ನವದೆಹಲಿ:ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಪತ್ನಿ ಲೂಯಿಸೆ ಖುರ್ಷಿದ್ ವಿರುದ್ಧ ಸ್ಥಳೀಯ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಅನ್ನು ಜಾರಿಗೊಳಿಸಿದೆ.
ಇದನ್ನೂ ಓದಿ:ಮಹಾರಾಷ್ಟ್ರ ಅಂಕಿಅಂಶ ಪರಿಷ್ಕರಣೆ: 24ಗಂಟೆಯಲ್ಲಿ 42 ಸಾವಿರ ಕೋವಿಡ್ ಪ್ರಕರಣ, 3,998 ಸಾವು!
ಲೂಯಿಸೆ ಖುರ್ಷಿದ್ ನಡೆಸುತ್ತಿದ್ದ ಡಾ.ಜಾಕೀರ್ ಹುಸೈನ್ ಮೆಮೊರಿಯಲ್ ಟ್ರಸ್ಟ್ ಗೆ ಕೇಂದ್ರ ಸರ್ಕಾರದಿಂದ ಬಂದಿದ್ದ 71 ಲಕ್ಷ ರೂಪಾಯಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿತ್ತು ಎಂದು ವರದಿ ತಿಳಿಸಿದೆ.
ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ತ್ಯಾಗಿ ಜಾಮೀನು ಅವರು ಲೂಯಿಸೆ ಖುರ್ಷಿದ್ ಹಾಗೂ ಟ್ರಸ್ಟ್ ಕಾರ್ಯದರ್ಶಿ ಅಥಾರ್ ಫಾರೂಖಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ, ಆಗಸ್ಟ್ 16ಕ್ಕೆ ವಿಚಾರಣೆಯನ್ನು ಮುಂದೂಡಿರುವುದಾಗಿ ವರದಿ ಹೇಳಿದೆ.
2010ರ ಮಾರ್ಚ್ ನಲ್ಲಿ ಲೂಯಿಸೆ ಅವರ ಟ್ರಸ್ಟ್, ಕೇಂದ್ರ ಸರ್ಕಾರದಿಂದ 71 ಲಕ್ಷ ರೂಪಾಯಿ ಅನುದಾನ ಪಡೆದಿತ್ತು. ಈ ಹಣ ಉತ್ತರಪ್ರದೇಶದ 17 ಜಿಲ್ಲೆಗಳಲ್ಲಿ ಇರುವ ವಿಕಲಚೇತನ ವ್ಯಕ್ತಿಗಳಿಗೆ ಶ್ರವಣ ಸಾಧನ, ಗಾಲಿ ಕುರ್ಚಿಗಳು ಹಾಗೂ ತ್ರಿಚಕ್ರ ಸೈಕಲ್ ಗಳನ್ನು ವಿತರಿಸಲು ಈ ಹಣ ಬಳಕೆ ಮಾಡಬೇಕಾಗಿತ್ತು.
2012ರಲ್ಲಿ ಸಲ್ಮಾನ್ ಖುರ್ಷಿದ್ ಕೇಂದ್ರ ಸಚಿವರಾದ ಮೇಲೆ ಈ ಆರೋಪ ಕೇಳಿಬಂದಿತ್ತು. ಆದರೆ ಸಲ್ಮಾನ್ ಖುರ್ಷಿದ್ ಇದನ್ನು ಅಲ್ಲಗಳೆದಿದ್ದರು. ಪ್ರಕರಣದ ಬಗ್ಗೆ 2017ರಲ್ಲಿ ತನಿಖೆ ನಡೆಸಿದ್ದ ಇನ್ಸ್ ಪೆಕ್ಟರ್ ರಾಮ್ ಶಂಕರ್ ಯಾದವ್ ಲೂಯಿಸೆ ಮತ್ತು ಫಾರೂಖಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. 2019ರ ಡಿಸೆಂಬರ್ ನಲ್ಲಿ ಕೋರ್ಟ್ ಗೆ ಆರೋಪಪಟ್ಟಿ ಸಲ್ಲಿಸಿದ್ದರು.