾಡಿಲ್ಲ. ಇದರಿಂದ ನಾಗರಿಕರು ಗುಳೇದಗುಡ್ಡ ತಾಲೂಕಾಗಿದ್ದರೂ ಬಾದಾಮಿಗೆ ಅಲೆಯುವುದು ತಪ್ಪಿಲ್ಲ. ತಹಶೀಲ್ದಾರ್ ಕಚೇರಿ ಬಿಟ್ಟರೇ ಬೇರೆ ಇಲಾಖೆಗಳ ಕೆಲಸ ಎಲ್ಲಿ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಆಯಾ ಇಲಾಖೆಗಳ ಕೆಲಸ: ಕಂದಾಯ ಇಲಾಖೆಯಿಂದ ತಹಶೀಲ್ದಾರ್ ಕಚೇರಿ ಆರಂಭಿಸಿ, ಬಾದಾಮಿ ತಹಶೀಲ್ದಾರ್ ಅವರನ್ನು ಪ್ರಭಾರಿಯನ್ನಾಗಿ ನೇಮಿಸಲಾಗಿದೆ. ಇನ್ನೂ ಆಯಾ ಇಲಾಖೆಯವರು ಸರಕಾರದಿಂದ ಅನುಮತಿ ಪಡೆದುಕೊಂಡಿವೆ. ಹುದ್ದೆಗಳ ನೇಮಕ ಮಾಡಿ, ಅನುದಾನ ಕೊಟ್ಟು ಆಯಾ ಇಲಾಖೆಗಳ ತಾಲೂಕು ಕಚೇರಿ ಆರಂಭಿಸಬೇಕು ಎಂಬುದು ಉಪವಿಭಾಗಾಧಿಕಾರಿಗಳ ಮಾತು.
ಅಲೆದಾಟ ತಪ್ಪಿಲ್ಲ: ಗುಳೇದಗುಡ್ಡ ನೂತನ ತಾಲೂಕಿನಲ್ಲಿ ತಾಲೂಕಾ ಅಧಿಕಾರಿಗಳು ಮೂರು ದಿನಕ್ಕೊಮ್ಮೆ ಇಲ್ಲಿಗೆ ಬಂದು ಕೆಲಸ ಮಾಡಬೇಕು ಎಂದು ಸರಕಾರ ಹೇಳಿದರೂ ಆದೇಶಕ್ಕೆ ಮಾತ್ರ ಕಿವಿಗೊಡುತ್ತಿಲ್ಲ. ತಹಶೀಲ್ದಾರ್ ಕಚೇರಿ ಒಂದು ಕಡೆ, ಭೂಮಿ ಕೇಂದ್ರ ಇನ್ನೊಂದು ಕಡೆ ಇರುವುದರಿಂದ ನಿತ್ಯವು ಸುತ್ತಮುತ್ತಲಿನ ರೈತರು ಅಲೆಯುವಂತಾಗಿದೆ. ಜಾತಿ ಆದಾಯ ಸೇರಿದಂತೆ ಸರಕಾರಿ ಸೇವೆಗಳ ಪಡೆಯಲು ಅರ್ಜಿ ಸಲ್ಲಿಸಲು ಸರದಿ ಸಾಲಿನಲ್ಲಿ ನಿಲ್ಲುವ ಜನರಿಗೆ ನೆರಳಿನ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಪಟ್ಟಣ ತಾಲೂಕು ಕೇಂದ್ರವಾಗಿ ಆರಂಭಗೊಂಡರೂ ಇದುವರೆಗೂ ಸರಿಯಾಗಿ ಕಚೇರಿ ಆರಂಭಗೊಂಡಿಲ್ಲ. ಇದರಿಂದ ಸೌಲಭ್ಯ ಪಡೆದುಕೊಳ್ಳುವ ಕುರಿತು ಗೊಂದಲ ಸಾರ್ವಜನಿಕರಿಗೆ ಎದುರಾಗಿದೆ. ಶೀಘ್ರ ಗುಳೇದಗುಡ್ಡದಲ್ಲಿಯೇ ಎಲ್ಲ ತಾಲೂಕು ಕಚೇರಿ ಆರಂಭಗೊಂಡು ಗುಳೇದಗುಡ್ಡ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರ ಅಲೆದಾಟ ತಪ್ಪಿಸಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹ.
ಗುಳೇದಗುಡ್ಡ ನೂತನ ತಾಲೂಕು ಕೇಂದ್ರವಾದರೂ ಅಧಿಕಾರಿಗಳು ಬೇರೆ ತಾಲೂಕಿನಲ್ಲಿ ಈ ತಾಲೂಕಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಇನ್ನೂ ತಾಲೂಕಿಗೆ ಸ್ವತಂತ್ರ ಸಿಕ್ಕಿಲ್ಲವೇ. ಅಧಿಕಾರಿಗಳು ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಾರೆ. ಜಿಲ್ಲಾಧಿಕಾರಿಗಳು ಗಮನ ನೀಡುತ್ತಿಲ್ಲ.
•ಆಸಂಗೆಪ್ಪ ನಕ್ಕರಗುಂದಿ, ಜಿಪಂ ಸದಸ್ಯ ಹಂಸನೂರ
ಕಂದಾಯ ಇಲಾಖೆಯಿಂದ ತಹಶೀಲ್ದಾರ್ ಕಚೇರಿ ಆರಂಭಿಸಿ, ಬಾದಾಮಿ ತಹಶೀಲ್ದಾರ್ ಅವರನ್ನು ಡೆಪ್ಯುಟೆಶನ್ (ಪ್ರಭಾರಿ) ಮೇಲೆ ನೇಮಿಸಲಾಗಿದೆ. ಇನ್ನೂ ಆಯಾ ಇಲಾಖೆಯವರು ಸರಕಾರದಿಂದ ಅನುಮತಿ ಪಡೆದುಕೊಂಡು ಕಚೇರಿ ಆರಂಭಿಸಬೇಕಿದೆ.
•ಎಚ್.ಜಯಾ, ಉಪವಿಭಾಗಾಧಿಕಾರಿ, ಬಾಗಲಕೋಟೆ
ಮಲ್ಲಿಕಾರ್ಜುನ ಕಲಕೇರಿ