ಮಡಿಕೇರಿ: ನಿರಾಶ್ರಿತರ ಕೇಂದ್ರದಲ್ಲಿರುವ ಸಂತ್ರಸ್ತರ ಮಾನಸಿಕ ಒತ್ತಡ ಕಡಿಮೆ ಮಾಡಿ ಧೈರ್ಯ ತುಂಬಲು ಮೈಸೂರು ಮತ್ತು ಬೆಂಗಳೂರಿನ 12 ಮಂದಿ ಆಯುರ್ವೇದ ವೈದ್ಯರ ತಂಡ ಔಷಧ ರಹಿತ “ಪ್ರಾಣ ಚೈತನ್ಯ ಚಿಕಿತ್ಸೆ’ ಆರಂಭಿಸಿದೆ.
ನಿರಾಶ್ರಿತರಲ್ಲಿ ಮಾನಸಿಕವಾಗಿ ಕುಗ್ಗಿದವರಿಗೆ ಪ್ರಾಣ ಚೈತನ್ಯ ಚಿಕಿತ್ಸಾ ಕ್ರಮದ ಮೂಲಕ ಮನೋಬಲ ವೃದಿಟಛಿಸುವ ಕೆಲಸ ಮಾಡುತ್ತಿದ್ದಾರೆ.ನಮ್ಮೊಳಗಿನ ಶಕ್ತಿ ಹೆಚ್ಚಿಸಲು ಪ್ರಾಣ ಚಿಕಿತ್ಸಾ ಕ್ರಮ ಅತಿ ಅವಶ್ಯಕ. ಇಲ್ಲಿ ಯಾರಿಗೂ ಒತ್ತಡ ಹೇರುವುದಿಲ್ಲ.
ಸ್ವಯಂ ಪ್ರೇರಿತರಾಗಿ ಯಾರು ಬೇಕಾದರೂ ಈ ಚಿಕಿತ್ಸೆ ಪಡೆಯಬಹುದು. ಚಿಕಿತ್ಸೆಗೆ ಬೇಕಾದ ಎಲ್ಲ ಪರಿಕರ ನಾವೇ ತಂದಿದ್ದೇವೆ ಎಂದು ಯೋಗವಿದ್ಯಾ ಪ್ರಾಣಿಕ್ ಹೀಲಿಂಗ್ ಫೌಂಡೇಷನ್‌ನ ಟ್ರಸ್ಟಿ ವೈಭವ್ ಮಾಹಿತಿ ನೀಡಿದರು.
ಮೈತ್ರಿ ಸಭಾಂಗಣ ಹಾಗೂ ಬ್ರಾಹ್ಮಣರ ಸಭಾದ ಶಿಬಿರದಲ್ಲಿ ಇರುವ 100ಕ್ಕೂ ಅಧಿಕ ನಿರಾಶ್ರಿತರಿಗೆ ಈ ಚಿಕಿತ್ಸೆ ನೀಡಿದ್ದೇವೆ. ಎಲ್ಲರೂ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಚಿಕಿತ್ಸೆಗೆ ಯಾರು ಬೇಕಾದರೂ ಒಳಪಡಬಹುದು. 20 ನಿಮಿಷ ಶಾಂತವಾಗಿ ಕುಳಿತುಕೊಳ್ಳುವುದು ಮುಖ್ಯ ಎಂದು ವಿವರಿಸಿದರು. ಮನೆ, ಉದ್ಯೋಗ ಕಳೆದುಕೊಂಡು ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ಈ ಚಿಕಿತ್ಸೆ ಮನಃಶಾಂತಿ ಒದಗಿಸಿದೆ. ಅಲ್ಲದೇ ಮನಸ್ಸು ಹಗುರವಾದಂತ ಅನುಭವವಾಗಿದೆ ಎಂದು ಚಿಕಿತ್ಸೆ ಪಡೆದ ಹೆಬ್ಬೆಟ್ಟುಗೇರಿ ನಿವಾಸಿ ಸರೋಜಾ ಹೇಳಿದರು.
ಶಿಬಿರದಲ್ಲೇ ಮಿನಿ ಮೆಡಿಕಲ್: ನಿರಾಶ್ರಿತರ ಆರೋಗ್ಯಕ್ಕೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ಮಡಿಕೇರಿ ನಗರ, ಸುಂಟಿಕೊಪ್ಪ, ಸೋಮವಾರಪೇಟೆ ಮೊದಲಾದ ಕಡೆಗಳಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಮಿನಿ ಮೆಡಿಕಲ್ ಸ್ಟೋರ್ ತೆರೆಯಲಾಗಿದೆ. ಜ್ವರ, ಕೆಮ್ಮು, ಶೀತ, ಕಾಲು ನೋವು, ಸೊಂಟನೋವು, ಗಂಟಲು ನೋವು ಸೇರಿ ಎಲ್ಲ ರೀತಿಯ ನೋವಿಗೆ ಇಲ್ಲಿಯೇ ಮಾತ್ರೆ, ಮುಲಾಮು ದೊರೆಯಲಿದೆ ಎಂದು ವೈದ್ಯಾಧಿಕಾರಿ ಡಾ.ರಾಜೇಶ್ ತಿಳಿಸಿದರು.